ADVERTISEMENT

ಕೋಲಾರ | ಹಲಸು ಬಯಲು ಸೀಮೆಯ ನವ ಕಲ್ಪವೃಕ್ಷ

ಕಾರ್ಯಾಗಾರದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 15:47 IST
Last Updated 24 ಜುಲೈ 2020, 15:47 IST
‘ಒಣ ಪ್ರದೇಶ ರೈತರ ಆದಾಯ ಹೆಚ್ಚಿಸುವಲ್ಲಿ ಭವಿಷ್ಯದ ನವ ಕಲ್ಪವೃಕ್ಷ ಹಲಸು’ ವಿಷಯ ಕುರಿತು ಕೋಲಾರದಲ್ಲಿ ಶುಕ್ರವಾರ ನಡೆದ ಆನ್‌ಲೈನ್‌ ಕಾರ್ಯಾಗಾರದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್ ಪಾಲ್ಗೊಂಡರು.
‘ಒಣ ಪ್ರದೇಶ ರೈತರ ಆದಾಯ ಹೆಚ್ಚಿಸುವಲ್ಲಿ ಭವಿಷ್ಯದ ನವ ಕಲ್ಪವೃಕ್ಷ ಹಲಸು’ ವಿಷಯ ಕುರಿತು ಕೋಲಾರದಲ್ಲಿ ಶುಕ್ರವಾರ ನಡೆದ ಆನ್‌ಲೈನ್‌ ಕಾರ್ಯಾಗಾರದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್ ಪಾಲ್ಗೊಂಡರು.   

ಕೋಲಾರ: ‘ಬಹುಪಯೋಗಿ ಹಲಸು ಬಯಲು ಸೀಮೆಯ ರೈತರ ಆದಾಯ ಹೆಚ್ಚಿಸುವಲ್ಲಿ ನವ ಕಲ್ಪವೃಕ್ಷ ಬೆಳೆಯಾಗಿದೆ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್ ಅಭಿಪ್ರಾಯಪಟ್ಟರು.

ತೋಟಗಾರಿಕೆ ಮಹಾವಿದ್ಯಾಲಯವು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಒಣ ಪ್ರದೇಶ ರೈತರ ಆದಾಯ ಹೆಚ್ಚಿಸುವಲ್ಲಿ ಭವಿಷ್ಯದ ನವ ಕಲ್ಪವೃಕ್ಷ ಹಲಸು’ ವಿಷಯ ಕುರಿತ ಆನ್‌ಲೈನ್‌ ಕಾರ್ಯಾಗಾರದಲ್ಲಿ ಮಾತನಾಡಿ, ‘ಹಲಸಿನಲ್ಲಿ ಅಗಾಧ ಪೋಷಕಾಂಶಗಳಿದ್ದು, ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ’ ಎಂದರು.

‘ಸಸ್ಯಾಹಾರಿ, ಶಾಖಾಹಾರಿ ಅಡುಗೆ ಹಾಗೂ ಔಷಧಗಳ ತಯಾರಿಕೆಯಲ್ಲಿ ಹಲಸು ಬಳಕೆಯಾಗುತ್ತಿದೆ. ಹಲಸಿನ ಎಲೆ ಮತ್ತು ಬೇರಿನಿಂದ ಹಲವು ಔಷಧ ತಯಾರು ಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಹಲಸು ಹಣ್ಣಿನ ಸಂಸ್ಕರಣೆಗೆ ಬೇಡಿಕೆ ಹೆಚ್ಚಿದೆ. ಹಲಸಿನ ಮರದಿಂದ ಹೆಚ್ಚಿನ ಪ್ರಮಾಣದಲ್ಲಿ ಪೀಠೋಪಕರಣ ತಯಾರಿಸಲಾಗುತ್ತಿದೆ. ಇಂತಹ ಬೆಳೆಗೆ ರೈತರು ಒಲವು ತೋರಿಸಿದರೆ ಹೆಚ್ಚು ಆದಾಯ ಗಳಿಸಬಹುದು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಹಲಸು ಬೆಳೆಯು ಐತಿಹಾಸಿಕ ಪ್ರಾಮುಖ್ಯತೆ ಹೊಂದಿದೆ. ಹಲಸು ನಮ್ಮ ನಾಡಿನ ತವರು ಬೆಳೆ. ಇದರ ಹುಟ್ಟು ಪಶ್ಚಿಮಘಟ್ಟ ಪ್ರದೇಶ. ಹಲಸಿನಲ್ಲಿ 30ಕ್ಕೂ ಹೆಚ್ಚು ಖಾದ್ಯ, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಬಹುದು. ಮಧುಮೇಹ ರೋಗಿಗಳು ಸಹ ಹಲಸು ಹಣ್ಣು ತಿನ್ನಬಹುದು. ಒಟ್ಟಾರೆ ಹಲಸು ಭವಿಷ್ಯದ ಬೆಳೆಯಾಗಿ ನವ ಕಲ್ಪವೃಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ತಿಳಿಸಿದರು.

