ADVERTISEMENT

ಕೊತ್ತೂರು ಹಠಾವೋ ಕೋಲಾರ ಬಚಾವೋ: ಬಣಕನಹಳ್ಳಿ ನಟರಾಜ್ ಎಚ್ಚರಿಕೆ

ಹೆಲಿಕಾಪ್ಟರ್ ‌ಘಟಕಕ್ಕೆ ಶಾಸಕ ಧಮ್ಕಿ ಹಾಕಿದ್ದಾರೆ: ಜೆಡಿಎಸ್ ಮುಖಂಡರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:23 IST
Last Updated 24 ಫೆಬ್ರುವರಿ 2026, 6:23 IST
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿದರು‌‌. ಪಕ್ಷದ‌ ಮುಖಂಡರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿದರು‌‌. ಪಕ್ಷದ‌ ಮುಖಂಡರು ಪಾಲ್ಗೊಂಡಿದ್ದರು    

ಕೋಲಾರ: ತಾಲ್ಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿರುವ ಟಾಟಾ -ಏರ್‌‌ಬಸ್ ಎಚ್ 125 ಹೆಲಿಕಾಪ್ಟರ್ ಜೋಡಣಾ ಘಟಕಕ್ಕೆ ಶಾಸಕ‌ ಕೊತ್ತೂರು ಮಂಜುನಾಥ್ ಧಮ್ಕಿ ಹಾಕಿರುವುದು ಖಂಡನೀಯ. ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ದುರ್ವರ್ತನೆ‌ ತೋರಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಭಾರತದಲ್ಲಿ ಖಾಸಗಿ ವಲಯದ ಮೊದಲ ‌ಹೆಲಿಕಾಪ್ಟರ್ ಘಟಕ ಇದಾಗಿದ್ದು, ನಮ್ಮ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ. ಇಡೀ ದೇಶದಲ್ಲಿ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೋಲಾರ ಹಾಗೂ ರಾಜ್ಯದ ಪಾಲಿಗೆ ಇದು ಹೆಮ್ಮೆಯ ವಿಚಾರ‌' ಎಂದರು.

ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಎಂ.ಮಲ್ಲೇಶ್‌ ಬಾಬು ಅವರಿಂದಾಗಿ ಈ ಘಟಕ ನಮ್ಮ ಜಿಲ್ಲೆಗೆ ಬಂದಿದೆ. ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ‌ ಅಭಿಯಾನಕ್ಕೆ ಉತ್ತೇಜನ ನೀಡುವಂಥ ಘಟಕ ಎಂದು ಹೇಳಿದರು.

ADVERTISEMENT

ಇಂಥ ಒಂದು ಘಟಕದಿಂದ ಜಿಲ್ಲೆಯ ಕೀರ್ತಿ ಹೆಚ್ಚಿದ್ದು, ಶಾಸಕ ಸಂತೋಷಪಡಬೇಕಿತ್ತು‌. ಆದರೆ,‌ ವಿದ್ಯುತ್ ಕಟ್ ಮಾಡುತ್ತೇನೆ, ಹಳ್ಳ ತೋಡುತ್ತೇನೆ, ಟ್ರಾಕ್ಟರ್ ಡಿಕ್ಕಿ ಹೊಡೆಸುತ್ತೇನೆ ಎಂದು ಧಮ್ಕಿ‌ ಹಾಕಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಬೇರೆ‌ ಕಂಪನಿಗಳು ಬರಲು ಭಯಪಡುವ‌ ವಾತಾವರಣ ಸೃಷ್ಟಿಯಾಗಿದೆ ಎಂದು ಹರಿಹಾಯ್ದರು.

ಇದೇ ಕಾರ್ಯಕ್ರಮಕ್ಕೆ ರಾಜ್ಯ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕೂಡ ಬಂದಿದ್ದರು. ಶಾಸಕರಿಗೂ ಇ-ಮೇಲ್ ಮೂಲಕ ಆಹ್ವಾನ ಹೋಗಿದೆ. ಇಷ್ಟಾಗಿಯೂ ಅವರು ಘಟಕದ ವಿರುದ್ಧ ಮಾತನಾಡಿರುವುದು ಒಪ್ಪುವಂಥ ವಿಚಾರ ಅಲ್ಲ ಎಂದರು.

ಟಾಟಾ ಸಂಸ್ಥೆಯವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂಥ ಸಂಸ್ಥೆಯನ್ನು ತೆಗಳಲು ಅವರಿಗೆ‌ ಮನಸ್ಸಾದರೂ ಹೇಗೆ ಬಂತು? ತಾವೇನು ಮಾತನಾಡುತ್ತಿದ್ದೇವೆ‌ ಎಂಬ ಅರಿವು ಜನಪ್ರತಿನಿಧಿಗಳಿಗೆ ಇರಬೇಕು.‌ ಇಡೀ ಸಮಾಜ ತಮ್ಮನ್ನು ಗಮನಿಸುತ್ತಿರುತ್ತದೆ ಎಂದು ಹೇಳಿದರು.

