
ಕೋಲಾರ: ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಿದೆ. ಅನ್ಯಭಾಷಿಕರನ್ನು ಕನ್ನಡ ಭಾಷೆಗೆ ಕರೆ ತರುವಂತಾಗಬೇಕು. ಇಲ್ಲವಾದಲ್ಲಿ ಯುವ ಪೀಳಿಗೆಗೆ ದ್ರೋಹ ಬಗೆದಂತಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆದಿಮ ಸಾಂಸ್ಕೃತಿಕ ಕೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕನ್ನಡ ಭಾಷಾ ಬೆಳವಣಿಗೆ ಮತ್ತು ಸವಾಲುಗಳು’ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿದ ಅವರು ಮಾತನಾಡಿದರು.
ಕನ್ನಡ ಭಾಷೆ ಬೆಳವಣಿಗೆಯಲ್ಲಿ ಸರ್ಕಾರದ ನಿಲುವು ಮತ್ತು ಆದೇಶಗಳು ಕುರಿತು ಮಾತನಾಡಿ, ಕೋಲಾರ ಜಿಲ್ಲೆಯು ಕನ್ನಡ ಹೋರಾಟದ ಕೇಂದ್ರವಾಗಿ ಗುರುತಿಸಿಕೊಂಡಿದೆ. ರಾಜ್ಯದ ಗಡಿ ಭಾಗವಾಗಿದ್ದು, ತೆಲುಗು, ತಮಿಳು, ಊರ್ದು ಮತ್ತು ಕನ್ನಡ ಸೇರಿ ನಾಲ್ಕು ಭಾಷೆಗಳು ಸಮಾಗಮವಾಗಿ ವಿಶೇಷತೆಯಿಂದ ಕೂಡಿದೆ ಎಂದರು.
ಕನ್ನಡ ಭಾಷೆಯು ಕಗ್ಗೊಲೆಯಾಗಿ ಅವನತಿಗೆ ತಲುಪುತ್ತಿರುವುದನ್ನು ತಡೆಯುವ ಶಕ್ತಿ ಯುವ ಜನತೆಗೆ ಇದೆ. ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರೇ ಅಗಿದ್ದರೂ ಕನ್ನಡ ಭಾಷೆ ನಿರೀಕ್ಷೆಯಷ್ಟು ಸಮೃದ್ಧವಾಗಿಲ್ಲ. ಹೊರ ರಾಜ್ಯದ ಸಾಮಾನ್ಯ ವ್ಯಕ್ತಿಗೆ ಇರುವಷ್ಟು ಕನ್ನಡ ಭಾಷೆಯ ಮೇಲೆ ಕಾಳಜಿ ನಮ್ಮಲ್ಲಿ ಇಲ್ಲವಾಗಿದೆ. 2011ರ ದಕ್ಷಿಣ ಭಾರತದ ಸಮೀಕ್ಷೆ ಪ್ರಕಾರ ಹಿಂದಿ ಬೆಳವಣಿಗೆ ಶೇ 63ರಷ್ಟಿದ್ದರೆ, ಕನ್ನಡ ಭಾಷೆ ಬೆಳವಣಿಗೆ ಕೇವಲ ಶೇ 3.6ರಷ್ಟಿರುವುದು ಆತಂಕಕಾರಿಯಾಗಿದೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಗೆ 100ರ ಸಂಭ್ರಮದ ಜನಾಂದೋಲವನ್ನಾಗಿ ರೂಪಿಸಲು ತಮ್ಮ ಅಭಿಪ್ರಾಯಗಳನ್ನು ಮುಖ್ಯಮಂತ್ರಿಗೆ ಪತ್ರ ಮೂಲಕ ತಿಳಿಸಿ ಎಂದು ಕೋರಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರ ಸದಸ್ಯ ಟಿ.ತಿಮ್ಮೇಶ್, ‘ಕನ್ನಡಿಗರು ಪರೋಪಕಾರಿಗಳು. ಬದುಕು ಕಟ್ಟಿಕೊಳ್ಳಲು ರಾಜ್ಯಕ್ಕೆ ಬರುವ ಹೊರಗಿನವರಿಗೆ ಕನ್ನಡ ಕಲಿಸದೆ ಅವರದೇ ಭಾಷೆಯಲ್ಲಿ ಮಾತನಾಡಿ ಹೊಂದಾಣಿಕೆ ಮಾಡಿಕೊಳ್ಳುವ ಉದಾರತೆ ಕನ್ನಡಿಗರ ಸಂಸ್ಕೃತಿಯಾಗಿದೆ. ಇದೇ ಈಗ ನಮ್ಮ ಭಾಷೆಯ ಬೆಳವಣಿಗೆಗೆ ತೊಡಕಾಗಿದೆ. ಕನ್ನಡ ಕಲಿಸುವ ಮೂಲಕ ಬೆಳವಣಿಗೆಗೆ ಪ್ರೇರಣೆಯಾಗಬೇಕಾಗಿದೆ’ ಎಂದು ಹೇಳಿದರು.
