ADVERTISEMENT

ಮಾಲೂರು: ₹2,500 ಕೋಟಿಯಲ್ಲಿ 500 ಪಬ್ಲಿಕ್‌ ಶಾಲೆ ನಿರ್ಮಾಣ

ಮಾಸ್ತಿಯಲ್ಲಿ ಹೈಟೆಕ್ ಸರ್ಕಾರಿ ಶಾಲೆ ಉದ್ಘಾಟಿಸಿದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 6:29 IST
Last Updated 27 ಜುಲೈ 2025, 6:29 IST
ಮಾಲೂರು ತಾಲ್ಲೂಕಿನ ಮಾಸ್ತಿಯಲ್ಲಿ ಶನಿವಾರ ಕರ್ನಾಟಕ ಪಬ್ಲಿಕ್‌ ಶಾಲೆಯ ನೂತನ ಕಟ್ಟಡವನ್ನು ಮಕ್ಕಳ ಸಮ್ಮುಖದಲ್ಲಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ದಾನಿಗಳಾದ ಜನಾರ್ದನ್‌ ಹಾಗೂ ಲಿಂಡಾ ಠಕ್ಕರ್‌ ದಂಪತಿ, ಶಾಸಕರಾದ ಕೆ.ವೈ.ನಂಜೇಗೌಡ, ಎಂ.ಎಲ್‌.ಅನಿಲ್‌ ಕುಮಾರ್‌, ಒಸಾಟ್‌ ಸಂಸ್ಥೆಯ ವಾದಿರಾಜ್‌ ಭಟ್‌, ವೀರಣ್ಣಗೌಡ ಪಾಲ್ಗೊಂಡಿದ್ದರು
ಮಾಲೂರು ತಾಲ್ಲೂಕಿನ ಮಾಸ್ತಿಯಲ್ಲಿ ಶನಿವಾರ ಕರ್ನಾಟಕ ಪಬ್ಲಿಕ್‌ ಶಾಲೆಯ ನೂತನ ಕಟ್ಟಡವನ್ನು ಮಕ್ಕಳ ಸಮ್ಮುಖದಲ್ಲಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ದಾನಿಗಳಾದ ಜನಾರ್ದನ್‌ ಹಾಗೂ ಲಿಂಡಾ ಠಕ್ಕರ್‌ ದಂಪತಿ, ಶಾಸಕರಾದ ಕೆ.ವೈ.ನಂಜೇಗೌಡ, ಎಂ.ಎಲ್‌.ಅನಿಲ್‌ ಕುಮಾರ್‌, ಒಸಾಟ್‌ ಸಂಸ್ಥೆಯ ವಾದಿರಾಜ್‌ ಭಟ್‌, ವೀರಣ್ಣಗೌಡ ಪಾಲ್ಗೊಂಡಿದ್ದರು   

ಮಾಲೂರು: ರಾಜ್ಯದಲ್ಲಿ ₹ 2,500 ಕೋಟಿ ವೆಚ್ಚದಲ್ಲಿ 500 ಸುಸಜ್ಜಿತ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಸರ್ಕಾರದಿಂದ ನಿರ್ಮಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ‌ಸಚಿವ ಮಧು ಬಂಗಾರಪ್ಪ ತಿಳಿಸಿದರು.

ದಾನಿ ಜನಾರ್ದನ್ ಠಕ್ಕರ್ ನೀಡಿರುವ ₹ 8 ಕೋಟಿ ಆರ್ಥಿಕ ಸಹಾಯದಿಂದ ಒಸಾಟ್ ಸಂಸ್ಥೆಯ ನೇತೃತ್ವದಲ್ಲಿ‌ ತಾಲ್ಲೂಕಿನ ಮಾಸ್ತಿಯಲ್ಲಿ ಮರು ನಿರ್ಮಾಣ ‌ಮಾಡಲಾಗಿರುವ ಕರ್ನಾಟಕ ಪಬ್ಲಿಕ್‌ ಶಾಲೆಯ ಹೈಟೆಕ್‌ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಸ್ತಿ ಶಾಲೆಯ ಮಾದರಿಯಲ್ಲೇ ಹೈಟೆಕ್‌ ಶಾಲೆಗಳನ್ನು ನಿರ್ಮಾಣ ಮಾಡಲಿದ್ದೇವೆ. ಸಕಲ ಸೌಲಭ್ಯ ಒದಗಿಸಲಿದ್ದೇವೆ. ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು ಎಂಬುದಷ್ಟೇ ನಮ್ಮ ಬೇಡಿಕೆ’ ಎಂದರು.

