ADVERTISEMENT

ಕೊರೊನಾ ತಡೆಗೆ ಜನರು ಕೈಜೋಡಿಸಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 16:11 IST
Last Updated 4 ಆಗಸ್ಟ್ 2020, 16:11 IST
ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪಶ್ರೀ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಮಂಗಳವಾರ ಹೈಮಾಸ್ಕ್‌ ವಿದ್ಯುತ್‌ ದೀಪಕ್ಕೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪಶ್ರೀ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಮಂಗಳವಾರ ಹೈಮಾಸ್ಕ್‌ ವಿದ್ಯುತ್‌ ದೀಪಕ್ಕೆ ಚಾಲನೆ ನೀಡಿದರು.   

ಕೋಲಾರ: ‘ಇಡೀ ಜಗತ್ತು ಕೊರೊನಾ ಸೋಂಕಿನಿಂದ ತಲ್ಲಣಗೊಂಡಿದೆ. ಜನರು ಸೋಂಕು ಹರಡುವಿಕೆ ತಡೆಗೆ ಸರ್ಕಾರದ ಜತೆ ಕೈಜೋಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ರೂಪಶ್ರೀ ಮನವಿ ಮಾಡಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಮಂಗಳವಾರ ಹೈಮಾಸ್ಕ್‌ ವಿದ್ಯುತ್‌ ದೀಪ ಉದ್ಘಾಟಿಸಿ ಮಾತನಾಡಿ, ‘ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿರುವ ಕಾರಣ ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ಓಡಾಡಬಾರದು’ ಎಂದು ಸಲಹೆ ನೀಡಿದರು.

‘ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು. ಹೊರ ಊರುಗಳಿಂದ ಗ್ರಾಮಕ್ಕೆ ಬರುವ ಅಪರಿಚಿತ ವ್ಯಕ್ತಿಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಕೈಗಳ ಸ್ವಚ್ಛತೆಗೆ ಸ್ಯಾನಿಟೈಸರ್‌ ಬಳಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಕೊರೊನಾ ಸೋಂಕಿನಿಂದಾಗಿ ಎಲ್ಲರ ಬದುಕು ಸಂಕಷ್ಟದಲ್ಲಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಸಾರ್ವಜನಿಕ ಸ್ಥಳಗಳು ಹಾಗೂ ಮಾರುಕಟ್ಟೆಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಆರ್ಥಿಕ ಸ್ಥಿತಿವಂತರು ಬಡ ಜನರಿಗೆ ಸಹಾಯ ಮಾಡಬೇಕು’ ಎಂದು ಕೋರಿದರು.

‘ಈ ಭಾಗದ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ಬರುತ್ತಿರುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಇದರಿಂದ ಕೊಳವೆ ಬಾವಿಗಳು ಮರುಪೂರಣಗೊಂಡು ಕೃಷಿಗೆ ಸಹಕಾರಿಯಾಗಿದೆ. ಗ್ರಾಮದ ಪ್ರೌಢ ಶಾಲೆಗೆ ಕೊಠಡಿ ಮತ್ತು ಶೌಚಾಲಯ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ. ಅರಾಭಿಕೊತ್ತನೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.