ADVERTISEMENT

ವ್ಯಸನಮುಕ್ತ ಸಮಾಜಕ್ಕೆ ಕೈಜೋಡಿಸಿ: ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 7:18 IST
Last Updated 3 ಆಗಸ್ಟ್ 2025, 7:18 IST
<div class="paragraphs"><p>ಕೋಲಾರದಲ್ಲಿ ಶನಿವಾರ ವ್ಯಸನ ಮುಕ್ತ ದಿನಾಚರಣೆಯನ್ನು ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿ.ಪಂ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ, ಉದ್ಘಾಟಿಸಿದರು. ಆರ್‌.ನಟೇಶ್‌, ಡಾ.ವಿಜೇತ ದಾಸ್, ಎಂ.ಶ್ರೀನಿವಾಸನ್‌, ಮಂಜೇಶ್‌ ಪಾಲ್ಗೊಂಡಿದ್ದರು</p></div>

ಕೋಲಾರದಲ್ಲಿ ಶನಿವಾರ ವ್ಯಸನ ಮುಕ್ತ ದಿನಾಚರಣೆಯನ್ನು ಜಿಲ್ಲಾಧಿಕಾರಿ ಎಂ.ಆರ್‌.ರವಿ, ಜಿ.ಪಂ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ, ಉದ್ಘಾಟಿಸಿದರು. ಆರ್‌.ನಟೇಶ್‌, ಡಾ.ವಿಜೇತ ದಾಸ್, ಎಂ.ಶ್ರೀನಿವಾಸನ್‌, ಮಂಜೇಶ್‌ ಪಾಲ್ಗೊಂಡಿದ್ದರು

   

ಕೋಲಾರ: ‘ಆಧುನಿಕತೆ ಹೆಚ್ಚಾದಂತೆ ವಿವೇಚನಾಶಕ್ತಿ ಬೆಳೆಯುತ್ತಿದೆ. ಆದರೆ, ಯುವಜನತೆ ಹೆಚ್ಚು ದುಶ್ಚಟಗಳಿಗೆ ದಾಸರಾಗುತ್ತಿರುವುದು ಕಳವಳಕಾರಿಯಾಗಿದೆ. ವ್ಯಸನಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮದಿನದ ಅಂಗವಾಗಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಇಲಾಖೆ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಡಾ.ಮಹಾಂತ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿನ ದುಶ್ಚಟ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಸಮಾಜ ಮತ್ತು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಅತ್ಯವಶ್ಯಕವಾಗಿದ್ದು ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳ ಬಳಕೆ ಹಾಗೂ ಮೊಬೈಲ್ ವ್ಯಸನ ಆರೋಗ್ಯಕ್ಕೆ ಬಹಳ ಹಾನಿಕಾರಕವಾಗಿದೆ. ಯುವ ಜನತೆ ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ ಮಾತನಾಡಿ, ‘ಮಹಾಂತ ಶಿವಯೋಗಿಗಳು ತಮ್ಮ ಇಡೀ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟವರು. ಅವರು ಪ್ರತಿ ಮನೆಗೂ ತೆರಳಿ ಜೋಳಿಗೆ ಚಾಚಿ, ‘ದುಡ್ಡನ್ನಲ್ಲ; ತಮ್ಮ ದುಶ್ಚಟಗಳನ್ನು ಹಾಕಿ’ ಎಂದು ಬೇಡಿದವರು. ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಅವರು ನಂಬಿದ್ದರು. ಅವರ ದೃಷ್ಟಿಯಲ್ಲಿ ಆರೋಗ್ಯವೆಂದರೆ ಕೇವಲ ದೈಹಿಕ ಆರೋಗ್ಯವಲ್ಲ; ಮಾನಸಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆರೋಗ್ಯವಾಗಿತ್ತು’ ಎಂದರು.