ADVERTISEMENT

‘ದೇವಾಲಯದ ಗಂಟೆ ಹೊಡೆದರೆ ಪ್ರಸಾದ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಶಾಲೆಯಲ್ಲಿ ಗಂಟೆ ಹೊಡೆದರೆ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಅದೇ ನಮಗೆ ದೇವರ ಪ್ರಸಾದ’ ಎಂದು ಹೇಳಿದರು.

‘ಗುಜರಾತಿನಲ್ಲಿ ಜನಿಸಿ, ಮೈಸೂರಿನಲ್ಲಿ ಶಿಕ್ಷಣ ಪಡೆದು ಯಾವುದೋ ಗ್ರಾಮದ ಮಕ್ಕಳಿಗೆ ಶಿಕ್ಷಣ ನೀಡಲು ಸೌಲಭ್ಯ ಒದಗಿಸಿಕೊಟ್ಟಿರುವ ಜನಾರ್ದನ್‌ ಠಕ್ಕರ್‌ ಅವರ ಪರಿಜ್ಞಾನ ಮೆಚ್ಚುವಂಥದ್ದು. ಜಾತಿ, ಧರ್ಮ, ಭಾಷೆ, ರಾಜ್ಯ, ದೇಶಕ್ಕೆ ಗಡಿ ಇರುತ್ತದೆ. ಆದರೆ, ಶಿಕ್ಷಣಕ್ಕೆ ಅಂಥ ಯಾವುದೇ ಗಡಿ ಇಲ್ಲ. ಅದಕ್ಕೆ ಠಕ್ಕರ್‌ ಕುಟುಂಬವೇ ಸಾಕ್ಷಿ. ಸ್ಥಳೀಯ ಶಾಸಕ ನಂಜೇಗೌಡರ ಶ್ರಮವೂ ಇದರಲ್ಲಿ ಅಡಗಿದೆ’ ಎಂದು ಶ್ಲಾಘಿಸಿದರು.

‘ಇಡೀ ರಾಜ್ಯದಲ್ಲಿ ಹೆಚ್ಚು ಸರ್ಕಾರಿ ಸಿಬ್ಬಂದಿ ಹೊಂದಿರುವ ಯಾವುದಾದರೂ ಇಲಾಖೆ ಇದ್ದರೆ ಅದು ಶಿಕ್ಷಣ ಇಲಾಖೆ ಹಾಗೂ ಸಮಸ್ಯೆ ಕೂಡ ಇದೇ ಇಲಾಖೆಯಲ್ಲಿ ಹೆಚ್ಚು ಇದೆ. ಈಚೆಗೆ ಶಾಲಾ ಶಿಕ್ಷಣ ಇಲಾಖೆಯಲ್ಲಿ ಬಹಳಷ್ಟು ಬದಲಾವಣೆ ತಂದಿದ್ದೇನೆ’ ಎಂದರು.

‘10 ಎಚ್‌ಪಿ ವಿದ್ಯುತ್‌ ಅನ್ನು ಬಂಗಾರಪ್ಪ ಪುಕ್ಸಟೆ ನೀಡಿದರು ಎಂಬುದನ್ನು ಇಡೀ ರಾಜ್ಯದ ರೈತರು ಸ್ಮರಿಸುತ್ತಾರೆ. ಹಾಗೆಯೇ ಬಡವರ ಮನೆಗೆ ಉಚಿತವಾಗಿ ಬೆಳಕು ನೀಡುವ ಕೆಲಸವನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರ ನೀಡಿದೆ. ಐದು ಗ್ಯಾರಂಟಿ ಯೋಜನೆ ಜಾರಿ ಮೂಲಕ ಬಡತನ ನೀಗಿಸುವ ಕೆಲಸವನ್ನು ಮಾಡುತ್ತಿದೆ. ಚುನಾವಣೆ ವೇಳೆ ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿ ನಾನು ಕೆಲಸ ಮಾಡಿದ್ದೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಜಿ.ಪರಮೇಶ್ವರ ಅಧ್ಯಕ್ಷರಾಗಿದ್ದರು’ ಎಂದು ತಿಳಿಸಿದರು.

