
ಕೋಲಾರ: ಬಯಲುಸೀಮೆ ಜಿಲ್ಲೆಗಳಿಗೆ ನದಿ ನೀರಾವರಿ ಯೋಜನೆ ಕಲ್ಪಿಸುವ ಹೆಸರಲ್ಲಿ ಸರ್ಕಾರಗಳು ಸುಮಾರು ₹ 30 ಸಾವಿರ ಕೋಟಿ ದುರ್ಬಳಿಕೆ ಮಾಡಿವೆ. ಜನರ ತೆರಿಗೆ ಹಣವನ್ನು ವ್ಯಯಿಸುತ್ತಿವೆ. ಆದರೆ, ಈ ವರೆಗೆ ಒಂದು ಬೊಗಸೆಯೂ ನದಿ ನೀರು ಕೊಟ್ಟಿಲ್ಲ. ಯಾವುದೇ ಒಂದು ಯೋಜನೆ ಯಶಸ್ವಿಯಾಗಿ ಕಾರ್ಯಗತಗೊಂಡಿಲ್ಲ ಎಂದು ಶಾಶ್ವತ ನೀರಾವರಿ ಹೋರಾಟ ವೇದಿಕೆ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬಯಲು ಸೀಮೆ ಜಿಲ್ಲೆಗಳು ಎಂದು ಹಣೆಪಟ್ಟಿ ಕಟ್ಟಿಕೊಂಡಿವೆ. 30 ವರ್ಷಗಳಿಂದ ನೀರಿನ ಸಾಮಾಜಿಕ ನ್ಯಾಯ ಪಡೆಯುವಲ್ಲಿ ಈ ಮೂರು ಜಿಲ್ಲೆಗಳು ವಿಫಲವಾಗಿವೆ’ ಎಂದರು.
ಎತ್ತಿನಹೊಳೆಗೆ ₹ 24 ಸಾವಿರ ಕೋಟಿ ಖರ್ಚು ಮಾಡಿದ್ದು, ಒಂದು ಹನಿ ನೀರು ಕೂಡ ಬರಲಿಲ್ಲ. ಆದರೆ, ರಾಜಕಾರಣಿಗಳ, ಗುತ್ತಿಗೆದಾರರ ಖಜಾನೆ ಮಾತ್ರ ತುಂಬಿದೆ. ಅವೈಜ್ಞಾನಿಕ ಯೋಜನೆಗಳ ಬಗ್ಗೆ ನೀರಾವರಿ ತಜ್ಞರು ಸಲಹೆಗಳು ನೀಡಿದರೂ ಕಮಿಷನ್ ಆಸೆಗೆ ಗುತ್ತಿಗೆದಾರರು ನೀಡಿದ ಸಲಹೆಗಳಿಗೆ ಮಣೆ ಹಾಕಿದೆ ಎಂದು ಆರೋಪಿಸಿದರು.
ಇದಕ್ಕೆಲ್ಲಾ ಜನಪ್ರತಿಧಿಗಳು ನಿರ್ಲಕ್ಷ್ಯವೇ ಕಾರಣ. ಯಾರೊಬ್ಬರೂ ಬದ್ಧತೆ ತೋರಿಸಿಲ್ಲ. ಪ್ರಜ್ಞಾವಂತರ ಮೌನ ಕೂಡ ನೀರು ಸಿಗದಿರಲು ಕಾರಣ. ನೀರಿಲ್ಲದೆ ಹಿಂದಿನ 30 ವರ್ಷಗಳು ಕಳೆದು ಹೋದವು. ಇದೇ ರೀತಿಯ ನಿರ್ಲಕ್ಷ್ಯ, ಮೌನ ಮುಂದುವರಿದರೆ ಮುಂದಿನ 30 ವರ್ಷ ಕಳೆದರೂ ನೀರು ಸಿಗಲ್ಲ ಎಂದು ಎಚ್ಚರಿಕೆ ನೀಡಿದರು.