‘ಒಬ್ಬ ವ್ಯಸನಿ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ. ಶಿಕ್ಷಣ, ಉದ್ಯೋಗ, ಗುರಿ ಎಲ್ಲವನ್ನೂ ಮರೆತು ಬದುಕಿನ ಅಮೂಲ್ಯ ಸಮಯ ವ್ಯರ್ಥಮಾಡಿಕೊಳ್ಳುತ್ತಾನೆ. ಆತ್ಮವಿಶ್ವಾಸ ಕಳೆದುಕೊಂಡು ಖಿನ್ನತೆಗೆ ಜಾರುತ್ತಾನೆ. ಒಂದು ಕುಟುಂಬದಲ್ಲಿ ಒಬ್ಬ ವ್ಯಸನಿ ಇದ್ದರೆ ಇಡೀ ಕುಟುಂಬದ ನೆಮ್ಮದಿ ಹಾಳಾಗುತ್ತದೆ’ ಎಂದು ನುಡಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ವಾರ್ತಾ ಸಹಾಯಕ ಮಂಜೇಶ್, ‘ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ನೆನಪಿಗಾಗಿ ವ್ಯಸನಮುಕ್ತ ದಿನಾಚರಣೆ ಆಚರಿಸಲಾಗುತ್ತಿದೆ. ಡಾ. ಮಹಾಂತ ಶಿವಯೋಗಿಗಳು 1930ರ ಆಗಸ್ಟ್ 1ರಂದು ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿಯಲ್ಲಿ ಜನಿಸಿದರು. ಅವರ ಅತಿದೊಡ್ಡ ಕೊಡುಗೆ ಎಂದರೆ ‘ಮಹಾಂತ ಜೋಳಿಗೆ' ಕಾರ್ಯಕ್ರಮ. 1975ರಲ್ಲಿ ಕುಡಿತದ ಚಟದಿಂದ ಮೃತಪಟ್ಟ ಯುವಕನ ಕುಟುಂಬದ ದುಃಸ್ಥಿತಿಯನ್ನು ನೋಡಿ ಈ ಕಾರ್ಯಕ್ರಮ ಆರಂಭಿಸಿದರು’ ಎಂದರು.

‘ಒಂದು ಬಟ್ಟೆಯ ಜೋಳಿಗೆಯನ್ನು ಹಿಡಿದು, ಮನೆಮನೆಗೆ ತೆರಳಿ ವ್ಯಸನಿಗಳಿಗೆ ಮನಮುಟ್ಟುವಂತೆ ತಿಳವಳಿಕೆ ನೀಡಿದರು. ಜನರು ತಮ್ಮ ದುಶ್ಚಟಗಳಾದ ಮದ್ಯಪಾನ, ತಂಬಾಕು ಮುಂತಾದ ವಸ್ತುಗಳನ್ನು ಅವರ ಜೋಳಿಗೆಗೆ ಹಾಕಿ ಇನ್ನು ಮುಂದೆ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಿದ್ದರು’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕ ಎಂ.ಶ್ರೀನಿವಾಸನ್‌, ಜಿಲ್ಲಾ ಮಾನಸಿಕ ತಜ್ಞೆ ಡಾ.ವಿಜೇತ ದಾಸ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಡಿಜಿಟಲ್‌ ವ್ಯಸನವೂ ಅಪಾಯಕಾರಿ

‘ವ್ಯಸನ ಎಂಬ ಪದ ಕೇಳಿದ ತಕ್ಷಣ ನಮಗೆ ನೆನಪಾಗುವುದು ತಂಬಾಕು, ಮದ್ಯಪಾನ, ಡ್ರಗ್ಸ್ ನಂತಹ ಮಾದಕ ವಸ್ತುಗಳು. ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ವ್ಯಸನಗಳ ಸ್ವರೂಪ ಬದಲಾಗಿದೆ. ಆನ್‍ಲೈನ್ ಗೇಮಿಂಗ್, ಜೂಜು, ಮೊಬೈಲ್ ಬಳಕೆ ಮುಂತಾದ ಡಿಜಿಟಲ್ ವ್ಯಸನಗಳೂ ನಮ್ಮ ಯುವಜನತೆಯನ್ನು ಆವರಿಸುತ್ತಿವೆ. ಈ ಎಲ್ಲಾ ವ್ಯಸನಗಳು ಒಂದು ರೀತಿಯಲ್ಲಿ ಗೆದ್ದಲು ಹುಳದಂತೆ. ಸಣ್ಣ ಮಕ್ಕಳಿಂದ ದೊಡ್ಡ ವ್ಯಕ್ತಿಯವರೆಗೆ, ಅವನ ಕುಟುಂಬವನ್ನು ಮತ್ತು ಇಡೀ ಸಮಾಜವನ್ನು ಒಳಗಿನಿಂದಲೇ ತಿಂದುಹಾಕುತ್ತವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ ಎಚ್ಚರಿಸಿದರು.

ನಮ್ಮದು ಯುವಜನರ ದೇಶ. ಬೇರೆ ದೇಶಗಳು ನಮ್ಮ ಮೇಲೆ ನ್ಯೂಕ್ಲಿಯರ್ ಬಾಂಬ್‌ ಪ್ರಯೋಗ ಮಾಡಬೇಕಾಗಿಲ್ಲ. ಮಾದಕ ದ್ರವ್ಯವನ್ನು ದೇಶದಲ್ಲಿ ಹರಡಿದರೆ ಸಾಕು ಇಡೀ ದೇಶ ಹಾಳಾಗುತ್ತದೆ
ಡಾ.ಪ್ರವೀಣ್‌ ಪಿ.ಬಾಗೇವಾಡಿ, ಜಿ.ಪಂ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.