ADVERTISEMENT

ಕೋಲಾರ | ವರ್ಷಾಂತ್ಯಕ್ಕೆ 272 ಕೆರೆಗಳಿಗೆ ನೀರು

ಕೆ.ಸಿ.ವ್ಯಾಲಿ 2ನೇ ಹಂತದಡಿ ಕೋಲಾರ ತಾಲ್ಲೂಕಿನ 30 ಕೆರೆ ತುಂಬಿಸುವ ಯೋಜನೆಗೆ ಸಿದ್ದರಾಮಯ್ಯ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:09 IST
Last Updated 5 ಸೆಪ್ಟೆಂಬರ್ 2025, 6:09 IST
<div class="paragraphs"><p>ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚುವಲ್‌ ವೇದಿಕೆ ಮೂಲಕ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರು. </p></div>

ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಚುವಲ್‌ ವೇದಿಕೆ ಮೂಲಕ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರು.

   

ಕೋಲಾರ: ಬಯಲು ಸೀಮೆಯ ಜಿಲ್ಲೆಗಳ ಅಂತರ್ಜಲ ವೃದ್ಧಿಗೆ ಪ್ರಾರಂಭಿಸಲಾಗಿರುವ ಕೆ.ಸಿ.ವ್ಯಾಲಿ 2 ನೇ ಹಂತದ ಯೋಜನೆಯಡಿ ಲಕ್ಷ್ಮಿಸಾಗರ ಪಂಪ್‌ ಹೌಸ್‌ನಿಂದ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಪಂಪಿಂಗ್‌ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಬೆಂಗಳೂರಿನ ತಮ್ಮ ಕಾವೇರಿ ನಿವಾಸದಲ್ಲಿ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿದರು.

ಕೋಲಾರ ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ತಾಲ್ಲೂಕಿನ ನರಸಾಪುರ ಹೋಬಳಿಯ ಲಕ್ಷ್ಮಿಸಾಗರ ಗ್ರಾಮದಲ್ಲಿನ ಕೆ.ಸಿ.ವ್ಯಾಲಿ ಯೋಜನೆಯ ಐದನೇ ಪಂಪಿಂಗ್ ಕೇಂದ್ರದ ಬಳಿ
ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ‘ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, 272 ಕೆರೆಗಳನ್ನು ತುಂಬಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ನದಿಗಳಲಿಲ್ಲದೆ ಇರುವುದರಿಂದ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ. ₹ 446 ಕೋಟಿಗಳ ವೆಚ್ಚದಲ್ಲಿ ಎರಡನೇ ಹಂತದ ಯೋಜನೆ ಕೈಗೊಳ್ಳಲಾಗಿದೆ. ಕೋಲಾರ ಜಿಲ್ಲೆಯ 222 ಕೆರೆಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ 50 ಕೆರೆಗಳನ್ನು ತುಂಬಿಸಲಾಗುತ್ತದೆ’ ಎಂದರು.

‘ಬೆಂಗಳೂರಿನ ಸುತ್ತಮುತ್ತಲಿನ
ಬಯಲು ಸೀಮೆಯ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗೆ ನಾವು ಹಿಂದಿನ ಸಲ ಅಧಿಕಾರದಲ್ಲಿದ್ದಾಗ ಕೈಗೊಂಡ ಯೋಜನೆಗಳು ಈ ಭಾಗದ ರೈತರ ಜೀವನ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ನೀರಿನ ಅಭಾವದಿಂದ ಬಳಲುತ್ತಿದ್ದ ಜನರ ಆರ್ಥಿಕ ಹಾಗೂ ಸಾಮಾಜಿಕ ಮಟ್ಟದಲ್ಲಿ ಅಭಿವೃದ್ಧಿಯಾಗಿದೆ’ ಎಂದು
ಹೇಳಿದರು.