ಕ್ರಾಂತಿಕಾರಕ ಹೋರಾಟ ಕಟ್ಟಲು ನಾವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಕ್ರಿಯಾ ಸಮಿತಿ ಅಧ್ಯಕ್ಷರೂ ಆಗಿರುವ ವಿ.ಗೋಪಾಲಗೌಡ ನೇತೃತ್ವದಲ್ಲಿ ಜಲಾಗ್ರಹ ಸಮಾವೇಶ ನಡೆಸುತ್ತಿದ್ದೇವೆ. ತೆಲಂಗಾಣ ರಾಜ್ಯಕ್ಕಾಗಿ ನಡೆದ ಹೋರಾಟದ ಮಾದರಿಯಲ್ಲಿ ಜಂಟಿ ಕ್ರಿಯಾ ಸಮಿತಿ ರೂಪಿಸಿಕೊಂಡು ಹೋರಾಟಕ್ಕೆ ಇಳಿಯುತ್ತಿದ್ದೇವೆ ಎಂದರು.
ಜ.17ರಂದು ನಡೆಯಲಿರುವ ಕೋಲಾರ ಸಮಾವೇಶದಲ್ಲಿ ಮುಂದಿನ ಹೋರಾಟ ಕುರಿತು ಮಹತ್ತರ ರ್ನಿಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗುತ್ತಿಗೆದಾರರ ಮಾತು ಕೇಳಿಕೊಂಡು ಬಯಲುಸೀಮೆ ಜಿಲ್ಲೆಗಳಿಗೆ ಅರೆ ಸಂಸ್ಕರಿತ ನೀರು ಹರಿಸುತ್ತಿದ್ದಾರೆ. ಮುಂಬರುವ ಬಜೆಟ್‍ನಲ್ಲಿ ಕೆ.ಸಿ.ವ್ಯಾಲಿ, ಎಚ್.ಎನ್.ವ್ಯಾಲಿ ಯೋಜನೆಯ ಮೂರನೇ ಹಂತದ ಶುದ್ಧೀಕರಣಕ್ಕೆ ಅನುದಾನ ಮೀಸಲಿರಿಸಬೇಕು. ಆಂಧ್ರದ ಗಡಿ ಭಾಗದವರೆಗೆ ಕೃಷ್ಣಾ ನದಿ ನೀರು ಬಂದಿದ್ದು, ಇದನ್ನು ಜಿಲ್ಲೆಗೆ ಹರಿಸಿಕೊಳ್ಳುವ ಪ್ರಯತ್ನ ಜನಪ್ರತಿನಿಧಿಗಳಿಂದ ಆಗಬೇಕು ಎಂದು ಆಗ್ರಹಿಸಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಡಿ.ಕೆ.ರಮೇಶ್ ಮಾತನಾಡಿ, ‘ಬಯಲು ಸೀಮೆ ಜಿಲ್ಲೆಗಳಲ್ಲಿ ಲಭ್ಯವಾಗುತ್ತಿರುವ ನೀರಿನಲ್ಲಿ ಅರ್ಸೆನಿಕ್, ಯುರೇನಿಯಂ, ಫ್ಲೋರೈಡ್‌ನಂಥ ಅಪಾಯಕಾರಿ ಅಂಶಗಳು ಮಿಶ್ರಣವಾಗಿರುವುದು ಸಂಶೋಧನೆಗಳಿಂದ ಖಚಿತವಾಗಿದೆ. ನೀರು ಸೇವನೆ ಮಾಡುತ್ತಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದರೂ ಸರಕಾರಗಳು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
ಸಂಚಾಲಕ ಹೊಳಲಿ ಪ್ರಕಾಶ್ ಮಾತನಾಡಿ, ‘ರಾಜ್ಯದಲ್ಲಿ ಧರ್ಮ, ಜಾತಿಗೊಂದು ಮಠಗಳಿವೆ. ಮಠಾಧೀಶರು ಸರ್ಕಾರಗಳ ಮೇಲೆ ಒತ್ತಡ ತಂದು ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಂದಾದ ಉದಾಹರಣೆಯಿಲ್ಲ. ಇನ್ನಾದರೂ ನೀರಿನ ಗಂಭೀರ ಸಮಸ್ಯೆಯನ್ನು ಅರಿತು ಹೋರಾಟಕ್ಕೆ ಬೆಂಬಲ ನೀಡಬೇಕು. ಇಲ್ಲದಿದ್ದರೆ ಗ್ರಾಮಗಳಿಗೆ ಬಂದಾಗ ಒಳಕ್ಕೆ ಬಿಟ್ಟುಕೊಳ್ಳಬೇಡಿ’ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಸಂಚಾಲಕರಾದ ವಿ.ಕೆ.ರಾಜೇಶ್, ಅಬ್ಬಣಿ ಶಿವಪ್ಪ, ಸಿ.ವಿ.ನಾಗರಾಜ್, ಕೆ.ಸಿ.ಸಂತೋಷ್, ಚಂಬೇ ರಾಜೇಶ್, ಸಲಾವುದ್ದೀನ್ ಬಾಬು, ರಂಗಸ್ವಾಮಿ, ಶ್ರೀನಾಥ್, ಕಲ್ವಮಂಜಲಿ ರಾಮು ಶಿವಣ್ಣ, ಕುರುಬರಪೇಟೆ ವೆಂಕಟೇಶ್, ದಲಿತ್ ನಾರಾಯಣಸ್ವಾಮಿ ಇದ್ದರು.
