ADVERTISEMENT

ಯಾವುದೇ ಮನೆ ತಪ್ಪಿಹೋಗದಂತೆ ನಿಗಾ ವಹಿಸಿ: ಜಿಲ್ಲಾಧಿಕಾರಿ ರವಿ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ– ಜಿಯೋ ಟ್ಯಾಗಿಂಗ್ ಶೀಘ್ರ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ರವಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 7:04 IST
Last Updated 12 ಸೆಪ್ಟೆಂಬರ್ 2025, 7:04 IST
ಕೋಲಾರದಲ್ಲಿ ಗುರುವಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ನಿಖಿಲ್‌ ಬಿ., ಪ್ರವೀಣ್‌ ಪಿ.ಬಾಗೇವಾಡಿ, ಮಂಗಳಾ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಗುರುವಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ನಿಖಿಲ್‌ ಬಿ., ಪ್ರವೀಣ್‌ ಪಿ.ಬಾಗೇವಾಡಿ, ಮಂಗಳಾ ಪಾಲ್ಗೊಂಡಿದ್ದರು   

ಪ್ರಜಾವಾಣಿ ವಾರ್ತೆ

ಕೋಲಾರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೊದಲ ಹಂತವಾಗಿ ವಿದ್ಯುತ್ ಮೀಟರ್ ರೀಡರ್‌ಗಳು ಎಲ್ಲಾ ಮನೆಗಳನ್ನು ಜಿಯೋ ಟ್ಯಾಗಿಂಗ್ ಮಾಡುತ್ತಿದ್ದು, ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.

ADVERTISEMENT

ಎಲ್ಲಾ ವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕವಿರುವ ಬಗ್ಗೆ ಖಾತರಿಪಡಿಸಿಕೊಂಡು, ವಾಸದ ಮನೆಗಳ ಆರ್‌ಆರ್ ಮೀಟರ್ ಆಧಾರದ ಮೇಲೆ ಮನೆಗಳನ್ನು ಗುರುತಿಸಿ ಅಲ್ಲಿರುವ ಜನರ ಸಮೀಕ್ಷೆ ಮಾಡಬೇಕು. ಯಾವುದೇ ಮನೆಗಳು ಸಮೀಕ್ಷಾ ವ್ಯಾಪ್ತಿಯಿಂದ ತಪ್ಪಿ ಹೋಗದಂತೆ ನಿಗಾ ವಹಿಸಬೇಕು. ಮೀಟರ್ ನಂಬರ್‌ ಇಲ್ಲದ ಅಲೆಮಾರಿ, ಅರೆ ಅಲೆಮಾರಿ ವಾಸಸ್ಥಳ ಮತ್ತು ಕೊಳಚೆ ಪ್ರದೇಶಗಳ, ಅರಣ್ಯ ಪ್ರದೇಶಗಳ ಪ್ರತಿ ಕುಟುಂಬದ ನಂಬರ್ ಆಷ್ಪನ್‌ನಲ್ಲಿ UHID ಸೃಜಿಸಬೇಕು ಎಂದರು.

