ADVERTISEMENT

ಜೂನ್‌ 10ಕ್ಕೆ ಕರವೇ ಪ್ರತಿಭಟನೆ

ಉಚಿತವಾಗಿ ಲಸಿಕೆ ಕೊಡಿ– ಇಲ್ಲವೇ ಅಧಿಕಾರ ಬಿಡಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 15:36 IST
Last Updated 7 ಜೂನ್ 2021, 15:36 IST

ಕೋಲಾರ: ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರ ಬಿಡಿ ಘೋಷಣೆಯೊಂದಿಗೆ ರಾಜ್ಯದೆಲ್ಲೆಡೆ ಜೂನ್‌ 10ರಂದು ಏಕಕಾಲಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್‌ 10ರಂದು ಸಂಘಟನೆಯ ಲಕ್ಷಾಂತರ ಕಾರ್ಯಕರ್ತರು ಪ್ರತಿಭಟನೆ ಮಾಡಿ ರಾಜ್ಯದ ಸಮಸ್ತ ಜನತೆಯ ಹಕ್ಕೊತ್ತಾಯ ಮಂಡಿಸಲಿದ್ದಾರೆ. ರಾಜ್ಯದ ಪ್ರತಿಯೊಬ್ಬರಿಗೂ ಜೂನ್ ಅಂತ್ಯದೊಳಗೆ ಮೊದಲ ಡೋಸ್ ಲಸಿಕೆ ಮತ್ತು ಸೆಪ್ಟೆಂಬರ್ ಅಂತ್ಯದೊಳಗೆ 2ನೇ ಡೋಸ್ ಉಚಿತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಚುನಾವಣಾ ಬೂತ್‌, ಪೋಲಿಯೊ ಲಸಿಕೆ ಬೂತ್‌ ರಚಿಸಿದಂತೆ ಜನರಿಗೆ ಹತ್ತಿರದಲ್ಲಿ ಕೋವಿಡ್‌ ಲಸಿಕೆ ಬೂತ್ ಸ್ಥಾಪಿಸಬೇಕು. ಜನರನ್ನು ಕಾಯಿಸದೆ ಮತ್ತು ಸತಾಯಿಸದೆ ಲಸಿಕೆ ನೀಡಬೇಕು. ಕೊರೊನಾ ಸೋಂಕು ದೇಶಕ್ಕೆ ಕಾಲಿಟ್ಟ ನಂತರ ಜನರ ಬದುಕು ನರಕಸದೃಶವಾಗಿದೆ. ಕೋವಿಡ್‌ನಿಂದ ಸಾಕಷ್ಟು ಸಾವು ನೋವು ಸಂಭವಿಸಿವೆ. ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್‌ಡೌನ್‌ನಿಂದ ದೇಶದಲ್ಲಿ ಬಡತನ, ನಿರುದ್ಯೋಗ ಹೆಚ್ಚಿದೆ. ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಕಳೆದ ವರ್ಷದಿಂದಲೂ ಸರ್ಕಾರಗಳು ಜನರ ಮೇಲೆ ಜವಾಬ್ದಾರಿ ಹೊರಿಸಿದವೇ ಹೊರತು ಜನರ ಜೀವ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಬೇರೆ ರಾಷ್ಟ್ರಗಳಲ್ಲಿ ಶೇ -60ರಷ್ಟು ಮಂದಿಗೆ ಲಸಿಕೆ ನೀಡಿರುವುದರಿಂದ ಆ ರಾಷ್ಟ್ರಗಳು ಕೋವಿಡ್‌ 2ನೇ ಅಲೆಯ ಹೊಡೆತದಿಂದ ಪಾರಾಗಿವೆ. ಆದರೆ, ಭಾರತದಲ್ಲಿ ಕೇಂದ್ರ ಸರ್ಕಾರದ ಬೇಜವಾಬ್ದಾರಿ ನೀತಿಯಿಂದಾಗಿ ದೇಶದ ಶೇ 5ರಷ್ಟು ಜನರಿಗೂ ಎರಡು ಡೋಸ್ ಲಸಿಕೆ ನೀಡಲು ಸಾಧ್ಯವಾಗಿಲ್ಲ. ದೇಶದ ಜನರಿಗೆ ಲಸಿಕೆ ನೀಡುವುದನ್ನು ಬಿಟ್ಟು ಕೇಂದ್ರವು ಹೊರ ದೇಶಗಳಿಗೆ 6.50 ಕೋಟಿ ಡೋಸ್ ಲಸಿಕೆ ರಫ್ತು ಮಾಡಿದೆ ಎಂದು ಟೀಕಿಸಿದ್ದಾರೆ.

ಕೋರ್ಟ್‌ ಆಕ್ಷೇಪ: ಲಸಿಕೆ ನೀಡಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಬೇಜವಾಬ್ದಾರಿ, ತಾರತಮ್ಯ ನೀತಿ ಬಗ್ಗೆ ದೇಶದ ಸುಪ್ರೀಂ ಕೋರ್ಟ್‌ ಆಕ್ಷೇಪ ಎತ್ತಿದೆ. ಕೇಂದ್ರವು ಡಿಸೆಂಬರ್ ಅಂತ್ಯದೊಳಗೆ 200 ಕೋಟಿ ಡೋಸ್ ಲಸಿಕೆ ನೀಡುವುದಾಗಿ ಹೇಳುತ್ತಿದೆ. ಆದರೆ, ವಾಸ್ತವದಲ್ಲಿ ಇದು ಸಾಧ್ಯವಿಲ್ಲ. ಜನರು ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ. ಜನರು ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದ್ದಾರೆ.

ದೇಶದಲ್ಲಿ ಅಕ್ಟೋಬರ್ ವೇಳೆಗೆ ಕೋವಿಡ್ ಮೂರನೇ ಅಲೆ ಆರಂಭವಾಗಲಿದ್ದು, ಅಷ್ಟರೊಳಗೆ ಲಸಿಕೆ ಪಡೆಯದವರ ಜೀವಗಳು ಅಪಾಯಕ್ಕೆ ಸಿಲುಕಲಿವೆ. ಇದಕ್ಕೆ ಅವಕಾಶ ಕೊಡಬಾರದು. ರಾಜ್ಯದ ಪ್ರತಿ ಪ್ರಜೆಗೂ ಸೆಪ್ಟೆಂಬರ್ ತಿಂಗಳೊಳಗೆ ಉಚಿತವಾಗಿ 2 ಡೋಸ್ ಲಸಿಕೆ ನೀಡಬೇಕು. ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.