ADVERTISEMENT

ಬಾಯಿ ತಪ್ಪಿ ಹೇಳಿಕೆ: ಸಮರ್ಥನೆ

ಅಬಕಾರಿ ಸಚಿವ ನಾಗೇಶ್‌ರ ಬೆನ್ನಿಗೆ ನಿಂತ ಸಂಸದ ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 13:16 IST
Last Updated 5 ಸೆಪ್ಟೆಂಬರ್ 2019, 13:16 IST

ಕೋಲಾರ: ‘ಅಬಕಾರಿ ಸಚಿವ ಎಚ್‌.ನಾಗೇಶ್‌ ಮನೆ ಮನೆಗೆ ಮದ್ಯ ಕಲ್ಪಿಸುವ ಮೂಲಕ ಸರ್ಕಾರದ ಅದಾಯ ಹೆಚ್ಚಿಸಲಾಗುವುದು ಎಂದು ಬಾಯಿ ತಪ್ಪಿ ಹೇಳಿಕೆ ನೀಡಿದ್ದಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಸಚಿವರನ್ನು ಸಮರ್ಥಿಸಿಕೊಂಡರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವರು ಹೇಳಿಕೆ ನೀಡುವಾಗ ಅಚಾತುರ್ಯವಾಗಿದೆ. ಹೀಗಾಗಿ ಹೇಳಿಕೆ ತಿದ್ದಿಕೊಳ್ಳಬೇಕು. ಸರ್ಕಾರಕ್ಕೆ ಆದಾಯ ಬರುವಂತೆ ಮಾಡಲು ಬೇಕಾದಷ್ಟು ಮಾರ್ಗಗಳಿವೆ’ ಎಂದರು.

‘ಮನೆ ಮನೆಗೆ ಮದ್ಯ ಪೂರೈಸುವ ವರ್ಗದ ಪಕ್ಷ ನಮ್ಮದಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ರೈತ ನಾಯಕರು. ಮದ್ಯ ಬಳಕೆ ಕಡಿಮೆ ಮಾಡುವ ದೃಷ್ಟಿಯಲ್ಲಿ ಬಿಜೆಪಿ, ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪ ಸರ್ಕಾರ ಯೋಚನೆ ಮಾಡುತ್ತದೆ’ ಎಂದು ಹೇಳಿದರು.

ADVERTISEMENT

‘ಮದ್ಯ ವ್ಯಸನಿಗಳ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಿದರೆ ಅವರು ಮನೆಯಿಂದ ಹೊರ ಬರುವುದೇ ಇಲ್ಲ. ಅಲ್ಲಿಯೇ ಕುಡಿದುಕೊಂಡು ಕುಡುಕರ ಸಂಖ್ಯೆ ಹೆಚ್ಚಾಗುತ್ತದೆ. ತಪ್ಪು ಹೇಳಿಕೆ ಬಗ್ಗೆ ಅಬಕಾರಿ ಸಚಿವರೇ ಸ್ಪಷ್ಟನೆ ನೀಡುತ್ತಾರೆ’ ಎಂದು ವಿವರಿಸಿದರು.

ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಸಂಸದರು, ‘ತನಿಖಾ ಸಂಸ್ಥೆಗಳು ಕಾನೂನು ಪ್ರಕಾರ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ. ಆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ತಪ್ಪು ಇನ್ನೂ ಸಾಬೀತಾಗಿಲ್ಲ. ಶಿವಕುಮಾರ್‌ ಅಪರಾಧಿ ಎಂದು ಹೇಳಿಲ್ಲ. ನ್ಯಾಯಾಧೀಶರು ತೀರ್ಪು ನೀಡುತ್ತಾರೆ. ವೈಯಕ್ತಿಕವಾಗಿ ನಾನು ಏನೂ ಹೇಳುವುದಿಲ್ಲ’ ಎಂದರು.

ಹುಚ್ಚರ ಪರಮಾವಧಿ: ‘ಸರ್ಕಾರದಿಂದ ಜನರ ಮನೆ ಬಾಗಿಲಿಗೆ ಮದ್ಯ ನೀಡಲು ಸಾಧ್ಯವಿಲ್ಲ. ಅಬಕಾರಿ ಸಚಿವರಿಗೆ ಆಸೆಯಿದ್ದರೆ ಅವರ ಮನೆಯಿಂದ ಉಚಿತವಾಗಿ ಕೊಟ್ಟುಕೊಳ್ಳಲಿ. ಅದಕ್ಕೆ ನಮ್ಮ ವಿರೋಧವಿಲ್ಲ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಚಿವರ ಹೇಳಿಕೆಯನ್ನು ಟೀಕಿಸಿದರು.

‘ಮನೆ ಮನೆಗೆ ಮದ್ಯ ನೀಡಿ ಸರ್ಕಾರ ನಡೆಸುವಂತಹ ಪರಿಸ್ಥಿತಿ ಎಂದಿಗೂ ಬರಬಾರದು. ಮದ್ಯದ ಹಣದಲ್ಲಿ ಅಭಿವೃದ್ಧಿ ಮಾಡುತ್ತೇವೆ ಎನ್ನುವುದು ಹುಚ್ಚರ ಪರಮಾವಧಿ’ ಎಂದು ಲೇವಡಿ ಮಾಡಿದರು.

‘ನಾನು ಮತ್ತು ರಮೇಶ್‌ಕುಮಾರ್‌ ದೆಹಲಿಗೆ ಹೋಗಿ ಡಿ.ಕೆ.ಶಿವಕುಮಾರ್‌ ಅವರಿಗೆ ಕಾನೂನಿನ ಮೂಲಕ ನೆರವು ನೀಡುತ್ತೇವೆ. ಒಳ್ಳೆಯ ವಕೀಲರನ್ನು ನೇಮಿಸಲು ಈಗಾಗಲೇ ಚಿಂತನೆ ನಡೆಸಲಾಗಿದೆ. ಬಿಜೆಪಿ ಷಡ್ಯಂತ್ರ ಮಾಡಿ ಶಿವಕುಮಾರ್ ಅವರನ್ನು ಬಂಧಿಸಿ ಕೀಳು ರಾಜಕಾರಣ ಮಾಡುತ್ತಿದೆ. ಶಿವಕುಮಾರ್‌ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಹೊರಬರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.