ಹಲಸಿನ ತಾಣ: ‘ಹಲಸು ಬೆಳೆಯಲ್ಲಿ ಹಲವು ತಳಿಗಳಿದ್ದು, ಕೆಂಪು ಬಣ್ಣದ ತಳಿಗಳಿಗೆ ರೈತರು ಮಾರು ಹೋಗುತ್ತಿದ್ದಾರೆ. ಚಂದ್ರ ಹಲಸು ಮತ್ತು ಸಿದ್ದು ಹಲಸಿಗೆ ಪ್ರಾಮುಖ್ಯತೆ ಹೆಚ್ಚುತ್ತಿದೆ. ತುಮಕೂರು ಜಿಲ್ಲೆ ಗುಬ್ಬಿ ಮತ್ತು ತಿಪಟೂರು ತಾಲ್ಲೂಕುಗಳು ಕೆಂಪು ತೊಳೆ ಹಲಸಿನ ತಾಣವಾಗಿವೆ’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಹಣ್ಣು ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಕೆ.ಎಸ್.ನಾಗರಾಜ ಮಾಹಿತಿ ನೀಡಿದರು.

‘ಕರಾವಳಿ ಪ್ರದೇಶಕ್ಕಿಂತ ಒಣ ಪ್ರದೇಶದ ಹಲಸು ಹಣ್ಣಿನಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ. ಹಲಸು ರೈತರ ಪ್ರಮುಖ ಆದಾಯದ ಮೂಲವಾಗಿದೆ. ಗೇರು ಮತ್ತು ಹಲಸಿಗೆ ಉತ್ತಮ ಭವಿಷ್ಯವಿದೆ. ಮಳೆ ಅಭಾವದ ಪ್ರದೇಶದಲ್ಲೂ ಹಲಸು ಬೆಳೆಯಬಹುದು’ ಎಂದು ವಿವರಿಸಿದರು.

ಹಣ್ಣು ಕೊಳೆ ರೋಗ: ‘ಹಲಸಿನಲ್ಲಿ ಹಣ್ಣು ಕೊಳೆ ರೋಗ ಮುಖ್ಯವಾಗಿದ್ದು, ಇದು ಗಾಳಿ, ಮಳೆ ಮತ್ತು ಕೀಟಗಳಿಂದ ಹರಡುತ್ತದೆ. ರೋಗ ಬಾಧೆ ಹೆಚ್ಚಿದರೆ ಮರಗಳಿಗೆ ಶೇ 1ರ ಬೋರ್ಡೊ ಮಿಶ್ರಣ ಅಥವಾ 0.25ರಷ್ಟು ತಾಮ್ರದ ಆಕ್ಸಿಕ್ಲೋರೈಡ್ ಸಿಂಪಡಣೆ ಮಾಡಬೇಕು’ ಎಂದು ಸಸ್ಯರೋಗ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಟಿ.ಬಿ.ಮಂಜುನಾಥರೆಡ್ಡಿ ಮಾಹಿತಿ ನೀಡಿದರು.

‘ಹಲಸಿನಲ್ಲಿ ಹಣ್ಣು ಕೊರಕದ ಬಾಧೆ ಕಂಡುಬಂದರೆ ಬಾಧೆಗೊಳಗಾದ ಹಣ್ಣುಗಳನ್ನು ನಾಶಪಡಿಸಬೇಕು. ಸ್ಪರ್ಶ ಕೀಟನಾಶಕ ಬಳಸುವುದರಿಂದ ರೋಗ ಹತೋಟಿಗೆ ಬರುತ್ತದೆ’ ಎಂದು ಕೀಟಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಎನ್.ಅಶ್ವತ್ಥನಾರಾಯಣರೆಡ್ಡಿ ಹೇಳಿದರು.

ಪ್ರಗತಿಪರ ರೈತರಾದ ಧರ್ಮಲಿಂಗಂ, ಬಾಲಕೃಷ್ಣ, ಸುರೇಶ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.