ADVERTISEMENT

ಜೆಡಿಎಸ್ ಮುಖಂಡರ ಬಂಡವಾಳ ಬಯಲು

ಉಪಾಧ್ಯಕ್ಷ ಚುನಾವಣೆ: ನಗರಸಭಾ ಸದಸ್ಯ ಪ್ರವೀಣ್‌ಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 14:47 IST
Last Updated 20 ಮೇ 2022, 14:47 IST
ಎನ್‌.ಎಸ್‌.ಪ್ರವೀಣ್‌ಗೌಡ
ಎನ್‌.ಎಸ್‌.ಪ್ರವೀಣ್‌ಗೌಡ   

ಕೋಲಾರ: ‘ನಗರಸಭೆ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಮುಖಂಡರ ಬಂಡವಾಳ ಬಯಲಾಗಿದೆ. ಪಕ್ಷ ನಿಷ್ಠನಾಗಿದ್ದ ನನ್ನನ್ನು ಉಪಾಧ್ಯಕ್ಷಗಾದಿಯಿಂದ ಕೆಳಗಿಳಿಸಿ ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಏನು ಸಾಧನೆ ಮಾಡಿದ್ದಾರೆ’ ಎಂದು ನಗರಸಭಾ ಸದಸ್ಯ ಎನ್‌.ಎಸ್‌.ಪ್ರವೀಣ್‌ಗೌಡ ಪ್ರಶ್ನಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜೆಡಿಎಸ್ ಮುಖಂಡರು ನನ್ನನ್ನು ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಾಗ ತೋರಿದ ಆಸಕ್ತಿಯನ್ನು ಈಗ ಚುನಾವಣೆಯಲ್ಲಿ ಯಾಕೆ ತೋರಿಸಿಲ್ಲ. ಕಾಂಗ್ರೆಸ್‌ನ ಒಬ್ಬ ಭ್ರಷ್ಟನಿಗೆ ಮಣೆ ಹಾಕಿ ಅವರ ತಾಳಕ್ಕೆ ತಕ್ಕಂತೆ ಕುಣಿದ ಕೆಲ ಮುಖಂಡರು ಯಾವ ಮುಖವಿಟ್ಟುಕೊಂಡು ಜೆಡಿಎಸ್ ಪಕ್ಷದಲ್ಲಿ ಓಡಾಡುತ್ತಾರೆ?’ ಎಂದು ಕುಟುಕಿದರು.

‘ಜೆಡಿಎಸ್‌ನಿಂದ ಗೆದ್ದಿರುವ ಅಲ್ಪಸಂಖ್ಯಾತ ಸಮುದಾಯದ ಸದಸ್ಯನಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡಲು ನಾನು ಸಿದ್ಧನಿದ್ದೆ. ಈ ಸಂಗತಿಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮುಂದೆಯೇ ಹೇಳಿದ್ದೆ. ಆದರೆ, ಇದು ಪಕ್ಷದ ಕೆಲ ಸ್ಥಳೀಯ ಮುಖಂಡರು ಹಾಗೂ ನಗರಸಭೆ ಅಧ್ಯಕ್ಷರಿಗೆ ಇಷ್ಟವಿರಲಿಲ್ಲ. ಇಂತಹ ಪಕ್ಷದ್ರೋಹಿಗಳು ಜಿಲ್ಲೆಯಲ್ಲಿ ಪಕ್ಷ ಕಟ್ಟುತ್ತಾರೆಯೇ?’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ನನ್ನ ವಿರುದ್ಧದ ಅವಿಶ್ವಾಸಕ್ಕೆ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಮಾಜಿ ಸದಸ್ಯ ಚೌಡರೆಡ್ಡಿ ಬೆಂಬಲ ನೀಡಿದರು. ಅವಿಶ್ವಾಸ ಮಂಡನೆ ವಿರುದ್ಧ ಗೆಲುವು ಸಾಧಿಸಲು ನನಗೆ 2 ಸದಸ್ಯರ ಬೆಂಬಲ ಅಗತ್ಯವಿತ್ತು. ಆದರೆ, ಗೋವಿಂದರಾಜು ಅವರು ಸಭೆಗೆ ಗೈರಾಗಿ ಪರೋಕ್ಷವಾಗಿ ನನ್ನ ಪದಚ್ಯುತಿಗೆ ಕಾರಣರಾದರು’ ಎಂದು ಆರೋಪಿಸಿದರು.

ಬಿಜೆಪಿ ಸೇರಿಲ್ಲ: ‘ನಗರದ ಅಭಿವೃದ್ಧಿ ದೃಷ್ಟಿಯಿಂದ ಸಂಸದ ಮುನಿಸ್ವಾಮಿ ಅವರ ಜತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದೆ. ಆದರೆ, ನಾನು ಬಿಜೆಪಿ ಸೇರಿಲ್ಲ. ನಾನು ಸಂಸದರ ಸಂಪರ್ಕದಲ್ಲಿದ್ದಾನೆ ಎಂದು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಲ್ಲಿ ಅಪನಂಬಿಕೆ ಮೂಡುವಂತೆ ಮಾಡಿ ಅವರನ್ನು ನನ್ನ ವಿರುದ್ಧ ಎತ್ತಿ ಕಟ್ಟಲಾಯಿತು. ಇದರಲ್ಲಿ ಸ್ವಪಕ್ಷೀಯ ಸದಸ್ಯರು ಮತ್ತು ಮುಖಂಡರು ಕೈವಾಡ ಸಹ ಇದೆ’ ಎಂದು ದೂರಿದರು.

‘ನಗರಸಭೆ ಉಪಾಧ್ಯಕ್ಷಗಾದಿ ‌ಚುನಾವಣೆ ಬಗ್ಗೆ ಜೆಡಿಎಸ್ ಸದಸ್ಯರು, ಮುಖಂಡರಿಗೆ ಮಾಹಿತಿಯಿತ್ತು. ಅಧ್ಯಕ್ಷೆ ಶ್ವೇತಾ ಮತ್ತು ಅವರ ಪತಿ ಶಬರೀಶ್ ಮುಂದಾಳತ್ವದಲ್ಲಿ ಜೆಡಿಎಸ್ ಸದಸ್ಯರು, ಗೋವಿಂದರಾಜು, ಚೌಡರೆಡ್ಡಿ ಸೇರಿದಂತೆ ಮುಖಂಡರನ್ನು ಒಗ್ಗೂಡಿಸಿ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ದೊರಕಿಸುವ ಕೆಲಸ ಯಾಕೆ ಮಾಡಲಿಲ್ಲ? ಇವರಿಗೆ ಪಕ್ಷ ಸಂಘಟನೆ ಮಾಡುವ ಆಸಕ್ತಿ ಇದೆಯೇ? ಪಕ್ಷದ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಿಲ್ಲ ಎಂದರೆ ಇವರು ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದರೆ?’ ಎಂದು ಕಿಡಿಕಾರಿದರು.

‘ಮುಂದಿನ ವಿಧಾನಸಭಾ ಚುನಾವಣೆಗೆ ತಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿರುವ ವ್ಯಕ್ತಿಗಳು ಉಪಾಧ್ಯಕ್ಷಗಾದಿ ಚುನಾವಣೆ ವಿಚಾರದಲ್ಲಿ ತಲೆ ಹಾಕದೆ ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದ್ದಾರೆ. ಇಂತಹ ಪಕ್ಷದ್ರೋಹಿಗಳು ವಿಧಾನಸಭೆ ಚುನಾವಣೆಯನ್ನು ಹೇಗೆ ಎದುರಿಸುತ್ತಾರೆ?’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.