ಇನ್ನಾದರೂ ಶಾಸಕರು ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಕೊತ್ತೂರು ಹಠಾವೋ, ಕೋಲಾರ ಬಜಾವೋ ಎಂಬ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೆಲಿಕಾಪ್ಟರ್ ಘಟಕ ಉದ್ಘಾಟನೆ ವೇಳೆ ಭದ್ರತೆ ಕಾರಣ ಕೆಲವರಿಗೆ ನಿರ್ಬಂಧ ವಿಧಿಸಿದ್ದಾರೆ. ಇದರ ಅರಿವು ಶಾಸಕರಿಗೆ ಇರಬೇಕಿತ್ತು. ಶಿಷ್ಟಾಚಾರ ಉಲ್ಲಂಘನೆ ‌ಆಗಿದ್ದರೆ ಕಾರ್ಖಾನೆಯ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಇತರ ಜನಪ್ರತಿಧಿಗಳ ಜೊತೆ ಸಭೆ ನಡೆಸಿ ಕ್ರಮ ವಹಿಸಬಹುದಾಗಿತ್ತು. ಸ್ಥಳೀಯರಿಗೆ ಹಾಗೂ ರೈತರಿಗೆ ಉದ್ಯೋಗ ಕೊಡಿ ಎಂದು ಧರಣಿ ಬೇಕಾದರೆ ನಡೆಸಲಿ, ಅದಕ್ಕೆ ನಮ್ಮ ಬೆಂಬಲವೂ ಇರಲಿದೆ ಎಂದರು.

ಜೆಡಿಎಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದಿಂಬಾ‌ ನಾಗರಾಜಗೌಡ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯ ಗೌಡ ಹಾಗೂ ಮುಖಂಡ ಪಾಲಸಂದ್ರ ಲೇಔಟ್ ರವಿ ಇದ್ದರು.

ಭ್ರಷ್ಟರ ಮನೆಗೆ ಟ್ರಾಕ್ಟರ್ ಗುದ್ದಿಸಿ

ವೇಮಗಲ್‌ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಮೊದಲು ಅವುಗಳನ್ನು ತುಂಬಿಸಲಿ. ತಾಲ್ಲೂಕು ಕಚೇರಿ ನಗರಸಭೆಗಳಲ್ಲಿ ಲಂಚ ಪಡೆಯುತ್ತಿರುವವರ ಭ್ರಷ್ಟಾಚಾರ ಎಸಗುತ್ತಿರುವವರ‌‌ ಮನೆಗಳಿಗೆ ಟ್ರಾಕ್ಟರ್ ಗುದ್ದಿಸಲಿ ಎಂದು‌ ಬಣಕನಹಳ್ಳಿ ನಟರಾಜ್ ಸವಾಲು ಹಾಕಿದರು. ಶಾಸಕರ ಇಂಥ ವರ್ತನೆ ಇದೇ ಮೊದಲಲ್ಲ. ಹಿಂದೆ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಗೆ ಅವಾಚ್ಯವಾಗಿ ಬೈಯ್ದಿದ್ದರು. ಕುಷ್ಠರೋಗ ‌ಬರಲಿ ಪ್ಲೇಗ್ ಬರಲಿ ಕ್ಯಾನ್ಸರ್ ‌ಬರಲಿ‌ ಎಂದೆಲ್ಲಾ ‌ಆಕ್ಷೇಪಾರ್ಹ‌ವಾಗಿ ಮಾತನಾಡುತ್ತಿರುತ್ತಾರೆ. ಇದನ್ನೆಲ್ಲಾ ಕೇಳಿ ಜನರೇ ಛೀ ಥೂ ಎಂದು‌ ಮಾತನಾಡಿಕೊಳ್ಳುತ್ತಿದ್ದಾರೆ‌ ಎಂದರು.

ಅಧಿಕಾರಕ್ಕಾಗಿ ಸಿದ್ದರಾಮಯ್ಯ ಜಾತಿ ಪ್ರಸ್ತಾಪ

ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಜಾತಿ ವಿಚಾರ‌ ಮುನ್ನೆಲೆಗೆ ತಂದಿದ್ದಾರೆ. ತಮ್ಮನ್ನು ಬೆಳೆಸಿದ್ದು ಜೆಡಿಎಸ್ ಎಂಬುದನ್ನು ಮರೆತಿದ್ದಾರೆ. ವಕೀಲರಾಗಿದ್ದ ಅವರನ್ನು ಹಣಕಾಸು ಸಚಿವರನ್ನಾಗಿ‌ ಉಪಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲವೇ? ಆಗ ‌ಜಾತಿ ಇರಲಿಲ್ಲವೇ? ಅವರು ಸ್ವಾರ್ಥಕ್ಕೆ ಕಾಂಗ್ರೆಸ್‌ಗೆ ವಲಸೆ‌ ಹೋದರು? ಇಲ್ಲೂ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ.‌ ಕುರುಬ ಸಮುದಾಯ ಆಗ ಇರಲಿಲ್ಲವೇ‌ ಈಗ ಜಾತಿ ಬಂದಿದೆಯೇ ಎಂದು ಬಣಕನಹಳ್ಳಿ ನಟರಾಜ್‌ ಪ್ರಶ್ನಿಸಿದರು. ನಮ್ಮ ಪಕ್ಷದಿಂದ ದೊಡ್ಡವರಾಗಿ‌ ನಮ್ಮ ಪಕ್ಷವನ್ನೇ ನಿಂದಿಸುವುದು ಸರಿ ಅಲ್ಲ. ಮುಂದೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಇದೇ ರೀತಿ ಮಾತು ಮುಂದುವರಿಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೋಲಾರ ತಾಲ್ಲೂಕು ಹಾಳು ಮಾಡಲು ಈ ಶಾಸಕರು ಮುಳಬಾಗಿಲಿನಿಂದ ಬಂದಿದ್ದಾರೆಯೇ? ಇಂಥವರನ್ನು ಕೇವಲ 15 ದಿನಗಳಲ್ಲಿ ಕ್ಷೇತ್ರದ ಮತದಾರರು ಆಯ್ಕೆ ಮಾಡಿದರೆ?
–ಬಣಕನಹಳ್ಳಿ ನಟರಾಜ್‌, ಜೆಡಿಎಸ್‌ ಕಾರ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.