ಅಮೆರಿಕದಲ್ಲಿ ನೆಲೆಸಿರುವ ಗುಜರಾತಿನ ಮೂಲದ ಉದ್ಯಮ ಜನಾರ್ದನ್ ಠಕ್ಕರ್ ಮಾತನಾಡಿ, ‘ಸರ್ಕಾರಿ ಶಾಲಾ ಮಕ್ಕಳಿಗೂ ಉತ್ತಮ ಸೌಲಭ್ಯ, ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ನಮ್ಮ ಉದ್ದೇಶ. ಮತ್ತ‌ಷ್ಟು ಸರ್ಕಾರಿಗಳ ಶಾಲೆ ಅಭಿವೃದ್ಧಿಗೆ ನಾವು ಬದ್ಧ. ಆದರೆ, ನಿರ್ಮಾಣ ಮಾಡಿಕೊಟ್ಟಿರುವ ಶಾಲಾ ಕಟ್ಟಡಗಳನ್ನು ಚೆನ್ನಾಗಿ ನಿರ್ವಹಣೆ ಮಾಡಬೇಕು’ ಎಂದರು.

ಶಾಸಕ ಕೆವೈ.ನಂಜೇಗೌಡ ಮಾತನಾಡಿ, ‘ಪಟ್ಟಣ ಸೇರಿದಂತೆ ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರದಿಂದ ಸುಮಾರು ₹ 2,500 ಕೋಟಿ ಅನುದಾನ ತಂದಿದ್ದೇನೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್‍ ಹುಟ್ಟುರಾದ ಮಾಸ್ತಿ ಅವರ ಹೆಸರಲ್ಲಿ ವಸತಿ ಶಾಲೆ ನಿರ್ಮಾಣ, ದಾಮರಕುಂಟೆ ಅಭಿವೃದ್ಧಿಗೆ ಸುಮಾರು ₹ 1.50 ಕೋಟಿ ಮೀಸಲಿರಿಸಲಾಗಿದೆ. ₹ 1.5 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಮಾಸ್ತಿ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಯಾಂಕ್‌ ಖರ್ಗೆ ₹ 1 ಕೋಟಿ ಬಿಡುಗಡೆ ಮಾಡಿದ್ದು, ಮಾಸ್ತಿಯ ಎಲ್ಲಾ ರಸ್ತೆಗಳಿಗೆ ಡಾಂಬರು ಅಳವಡಿಸುವ ಕೆಲಸ ಆರಂಭಿಸಲಾಗುವುದು’ ಎಂದು ತಿಳಿಸಿದರು. 

‘ದಾನಿಗಳಿಂದ ಸಹಕಾರ ಪಡೆದು ಸುಮಾರು ₹ 5 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಗುರುಭವನ ನಿರ್ಮಾಣ ನಡೆಯುತ್ತಿದೆ. ದಾನಿಗಳ ಸಹಕಾರ ಪಡೆದು ಯಾವುದೇ ಕೆಲಸವನ್ನು ಬೇಕಾದರೂ ಉತ್ತಮವಾಗಿ ಮಾಡಬಹುದು’ ಎಂದರು.

ಒಸಾಟ್‌ ಸಂಸ್ಥೆ ಸಹ ಸಂಸ್ಥಾಪಕ ವಾದಿರಾಜ್‌ ಭಟ್‌ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಚಿವರು ತಮ್ಮ ವೇತನದಿಂದ ₹ 5 ಲಕ್ಷವನ್ನು ಒಸಾಟ್ ಸಂಸ್ಥೆಗೆ ನೀಡುವುದಾಗಿ ಹೇಳಿದರು. ಕೆ.ವೈ.ನಂಜೇಗೌಡ ಕೂಡ ತಮ್ಮ ವೇತನದಿಂದ ಶಾಲೆಯ ನಿರ್ವಹಣೆಗೆ ₹ 5 ಲಕ್ಷ ಘೋಷಿಸಿದರು.

