ADVERTISEMENT

ಎಪಿಎಂಸಿ– ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಜೈಲ್‌ ಭರೋ ಚಳವಳಿ

ಎಪಿಎಂಸಿ– ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ಬೇಡ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 13:48 IST
Last Updated 19 ಸೆಪ್ಟೆಂಬರ್ 2020, 13:48 IST
ಎಪಿಎಂಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಶನಿವಾರ ಜೈಲ್‌ ಭರೋ ಚಳವಳಿ ನಡೆಸಿದರು.
ಎಪಿಎಂಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಶನಿವಾರ ಜೈಲ್‌ ಭರೋ ಚಳವಳಿ ನಡೆಸಿದರು.   

ಕೋಲಾರ: ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗಳನ್ನು ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶನಿವಾರ ಜೈಲ್‌ ಭರೋ ಚಳವಳಿ ನಡೆಸಿದರು.

ಜಿಲ್ಲಾ ಕಾರಾಗೃಹದ ಎದುರು ಕೋಳಿ ಹಾಗೂ ತರಕಾರಿಗಳನ್ನು ಇಟ್ಟು ಚಳವಳಿಗಾರರು, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್‌–19 ಪರಿಸ್ಥಿತಿಯ ಲಾಭ ಪಡೆದು ಸುಗ್ರೀವಾಜ್ಞೆ ಮೂಲಕ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ. ಸರ್ಕಾರಕ್ಕೆ ಜನಪರ ಕಾಳಜಿಯಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ರಿಯಲ್‌ ಎಸ್ಟೇಟ್‌ ದಂಧೆಕೋರರು, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಕರ್ನಾಟಕ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಸರ್ಕಾರದ ಈ ನಡೆ ಖಂಡನೀಯ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ADVERTISEMENT

‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಮೊಳಗಿತು. ಅದೇ ರೀತಿ ಇಂದು ಕೃಷಿ ಭೂಮಿಗೆ ಮಾರಕವಾಗುತ್ತಿರುವ ಕಾರ್ಪೊರೇಟ್‌ ಕಂಪನಿ ಮಾಲೀಕರೇ, ಬಂಡವಾಳಶಾಹಿಗಳೇ ಹಾಗೂ ಭೂಗಳ್ಳರೇ ಕೃಷಿ ಭೂಮಿ ಬಿಟ್ಟು ತೊಲಗಿ ಎಂಬ ಘೋಷಣೆ ಪ್ರತಿ ಹಳ್ಳಿಯಲ್ಲೂ ಮೊಳಗಬೇಕು’ ಎಂದು ಹೇಳಿದರು.

ಆಹಾರ ಭದ್ರತೆ: ‘ಸ್ವಾತಂತ್ರ್ಯ ನಂತರ ದೇಶದಲ್ಲಿ ಭೀಕರ ಬರಗಾಲ ಎದುರಾಗಿ ಜನ ಹಸಿವಿನಿಂದ ಮೃತಪಟ್ಟ ಸಂದರ್ಭದಲ್ಲಿ ಸರ್ಕಾರ ಪ್ರತಿ ಹಳ್ಳಿಯಲ್ಲೂ ಕೃಷಿಗೆ ಭೂಮಿ ವಿಂಗಡಣೆ ಮಾಡಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದಿತು. ಆದರೆ, ಈಗಿನ ಸರ್ಕಾರಗಳು ಕೃಷಿ ನಾಶ ಮಾಡಿ ಕಾರ್ಪೊರೇಟ್‌ ಕಂಪನಿಗಳ ಬೂಟು ನೆಕ್ಕಿ ಆಹಾರ ಭದ್ರತೆಗಾಗಿ ಹೊರ ದೇಶಗಳತ್ತ ಕೈಚಾಚುವ ಪರಿಸ್ಥಿತಿ ಸೃಷ್ಟಿಸುತ್ತಿವೆ’ ಎಂದು ಚಳವಳಿಗಾರರು ಕಿಡಿಕಾರಿದರು.

‘ಈವರೆಗೆ ಕೃಷಿಕರಿಗೆ ಮಾತ್ರ ಕೃಷಿ ಭೂಮಿ ಖರೀದಿಸಲು ಅವಕಾಶವಿತ್ತು. ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅವಕಾಶ ಸಿಕ್ಕಿದೆ. ಸರ್ಕಾರಗಳು ಬ್ರಿಟೀಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆ ಜಾರಿಗೊಳಿಸುತ್ತಿವೆ’ ಎಂದು ಆರೋಪಿಸಿದರು.

ಜೈಲಿಗೆ ಹಾಕಿ: ‘ಸರ್ಕಾರ ರೈತರನ್ನು ಬೀದಿಗೆ ತಳ್ಳಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಹಿತ ಕಾಯಲು ಹೊರಟಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಕೈಗೊಂಬೆಯಾಗಿರುವ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಣ್ಣ ಭೂ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ರೈತ ಕುಲಕ್ಕೆ ಮಾರಕವಾಗಿರುವ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯಬೇಕು. ಇದು ಸಾಧ್ಯವಾಗದಿದ್ದರೆ ರೈತರನ್ನು ಜೈಲಿಗೆ ಹಾಕಿ’ ಎಂದು ಒತ್ತಾಯಿಸಿದರು.

ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್‌, ಸದಸ್ಯರಾದ ವರಮಹಾಲಕ್ಷ್ಮಿ, ಆಂಜಿನಪ್ಪ, ಲೋಕೇಶ್, ತಿಮ್ಮಣ್ಣ, ವೆಂಕಟೇಶಪ್ಪ, ರಂಜಿತ್, ನಾರಾಯಣ, ಹರೀಶ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.