
ವೇಮಗಲ್: ‘ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರು ದೀರ್ಘ ಕಾಲ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡಿದ ಹಾಗೂ ಅಹಿಂದ ವರ್ಗಗಳ ಅಭಿವೃದ್ಧಿಗೆ ದುಡಿದ ಮಹಾನ್ ಚೇತನ’ ಎಂದು ವಿಧಾನ ಪರಿಷತ್ ಸದಸ್ಯ ವಿ.ಆರ್.ಸುದರ್ಶನ್ ಸ್ಮರಿಸಿದರು.
ಜಾಲಪ್ಪರ ಸ್ಮರಣಾರ್ಥ ಗ್ರಾಮದಲ್ಲಿ ರಾಮಶೆಟ್ಟಿ ಬಸ್ ನಿಲ್ದಾಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಜಾಲಪ್ಪರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ‘ಜಾಲಪ್ಪ ಅವರು ರಾಜ್ಯದ ಹಿರಿಯ ರಾಜಕಾರಣಿ ಹಾಗೂ ದಕ್ಷ ಆಡಳಿತಗಾರರು. ಸದಸ್ಯರಾಗಿ, ಶಾಸಕರಾಗಿ ವಿವಿಧ ಇಲಾಖೆಗಳ ಸಚಿವರಾಗಿ, 4 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಅವರು ಮಾಡಿರುವ ಸೇವೆ ಸ್ಮರಣೀಯ’ ಎಂದು ಬಣ್ಣಿಸಿದರು.
‘ಜಾಲಪ್ಪ ಅವರು ಸಹಕಾರ ಸಚಿವರಾಗಿದ್ದಾಗ ಎಪಿಎಂಸಿ ಮತ್ತು ಹಾಪ್‌ಕಾಮ್ಸ್‌ಗಳ ಸುಧಾರಣೆಗೆ ಹೆಚ್ಚಿನ ಶ್ರಮ ವಹಿಸಿದರು. ರಾಮಕೃಷ್ಣ ಹೆಗಡೆ ಅವರ ಸರ್ಕಾರವಿದ್ದಾಗ ಇಡೀ ದೇಶದಲ್ಲಿ ರೈತರ ಸಾಲದ ಬಡ್ಡಿ ಮನ್ನಾ ಮಾಡುವ ಕಲ್ಪನೆಯನ್ನು ಜಾಲಪ್ಪ ಅವರು ಮೊದಲ ಬಾರಿಗೆ ಜಾರಿಗೊಳಿಸಿದರು. ನಂತರ ಬೇರೆ ರಾಜ್ಯಗಳ ಸರ್ಕಾರಗಳು ಅದನ್ನು ಅಳವಡಿಸಿಕೊಂಡವು’ ಎಂದು ಹೇಳಿದರು.
‘ಸ್ವತಃ ಕೃಷಿಕರಾಗಿದ್ದ ಜಾಲಪ್ಪ ಅವರು ರೈತರು ಹಾಗೂ ಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಕೋಲಾರದಲ್ಲಿ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಕಾಲೇಜು ಸ್ಥಾಪಿಸದಿದ್ದರೆ ಜಿಲ್ಲಾ ಕೇಂದ್ರ ಇಷ್ಟು ಬೆಳವಣಿಗೆ ಆಗುತ್ತಿರಲಿಲ್ಲ. ಕೋಲಾರ ನಗರಕ್ಕೆ ಅವರ ಕೊಡುಗೆ ಅಪಾರ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅವರ ನೀಡಿರುವ ಕೊಡುಗೆ ಮರೆಯಲಾಗದು’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಬಿ.ಉದಯ್‌ಶಂಕರ್, ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ್, ವಕೀಲ ನಾಗೇಶ್, ಗ್ರಾಮದ ಮುಖಂಡರಾದ ಚಿಕ್ಕಮುನಿಯಪ್ಪ, ರಾಜಣ್ಣ, ನಾರಾಯಣಸ್ವಾಮಿ, ಮೂರ್ತಿ, ಚಲಪತಿ, ಬಿ ನಾಗರಾಜ್, ವಿ.ಪಿ.ಪ್ರಕಾಶ್, ರವಿಚಂದ್ರ, ಅಶೋಕ್, ಮಣಿ, ಬಾಬು, ಜಮೀರ್ ಪಾಷಾ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.