ದಾನಿ ಲಿಂಡಾ ಠಕ್ಕರ್‌, ವಿಧಾನ ಪರಿಷತ್‌ ಸದಸ್ಯರಾದ ಎಂ.ಎಲ್‌.ಅನಿಲ್‌ ಕುಮಾರ್‌, ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಎಂ.ಆರ್‌.ರವಿ, ಒಸಾಟ್‌ ಸಂಸ್ಥೆಯ ಎನ್‌.ವಿ.ಜಿ.ಕೆ.ಭಟ್‌, ಎನ್‌.ಡಿ.ವೀರಣ್ಣ ಗೌಡ,ಪದಾಧಿಕಾರಿಗಳು, ಸ್ವಯಂಸೇವಕರು, ತಹಶೀಲ್ದಾರ್ ರೂಪಾ, ಶಿಕ್ಷಣ ಇಲಾಖೆಯ ನಿರ್ದೇಶಕ ರವಿ ಚಿನ್ನಣ್ಣ, ಡಿಡಿಪಿಐ ಕೃಷ್ಣಮೂರ್ತಿ, ಡಿಡಿಪಿಯು ಬಾಲಕೃಷ್ಣ, ಇಒ ಕೃಷ್ಣಪ್ಪ, ಬಿಇಒ ಚಂದ್ರಕಲಾ, ಕಾಂಗ್ರೆಸ್ ಮುಖಂಡ ವಿಜಯನರಸಿಂಹ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷ ನವೀನ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಕ್ರಂ ಪಾಷ, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಂಜಿನಪ್ಪ, ಸದಸ್ಯ ಆಶ್ವಥ ರೆಡ್ಡಿ, ದಿನ್ನಳ್ಳಿ ರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಾಳಿಗಾನಹಳ್ಳಿ ಶ್ರೀನಿವಾಸ್, ಶಾಲಾ ಶಿಕ್ಷಕರು, ಮಕ್ಕಳು, ಪೋಷಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರ ಸಂಭ್ರಮ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಸಂಭ್ರಮ
- ಮಾಸ್ತಿ ಶಾಲೆಯ ಮಾದರಿಯಲ್ಲೇ ರಾಜ್ಯದ ವಿವಿಧೆಡೆ ಹೈಟೆಕ್‌ ಶಾಲೆಗಳನ್ನು ನಿರ್ಮಾಣ ಮಾಡಲಿದ್ದೇವೆ. ಸಕಲ ಸೌಲಭ್ಯ ಒದಗಿಸಲಿದ್ದೇವೆ. ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು ಎಂಬುದಷ್ಟೇ ನಮ್ಮ ಬೇಡಿಕೆ
ಮಧು ಬಂಗಾರಪ್ಪ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ‌ಸಚಿವ
ದೇವಾಲಯಗಳನ್ನು ಚಿಕ್ಕದಾಗಿ ಕಟ್ಟಬೇಕು ಶಾಲೆಗಳನ್ನು ದೊಡ್ಡದಾಗಿ ಕಟ್ಟುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಒತ್ತು ಕೊಡಬೇಕು
ಕೆ.ವೈ.ನಂಜೇಗೌಡ ಶಾಸಕ

ಠಕ್ಕರ್‌ ದಂಪತಿ ಭಾವಚಿತ್ರ ಅಳವಡಿಕೆ

‘ಗಡಿಗ್ರಾಮ ಮಾಸ್ತಿಯಲ್ಲಿ ಸುಮಾರು ₹ 8 ಕೋಟಿ ವೆಚ್ಚದಲ್ಲಿ ಸರ್ಕಾರಿ ಶಾಲಾ ಕಟ್ಟಡವನ್ನು ಹೈಟೆಕ್‌ ಆಗಿ ಮರು ನಿರ್ಮಾಣ ಮಾಡುವ ಮೂಲಕ ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿರುವ ಜನಾರ್ದನ್‌ ಹಾಗೂ ಲಿಂಡಾ ಠಕ್ಕರ್‌ ದಂಪತಿಯ ಭಾವಚಿತ್ರವನ್ನು ಶಾಲೆಯಲ್ಲಿ ಅಳವಡಿಸಬೇಕು’ ಎಂದು ಶಾಸಕ ನಂಜೇಗೌಡ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ದಾನಿ ದಂಪತಿಯ ಖುಷಿ!

ದಾನಿಗಳಾದ ಜನಾರ್ದನ್‌ ಹಾಗೂ ಲಿಂಡಾ ಠಕ್ಕರ್‌ ದಂಪತಿ ತಾವು ನಿರ್ಮಿಸಿಕೊಟ್ಟಿರುವ ಮಾಸ್ತಿಯ ಕರ್ನಾಟಕ ಪಬ್ಲಿಕ್‌ ಶಾಲೆಯ ಕಟ್ಟಡದಲ್ಲಿ ಶನಿವಾರ ಓಡಾಡುತ್ತಾ ಖುಷಿಪಟ್ಟರು. ಕೊಠಡಿಗಳಿಗೆ ತೆರಳಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಿಕ್ಷಕರ ಜೊತೆ ಮಾತನಾಡಿ ಏನೆಲ್ಲಾ ಸೌಕರ್ಯ ಬೇಕು ಎಂದು ಕೇಳಿದರು. ಈಗ ಒದಗಿಸಿರುವ ಸೌಲಭ್ಯಗಳನ್ನು ಚೆನ್ನಾಗಿ ಬಳಸಿಕೊಂಡು ಮುಂದೆ ಬರುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.