ADVERTISEMENT

ತೇಜೋವಧೆ ಮಾಡಬೇಡಿ: ವರ್ತೂರು ಪ್ರಕಾಶ್‌ ಮನವಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 2:36 IST
Last Updated 5 ಡಿಸೆಂಬರ್ 2020, 2:36 IST
ವರ್ತೂರು ಪ್ರಕಾಶ್‌
ವರ್ತೂರು ಪ್ರಕಾಶ್‌   

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್‌ ಇಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಅವರನ್ನು ಭೇಟಿಯಾಗಿ ತಮ್ಮ ಅಪಹರಣ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಿದರು.

ಕಾರ್ತಿಕ್‌ರೆಡ್ಡಿ ಅವರೊಂದಿಗೆ ಸುಮಾರು 45 ನಿಮಿಷ ಮಾತುಕತೆ ನಡೆಸಿದ ವರ್ತೂರು ಪ್ರಕಾಶ್‌ ತಮ್ಮ ಹಣಕಾಸು ವ್ಯವಹಾರ, ಡೇರಿ ಉದ್ಯಮ, ಕೃಷಿಗೆ ಸಂಬಂಧಿಸಿದಂತೆ ವಿವರ ನೀಡಿದರು. ಅಲ್ಲದೇ, ಅಪಹರಣ ಘಟನೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಗಳ ಬಗ್ಗೆ ಸುಳಿವು ನೀಡಿದರು ಎಂದು ಗೊತ್ತಾಗಿದೆ.

ಎಸ್ಪಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವರ್ತೂರು ಪ್ರಕಾಶ್‌, ‘ನನ್ನ ಮಕ್ಕಳಾಣೆ, ಅಪಹರಣ ಸಂಬಂಧ ನಾನು ಈವರೆಗೆ ಹೇಳಿರುವುದೆಲ್ಲಾ ನಿಜ. ಕೈ ಮುಗಿದು ಕೇಳುತ್ತೇನೆ, ನನ್ನ ಭವಿಷ್ಯ ಹಾಳು ಮಾಡಬೇಡಿ, ನಾನು ಮತ್ತೊಮ್ಮೆ ಚುನಾವಣೆಗೆ ನಿಂತು ಶಾಸಕನಾಗಬೇಕು. ಮಾಧ್ಯಮದಲ್ಲಿ ಏನೇನೋ ಸುಳ್ಳು ಸುದ್ದಿ ಹಾಕಿ ನನ್ನ ತೇಜೋವಧೆ ಮಾಡಬೇಡಿ’ ಎಂದು ಮನವಿ ಮಾಡಿದರು.

‘ಹೆಣ್ಣು, ಜಮೀನು ಅಥವಾ ಹಸು ಸಾಲದ ವಿಚಾರಕ್ಕೆ ನನ್ನ ಅಪಹರಣ ಆಗಿಲ್ಲ. ನೂರಕ್ಕೆ ನೂರರಷ್ಟು ಹಣಕ್ಕಾಗಿಯೇ ನನ್ನ ಅಪಹರಣ ನಡೆದಿದೆ. ವೃತ್ತಿಪರ ಅಪಹರಣಕಾರರ ತಂಡವೇ ಈ ಕೃತ್ಯ ಎಸಗಿದೆ. ಈ ಹಿಂದೆ ಹಸು ವ್ಯಾಪಾರ ಮಾಡಿದ್ದೆ. ಆದರೆ, ಹಸು ಖರೀದಿ ಸಾಲ ಬಾಕಿ ಉಳಿಸಿಕೊಂಡಿಲ್ಲ. ಪ್ರಕರಣದ ಹಿಂದೆ ಮಹಿಳೆಯ ಪಾತ್ರವಿದೆ ಮತ್ತು ನನ್ನ ಮಗನೇ ಅಪಹರಣ ಮಾಡಿಸಿದ್ದಾನೆ ಎಂಬುದೆಲ್ಲಾ ಸುಳ್ಳು’ ಎಂದು ಸ್ಪಷ್ಟಪಡಿಸಿದರು.

‘ಕಾರು ಚಾಲಕ ಸುನಿಲ್‌ ಅಪಹರಣಕಾರರಿಂದ ತಪ್ಪಿಸಿಕೊಳ್ಳದಿದ್ದರೆ ಖಂಡಿತ ನನ್ನ ಕೊಲೆಯಾಗುತ್ತಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ತನಿಖೆ ಚುರುಕುಗೊಳಿಸುವಂತೆ ಕೇಳಿದ್ದೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಪೊಲೀಸ್ ಇಲಾಖೆ ಮೇಲೆ ನಂಬಿಕೆಯಿದೆ. ಮೂರ್ನಾಲ್ಕು ದಿನದಲ್ಲಿ ಅಪಹರಣಕಾರರ ಸುಳಿವು ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ದ್ವೇಷ ರಾಜಕಾರಣವಿಲ್ಲ. ಜಿಲ್ಲೆಯಲ್ಲಿ ನನಗೆ ರಾಜಕೀಯ ಶತ್ರುಗಳೆಂದರೆ ಶಾಸಕ ಶ್ರೀನಿವಾಸಗೌಡರು ಹಾಗೂ ಸಂಸದ ಮುನಿಸ್ವಾಮಿಯವರು. ಆದರೆ, ಅವರು ಅಂತಹ ವ್ಯಕ್ತಿಗಳಲ್ಲ. ನಾನು ಯಾರಿಗೂ ಸಾಲ ಕೊಡಬೇಕಿಲ್ಲ ಹಾಗೂ ಯಾವುದೇ ಜಮೀನು ವ್ಯವಹಾರ ಸಹ ಮಾಡುತ್ತಿಲ್ಲ’ ಎಂದು ತಿಳಿಸಿದರು.

ಸುಳಿವು ಸಿಕ್ಕಿದೆ: ‘ಪ್ರಕರಣ ಸಂಬಂಧ ಈವರೆಗೆ ಪ್ರಮುಖ ೧೩ ಮಂದಿಯ ವಿಚಾರಣೆ ನಡೆಸಲಾಗಿದೆ. ಆರೋಪಿಗಳ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ. ವರ್ತೂರು ಪ್ರಕಾಶ್‌ ಅವರನ್ನು ಅಪಹರಿಸಿದವರು ರಾಜ್ಯದವರೆ ಹೊರತು ಹೊರ ರಾಜ್ಯದವರಲ್ಲ. ಘಟನೆ ಸಂಬಂಧ ಹಲವು ಸಾಕ್ಷ್ಯ ಸಂಗ್ರಹಿಸಲಾಗಿದೆ’ ಎಂದು ಕಾರ್ತಿಕ್‌ರೆಡ್ಡಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.