ಜ.17ಕ್ಕೆ ಜಲಾಗ್ರಹ ಸಮಾವೇಶ
ಬಯಲುಸೀಮೆ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರಾವರಿ ಯೋಜನೆಗಾಗಿ ಒತ್ತಾಯಿಸಿ ಜನವರಿ 17ರಂದು ಬೆಳಿಗ್ಗೆ 11.30ಕ್ಕೆ ನಗರದಲ್ಲಿ ಜಲಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಆಂಜನೇಯರೆಡ್ಡಿ ಹೇಳಿದರು. ನೀರಿಗಾಗಿ ಒತ್ತಾಯಿಸಿ ನಡೆಯುತ್ತಿರುವ ಸಮಾವೇಶದಲ್ಲಿ ಜಿಲ್ಲೆಯ ಪ್ರತಿ ಮನೆಯಿಂದ ಒಬ್ಬರು ಪಾಲ್ಗೊಂಡು ಹಕ್ಕು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕೋರಿದರು. ಸಮಾವೇಶದ ಭಾಗವಾಗಿ ಪ್ರತಿ ತಾಲ್ಲೂಕುವಾರು ಪೂರ್ವಭಾವಿ ಸಭೆ ನಡೆಸಿ ವಿವಿಧ ಸಂಘಟನೆಗಳ ಮುಖಂಡರನ್ನು ಒಂದೇ ವೇದಿಕೆಗೆ ತಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಕೆಲಸ ಆಗಬೇಕಿದೆ. ಮೊದಲ ಸಭೆ ಡಿ.31ರಂದು ಮಾಲೂರಿನಲ್ಲಿ ನಡೆಯಲಿದೆ ಎಂದರು.
ಅರೆ ಸಂಸ್ಕರಿಸಿದ ನೀರು ಬೇಡವೆಂದ ಶಾಸಕರು
ಈಗಾಗಲೇ ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಲಾಗ್ರಹ ಸಮಾವೇಶ ನಡೆದಿದೆ. ಅದಕ್ಕೆ ಪೂರಕವೆಂಬಂತೆ ಬೆಳಗಾವಿಯಲ್ಲಿ ಈಚೆಗೆ ನಡೆದ ಅಧಿವೇಶನದಲ್ಲಿ ನೆಲಮಂಗಲದ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸ್ ಹಾಗೂ ದೊಡ್ಡಬಳ್ಳಾಪುರದ ಬಿಜೆಪಿ ಶಾಸಕ ಧೀರಜ್ ಮುನಿರಾಜ್ ಮಾತನಾಡಿ ತಮ್ಮ ಕ್ಷೇತ್ರಕ್ಕೆ ಅರೆ ಸಂಸ್ಕರಿತ ನೀರು ಬೇಡವೆಂದಿದ್ದಾರೆ. ಇದು ನಮ್ಮ ಸಮಾವೇಶಕ್ಕೆ ಹೋರಾಟಕ್ಕೆ ಸಿಕ್ಕ ಯಶಸ್ಸು. ಆ ಇಬ್ಬರೂ ಶಾಸಕರನ್ನು ನಾವು ಅಭಿನಂದಿಸುತ್ತೇವೆ ಎಂದು ಆಂಜನೇಯರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.