ಗಟ್ಟಿ ಸೌಧದ ಮೇಲೆ ಕಟ್ಟಿದ ಕನ್ನಡ ಎಂದೂ ಕುಸಿಯುವುದಿಲ್ಲ. ಪ್ರತಿಯೊಬ್ಬರೂ ಕನ್ನಡ ಬಾರದವರಿಗೆ ಕನ್ನಡ ಕಲಿಸುವಂತಾಗಬೇಕು. ನವೆಂಬರ್ ತಿಂಗಳು ಮಾತ್ರ ಕನ್ನಡಿಗರಾಗದೆ ವರ್ಷವಿಡೀ ಕನ್ನಡಿಗರಾಗಿರಬೇಕು. ಕೈಗಾರಿಕೆಗಳಲ್ಲಿ ಶೇ 60 ಸ್ಥಳೀಯ ಕನ್ನಡಿಗರಿಗೆ ಮೀಸಲು ಇರಬೇಕು. ಎಲ್ಲೆಡೆ ಕನ್ನಡದ ಫಲಕಗಳು ರಾರಾಜಿಸಬೇಕು. ಕನ್ನಡ ಶಾಲೆಗಳಿಗೆ ವಿಶೇಷ ಆದ್ಯತೆ ಸಿಗುವಂತಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕನ್ನಡ ಓದು-ಮಾಧ್ಯಮಗಳ ಕುರಿತು ಉಪನ್ಯಾಸ ನೀಡಿದರು. ‘ಪತ್ರಿಕೆಗಳು ಮತ್ತು ಮಾಧ್ಯಮಗಳು ಒಂದೇ ನಾಣ್ಯದ ಎರಡು ಮುಖಗಳು. ಪತ್ರಿಕೆಗಳು ಓದುವಿಕೆಯಿಂದ ಭಾಷೆ ಶುದ್ಧತೆ, ಬೆಳವಣಿಗೆ ಸಾಧ್ಯವಾಗಲಿದೆ. ಇಂದು ಪತ್ರಿಕೆಗಳು ಓದುವಿಕೆ ಶೇ 50ರಷ್ಟು ಕ್ಷೀಣಿಸುತ್ತಿರುವುದು ಕಳವಳಕಾರಿಯಾಗಿದೆ’ ಎಂದರು.
ಸಾಮಾಜಿಕ ಜಾಲತಾಣಗಳಿಂದ ಮಾಧ್ಯಮಗಳಿಗೆ ಮಂಕು ಕವಿದಿದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಕ್ಕಳಲ್ಲಿ ಕನ್ನಡ ಬೆಳೆಸುವಂಥ ಕಾಳಜಿ ಪೋಷಕರು ಮತ್ತು ಶಿಕ್ಷಕರಲ್ಲಿ ಇಲ್ಲವಾಗಿದೆ ಎಂದು ತಿಳಿಸಿದರು.
ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಚಳವಳಿಗಳು ಮತ್ತು ಭಾಷಾ ಪ್ರಾಧಾನ್ಯ ಕುರಿತು ಮಾತನಾಡಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಮುನಿಶಾಮಪ್ಪ ಆಶಯ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಭಾಗವಹಿಸಿದ್ದರು.
ಕನ್ನಡ ಪರ ಚಿಂತಕಿ ಕೆ.ವಿ.ನೇತ್ರಾವತಿ ಗಡಿಯಲ್ಲಿನ ಕನ್ನಡ ಶಾಲಾ ಕಾಲೇಜುಗಳ ವಸ್ತುಸ್ಥಿತಿ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್ ನಿರೂಪಿಸಿದರೆ, ನಡುಪಳ್ಳಿ ಮಂಜುನಾಥ್ ಸ್ವಾಗತಿಸಿದರು.
ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅ.ಕೃ. ಸೋಮಶೇಖರ್, ಕ.ರ.ವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ, ಜಯಕರ್ನಾಟಕ ಸಂಘ ಅಧ್ಯಕ್ಷ ಕೆ.ಆರ್.ತ್ಯಾಗರಾಜ್. ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್, ಪರಿಸರ ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್, ಚುಸಾಪ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಕರವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಬಾ.ಹ.ಶೇಖರಪ್ಪ, ಕಸಾಪ ಪದಾಧಿಕಾರಿಗಳಾದ ಆರ್.ಶಂಕರಪ್ಪ, ಸುಬ್ಬರಾಮಯ್ಯ, ಮಂಜುಳಾ, ಕನ್ನಡ ಉಪನ್ಯಾಸಕ ಮುನಿವೆಂಕಟಸ್ವಾಮಿ, ಜನಪದ ಅಕಾಡೆಮಿ ರಾಜಪ್ಪ ಇದ್ದರು.
ಅವನತಿ ಹಾದಿಯಲ್ಲಿರುವ ಕನ್ನಡದ ಬೆಳವಣಿಗೆಗೆ ಮರಳಿ ಗೋಕಾಕ್ ಮಾದರಿಯಲ್ಲಿ ಕನ್ನಡ ಭಾಷಾ ಆಂದೋಲನ ಅನಿವಾರ್ಯವಾಗಲಿದೆಸಂತೋಷ್ ಹಾನಗಲ್ ಕಾರ್ಯದರ್ಶಿ ಕನ್ನಡ ಅಭಿವೃದ್ದಿ ಪ್ರಾಧಿಕಾರ
ಭಾಷೆ ಎಂಬುವುದು ಮನಸ್ಸಿನ ಭಾವನೆಯನ್ನು ತಟ್ಟುವಂತೆ ಇರಬೇಕೇ ಹೊರತು ತುಕ್ಕು ಹಿಡಿಯಲು ಬಿಡಬಾರದು. ಕನ್ನಡಿಗರ ಕೂಗು ರಾಜ್ಯಕ್ಕೆ ಹಾಗೂ ಕೇಂದ್ರ ಆಡಳಿತಕ್ಕೆ ಕೇಳುವಂತಾಗಬೇಕುಟಿ.ತಿಮ್ಮೇಶ್ ಕನ್ನಡ ಅಭಿವೃದ್ದಿ ಪ್ರಾಧಿಕಾರ ಸದಸ್ಯ
ಹೋರಾಟ ನಡೆಯದಿದ್ದರೆ ಕನ್ನಡ ಉಳಿವು ಕಷ್ಟ
ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡದಿದ್ದರೆ ಕನ್ನಡ ಪರ ಸಮಿತಿ ರಚನೆ ಮಾಡದಿದ್ದರೆ ಕನ್ನಡದ ಉಳಿವು ಕಷ್ಟವಾಗುತಿತ್ತು. ಕನ್ನಡ ಸಂಘಟನೆಗಳಿಂದಲೇ ಇನ್ನೂ ಜೀವಂತವಾಗಿದೆ. ನಮ್ಮ ರಾಜ್ಯದಲ್ಲಿರುವ ಹೊರರಾಜ್ಯದವರೂ ಕನ್ನಡ ಕಲಿತರೆ ಮಾತ್ರ ರಾಜ್ಯದ 7.5 ಕೋಟಿ ಜನತೆಯನ್ನು ಕನ್ನಡಿಗರು ಎಂದು ಹೇಳಬಹುದಾಗಿದೆ. ಹೀಗಾಗಿ ಕನ್ನಡಿಗರು ಪ್ರಶ್ನೆ ಮಾಡದಿದ್ದರೆ ಕನ್ನಡದ ಬೆಳವಣಿಗೆ ಅಸಾಧ್ಯ. ಕನ್ನಡವನ್ನು ಸಾಮರಸ್ಯದಿಂದ ಬೆಳೆಸಬೇಕಾಗಿದೆ ಎಂದು ಟಿ.ತಿಮ್ಮೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.