ಸಮೀಕ್ಷೆದಾರರಿಗೆ, ಗಣತಿದಾರರಿಗೆ, ಶಿಕ್ಷಕರಿಗೆ ಕ್ಲಸ್ಟರ್ ವೈಸ್ ತರಬೇತಿ ಕುರಿತು ಮೈಕ್ರೋ ಪ್ಲಾನ್ ಸಿದ್ಧಪಡಿಸಿ ವ್ಯವಸ್ಥಿತ ರೀತಿಯಲ್ಲಿ ತರಬೇತಿ ಹಮ್ಮಿಕೊಳ್ಳಬೇಕು. ಮಾಸ್ಟರ್ ಟ್ರೈನರ್ಸ್‌, ಗಣತಿದಾರರು, ಮೇಲ್ವಿಚಾರಕರ ಸಮಗ್ರ ಅಂಕಿ ಅಂಶಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸದಸ್ಯರು ಕೂಡ ಅವಶ್ಯಕ ಸಿದ್ಧತೆ ಮಾಡಿಕೊಳ್ಳಬೇಕು. ಈಗ ನಡೆಯುತ್ತಿರುವ ಜಿಯೋಟ್ಯಾಗ್, ಸರ್ವೆ ಕಾರ್ಯ ಬಗ್ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಎರಡನೇಯ ಹಂತದ ಸಮೀಕ್ಷೆಯ ಕಾರ್ಯವನ್ನು ದಸರಾ ರಜೆಯ ಅವಧಿಯಲ್ಲಿ ಸೆ.22ರಿಂದ ಅ.7 ರವರೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 41.73 ಲಕ್ಷ ಕುಟುಂಬಗಳು ಇರುವುದಾಗಿ ಅಂದಾಜಿಸಲಾಗಿದೆ. ಸಮೀಕ್ಷೆ ಕಾರ್ಯ ವ್ಯವಸ್ಥಿತವಾಗಿ ಕೈಗೊಳ್ಳಲು ಪ್ರತಿ 150 ಮನೆಗಳಿಗೆ ಒಬ್ಬ ಗಣತಿದಾರರಂತೆ 2 ಸಾವಿರಕ್ಕೂ ಹೆಚ್ಚು ಗಣತಿದಾರರು, ಪ್ರತಿ 20 ಗಣತಿದಾರಿಗೆ ಒಬ್ಬ ಮೇಲ್ವಿಚಾರಕರು ಮತ್ತು ಜಿಲ್ಲೆಗೆ 50 ಮಾಸ್ಟರ್ ಟ್ರೈನರ್‌ಳನ್ನು ಗುರುತಿಸಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಡಯಟ್, ಪದವಿಪೂರ್ವ ಕಾಲೇಜು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಬೆಸ್ಕಾಂ, ಇಂಧನ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯೊಂದಿಗೆ ಈ ಕಾರ್ಯ ಯಶಸ್ವಿಗೊಳಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್‌ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್‌.ಮೈತ್ರಿ, ತಹಶೀಲ್ದಾರ್‌ಗಳು, ಎಲ್ಲಾ ಬಿಒಒ, ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಶೋಭಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಾ, ಸಾಂಖ್ಯಿಕ ಅಧಿಕಾರಿ ರಮೇಶ್ ಹಾಗೂಸ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Highlights - 2ನೇ ಹಂತದ ಸಮೀಕ್ಷೆ ಸೆ.22ರಿಂದ ಅ.7ವರೆಗೆ ವ್ಯವಸ್ಥಿತ ರೀತಿಯಲ್ಲಿ ತರಬೇತಿ ನೀಡಲು ಸೂಚನೆ ಜಿಲ್ಲೆಯಲ್ಲಿ 41.73 ಲಕ್ಷ ಕುಟುಂಬಗಳು

ಸಮೀಕ್ಷೆ ಕುರಿತು ಅರಿವು ಮೂಡಿಸಿ

ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಕುರಿತು ಅರಿವು ಮೂಡಿಸಬೇಕು. ಸಂಬಂಧಿಸಿದ ನೋಡಲ್ ಅಧಿಕಾರಿಗಳು ಈ ಕುರಿತು ಮೇಲುಸ್ತುವಾರಿ ನೋಡಿಕೊಳ್ಳಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ವಾಹನದ ಮೂಲಕ ಆಡಿಯೋ ಕ್ಲಿಪ್ ಮೂಲಕ ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶದ ಜವಾಬ್ದಾರಿಯನ್ನು ಆಯಾ ತಾಲ್ಲೂಕು ಪಂಚಾಯಿತಿ ಇಒ ಪಿಡಿಓಗಳು ಹಾಗೂ ನಗರ ಪ್ರದೇಶಗಳಲ್ಲಿ ಪಿಡಿಡಿಯುಡಿಸಿ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಎಂ.ಆರ್.ರವಿ ನಿರ್ದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.