ಮುಳಬಾಗಿಲು: ಕಡ್ಲೇಪೂರಿ ಹಾಗೂ ನಾನಾ ಬಗೆ ಖಾರದ ತಿನಿಸು ಸುತ್ತಮುತ್ತಲಿನ ಸಂತೆಗಳಲ್ಲಿ ಮಾರುತ್ತಾ ಸ್ವಲ್ಪವೂ ರುಚಿ ಹಾಗೂ ಶುಚಿಗೆ ಭಂಗ ಬಾರದಂತೆ ಜನರಿಗೆ ತಿನಿಸು ಮಾರುತ್ತಾ ಬಂದಿರುವ ಮೂರು ತಲೆಮಾರಿನ ಕುಟುಂಬವೊಂದು ಇದರಲ್ಲೇ ಜೀವನ ಕಟ್ಟಿಕೊಂಡಿದೆ.
ನೆರೆಯ ಆಂಧ್ರಪ್ರದೇಶದ ಮಾಡಿ ಗ್ರಾಮದ ನಾಗೇಶ್ ಕಡ್ಲೇಪುರಿ ವ್ಯಾಪಾರವನ್ನು ತಮ್ಮ ತಾತ ನಾರಾಯಣಪ್ಪ ಮತ್ತು ತಂದೆ ವೆಂಕಟರಾಮಯ್ಯ ಅವರಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಸುಮಾರು 100 ವರ್ಷಗಳಿಂದಲೂ ಒಂದೇ ಬಗೆ ತಿನಿಸು ಜನರ ಕೈಗೆಟುಕುವ ದರದಲ್ಲಿ ಮಾರುತ್ತಿದ್ದಾರೆ.
ಕಡ್ಲೇಪುರಿಯಲ್ಲಿ ಮಸಾಲೆ ಪುರಿ, ಅವಲಕ್ಕಿ ಪುರಿ, ಬೈರ್‌ನೆಲ್ಲುಪುರಿ, ಸಣ್ಣ ಅಕ್ಕಿ ಪುರಿ ಮತ್ತಿತರ ಬಗೆ ಹಾಗೂ ಕಾರಬೂಂದಿ, ಕಡಲೆ ಬೇಳೆ, ಉಪ್ಪು ಕಡಲೆ, ಹಸಿರು ಬಟಾಣಿ ಮಸಾಲೆ, ಮೆಕ್ಕೆಜೋಳ ಚಿಪ್ಸ್, ವಾಮ್ ಪುಡಿ ಮುಂತಾದ ಸುಮಾರು 20 ಬಗೆ ನಾನಾ ತಿನಿಸು ಮಾರುತ್ತಾರೆ.
ಮೂಲತಃ ಆಂಧ್ರಪ್ರದೇಶದವರಾದರೂ ತಾಲ್ಲೂಕಿನ ನಂಗಲಿ, ಬೈರಕೂರು, ಎನ್.ವಡ್ಡಹಳ್ಳಿ, ಮಲ್ಲನಾಯಕನಹಳ್ಳಿ ಮತ್ತಿತರ ಕಡೆ ಸೇರುವ ಸಂತೆ ರಸ್ತೆ ಪಕ್ಕದ ಪಾದಚಾರಿ ಮಾರ್ಗದಲ್ಲಿ ಮರದ ಹಲಗೆ ಮೇಲೆ ಪ್ಲಾಸ್ಟಿಕ್ ಮಿಶ್ರಿತ ಬಿಳಿ ಗೋಣಿ ಚೀಲಗಳಲ್ಲಿ ತಿನಿಸು ಇಟ್ಟು ಮಾರುತ್ತಾರೆ.
‘ತಮ್ಮ ತಂದೆ ಜತೆಗೆ ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಸಂತೆಗಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದ ನಾಗೇಶ್, ಈಚೆಗೆ ತಂದೆ ವೆಂಕಟರಾಮಯ್ಯ ಮರಣವನ್ನಪ್ಪಿದ ನಂತರ ಅದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಜನ ನಾಗೇಶ್ ಎನ್ನದೆ ವೆಂಕಟರಾಮಯ್ಯ ಎಂದೇ ಕರೆಯುತ್ತಾರೆ‘. ಯಾವುದೇ ಕಾರಣಕ್ಕೂ ರುಚಿ, ಖಾರ ಹಾಗೂ ಗುಣಮಟ್ಟದಲ್ಲಿ ರಾಜೀ ಇಲ್ಲ ಎನ್ನುತ್ತಾರೆ ನಾಗೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.