ADVERTISEMENT

ಸಾರಿಗೆ ನೌಕರರ ಮುಷ್ಕರ; ಪರ್ಯಾಯ ವ್ಯವಸ್ಥೆ

ಪ್ರಯಾಣಿಕರು ಆತಂಕಕ್ಕೆ ಒಳಗಾಗುವುದು ಬೇಡ: ಜಿಲ್ಲಾಧಿಕಾರಿ ಎಂ.ಆರ್.ರವಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 2:15 IST
Last Updated 5 ಆಗಸ್ಟ್ 2025, 2:15 IST
ಸಾರಿಗೆ ನೌಕರರ ಮುಷ್ಕರ; ಸಾರಿಗೆಯಲ್ಲಿ ವ್ಯತ್ಯಯ ಸಾಧ್ಯತೆ...
ಸಾರಿಗೆ ನೌಕರರ ಮುಷ್ಕರ; ಸಾರಿಗೆಯಲ್ಲಿ ವ್ಯತ್ಯಯ ಸಾಧ್ಯತೆ...   

ಕೋಲಾರ: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರೂ ಜಿಲ್ಲೆಯಲ್ಲಿನ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗದಂತೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ‌ಎಂ.ಆರ್.ರವಿ ತಿಳಿಸಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವಿವಿಧ ಬೇಡಿಕೆಗಳನ್ನಿಟ್ಟು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ನಿಗಮಗಳ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಮಾತುಕತೆ ಕೂಡ ನಡೆಸಿದ್ದಾರೆ. ಸಾರಿಗೆ ನಿಗಮಗಳ ಮಜಲು ವಾಹನಗಳ ಸಾರಿಗೆ ಸೌಕರ್ಯವು ಸ್ಥಗಿತಗೊಳ್ಳುವ ಸಂಭವವಿರುತ್ತದೆ. ಆದ್ದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಪರ್ಯಾಯವಾಗಿ ಸಾರಿಗೆ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಒದಗಿಸಲಾಗುವುದು. ಜಿಲ್ಲೆಯಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವಂತಿಲ್ಲ’ ಎಂದರು.

‘ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಾಯಿಸಲಾಗಿರುವ ಖಾಸಗಿ ವಾಹನಗಳು, ಒಪ್ಪಂದದ ವಾಹನಗಳು, ಖಾಸಗಿ ಸೇವಾ ವಾಹನಗಳು ಮತ್ತು ಶಾಲಾ ವಾಹನಗಳು ಸೇರಿದಂತೆ ವಿವಿಧ ವಾಹನಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮುನ್ನೆಚ್ಚರಿಕೆ ಕ್ರಮವಾಗಿ ವ್ಯವಸ್ಥೆ ಮಾಡಲಾಗಿರುತ್ತದೆ’ ಎಂದು ಹೇಳಿದರು.

ADVERTISEMENT

ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಮಾತನಾಡಿ, ಸ್ಥಳೀಯ ಕೈಗಾರಿಕಾ ಬಸ್ಸುಗಳನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್‌ ಬಿ. ಮಾತನಾಡಿ, ‘ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ನಡೆದರೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ, ಕೆಎಸ್ಆರ್‌ಟಿ ಡಿಟಿಓ ಮಂಜುನಾಥ್, ಶ್ರೀನಿವಾಸಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ್ ರೆಡ್ಡಿ, ಭದ್ರತಾ ಅಧಿಕಾರಿ ಆನಂದ್ ಕುಮಾರ್, ಖಾಸಗಿ ಬಸ್ಸುಗಳ ಅಸೋಶಿಯೇಷನ್ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಕೋಲಾರದಲ್ಲಿ ಜಿಲ್ಲಾಧಿಕಾರಿ ಎಂ.ಆರ್‌.ರವಿ ನೇತೃತ್ವದಲ್ಲಿ ಸಭೆ ನಡೆಯಿತು. ನಿಖಿಲ್‌ ಬಿ. ಎಂ.ಎಸ್‌.ಮಂಗಳಾ ಶ್ರೀನಾಥ್‌ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು

ಇಂದಿನಿಂದಲೇ ಮುಷ್ಕರ

ಸಾರಿಗೆ ಬಂದ್‌ ಆ.5ರಿಂದಲೇ ಕೆಎಸ್‌ಆರ್‌ಟಿಸಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಬಸ್‌ ಸಂಚಾರ ಸ್ಥಗಿತವಾಗಲಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಿಲ್ಲಾ ಜಂಟಿ ಕ್ರಿಯಾಸಮಿತಿಯ ಆರ್‌.ಬಾಲಕೃಷ್ಣ ಆರ್‌.ಪ್ರಸಾದ್‌ ನಾರಾಯಣಸ್ವಾಮಿ ಎಚ್‌.ಎಂ.ಶ್ರೀನಿವಾಸಮೂರ್ತಿ ವೈ.ವಿ.ರಮೇಶ್‌ ಕುಮಾರ್‌ ಟಿ.ಎಂ.ವೆಂಕಟೇಶ್‌ ತಿಳಿಸಿದ್ದಾರೆ. ‘ಜಿಲ್ಲೆಯಲ್ಲಿ 520 ಬಸ್‌ಗಳೂ ಸಂಚಾರ ಸ್ಥಗಿತಗೊಳಿಸಲಿವೆ. ಸುಮಾರು 1750 ಸಿಬ್ಬಂದಿ ಹಾಗೂ ನೌಕರರಿದ್ದು ಯಾರೊಬ್ಬರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ನಮ್ಮ ಹೋರಾಟಕ್ಕೆ ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಮುಷ್ಕರ ಮುಂದೂಡುವ ವಿಚಾರ ನಮಗೆ‌ ಗೊತ್ತಿಲ್ಲ’ ಎಂದಿದ್ದಾರೆ.

ಖಾಸಗಿ ವಾಹನ ಬಳಕೆ

‘ಬದಲಿ ವ್ಯವಸ್ಥೆಯಾಗಿ ಖಾಸಗಿ ವಾಹನಗಳನ್ನು ಬಳಸಿಕೊಳ್ಳಲಾಗುವುದು. ಈ ವಾಹನಗಳು ನಿಗಮದ ಬಸ್ಸು ನಿಲ್ದಾಣಗಳಿಂದಲೇ ಕಾರ್ಯಾಚರಣೆ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ. ಒಪ್ಪಂದದ ವಾಹನಗಳನ್ನು ಕಾರ್ಯಾಚರಣೆ ಮಾಡಲು ಕ್ರಮವಹಿಸಲಾಗುವುದು. ಮ್ಯಾಕ್ಸಿಕ್ಯಾಬ್ ಮತ್ತು ಆಟೊಗಳನ್ನು ಉಪಯೋಗಿಸಿಕೊಂಡು ಜಿಲ್ಲೆಯ ಸ್ಥಳೀಯ ಗ್ರಾಮಗಳಿಂದ ಕಾರ್ಯಾಚರಣೆ ಮಾಡಲಾಗುವುದು. ಈ ಎಲ್ಲಾ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ಕೆಎಸ್‍ಆರ್‌ಟಿಸಿ ವಾಹನಗಳ ದರಗಳನ್ನೇ ಪಾವತಿಸಿ ಪ್ರಯಾಣ ಮಾಡಬಹುದಾಗಿದೆ’ ಎಂದು ತಿಳಿಸಿದರು.

80 ಸರ್ಕಾರಿ 137 ಖಾಸಗಿ ಬಸ್‌ ಬಳಕೆ

‘ನಮ್ಮ ವಿಭಾಗದಲ್ಲಿ 100 ಜನ ಗುತ್ತಿಗೆ ನೌಕರರು ಮತ್ತು 65 ಜನ ತರಬೇತಿ ನೌಕರರನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸುಮಾರು 80 ಸರ್ಕಾರಿ ಬಸ್ಸುಗಳು ಮತ್ತು 137 ಖಾಸಗಿ ಬಸ್ಸುಗಳು ಕಾರ್ಯನಿರ್ವಹಿಸಲಿವೆ’ ಎಂದು ಕೋಲಾರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.