‘ಮೊದಲನೇ ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ -ಚಿಕ್ಕಬಳ್ಳಾಪುರ ಕೆರೆಗಳನ್ನು ಯಶಸ್ವಿಯಾಗಿ ತುಂಬಿಸಲಾಗಿದೆ. ಈ ನೀರನ್ನು ಕುಡಿಯಲು ಬಳಸುವುದಿಲ್ಲ. ಕೆರೆ ತುಂಬಿಸಿದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಉತ್ತಮಗೊಂಡಿದೆ’ ಎಂದು ನುಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘272 ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆ ರೂಪಿಸುವ ಮೂಲಕ ನಮ್ಮ ಕಾಂಗ್ರೆಸ್ ಸರ್ಕಾರ ಬಯಲುಸೀಮೆಯ ಜನರ ಹಿತ ಕಾಪಾಡಲು ಮುಂದಡಿ ಇಟ್ಟಿದೆ. ಆ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ದಿಯಾಗಿದೆ’ ಎಂದರು.

ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ‘ಪ್ರಸ್ತುತ ಈ ಯೋಜನೆಯಲ್ಲಿ 9 ಪಂಪಿಂಗ್‌ ಸ್ಟೇಷನ್‌ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಲಕ್ಷ್ಮಿಸಾಗರದ 5 ನೇ ಪಂಪಿಂಗ್‌ ಕೇಂದ್ರದಿಂದ ಕೋಲಾರ ತಾಲ್ಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇನ್ನುಳಿದ ಪಂಪಿಂಗ್‌ ಕೇಂದ್ರಗಳನ್ನು ಪ್ರಸಕ್ತ ಸಾಲಿನ ಅಂತ್ಯದೊಳಗೆ ಪೂರ್ಣಗೊಳಿಸಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

ಸಿ.ಎಂ ಅಧಿಕೃತ ನಿವಾಸದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ,‌ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್,‌ ಕೋಲಾರ ಶಾಸಕ ಕೊತ್ತೂರು ‌ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್ ಇದ್ದರು.

ಲಕ್ಷ್ಮಿಸಾಗರ ಐದನೇ ಪಂಪಿಂಗ್ ಕೇಂದ್ರದ‌ ಮುಂದೆ ದೊಡ್ಡ‌ ಪರದೆಯಲ್ಲಿ ಉದ್ಘಾಟನೆಯ ನೇರ‌ಪ್ರಸಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಪದ್ಮಾ, ಪಿಡಿಒ ಸಂಪರಾಜ್, ನರಸಾಪುರ ಗ್ರಾ.ಪಂ ಅಧ್ಯಕ್ಷ ಕುಮಾರ್, ಸೂಲೂರು ಗ್ರಾ.ಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಸಣ್ಣ ನೀರಾವರಿ ಇಲಾಖೆ ಹೆಚ್ಚುವರಿ ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌ ವಿಷ್ಣು ಕಾಮತ್‌, ಸಹಾಯಕ ಎಂಜಿನಿಯರ್ ಶಶಿಕುಮಾರ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ವೀರೇಂದ್ರ ಪಾಟೀಲ್, ನದೀಂ, ನಾರಾಯಣಸ್ವಾಮಿ, ಲಕ್ಷ್ಮಿಪತಿ ಜಾಲಿ ಬಾನು, ನವೀನ್, ಜಗನ್, ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ವಾಸೀಂ ಪಾಲ್ಗೊಂಡಿದ್ದರು.

ಕೋಲಾರ ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮದಲ್ಲಿರುವ ಕೆ.ಸಿ.ವ್ಯಾಲಿ ಪಂಪಿಂಗ್‌ ಕೇಂದ್ರದಲ್ಲಿ ಪಾಲ್ಗೊಂಡಿದ್ದ ಮುಖಂಡರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಕೆರೆಗಳಿಗೆ ಕೆ.ಸಿ.ವ್ಯಾಲಿ 2ನೇ ಹಂತದಲ್ಲಿ ನೀರು

ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಹರಿಸುವ ಯೋಜನೆ

₹ 446‌.23 ಕೋಟಿ ವೆಚ್ಚದಲ್ಲಿ ಕಾಮಗಾರಿ

ಕೆ.ಸಿ.ವ್ಯಾಲಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಜೆಡಿಎಸ್‌ನವರು ಒಂದು ವಿಚಾರ ಹೇಳಿದರೆ ಕೋಲಾರ, ಚಿಕ್ಕಬಳ್ಳಾಪುರ ಶಾಸಕರು ಯೋಜನೆ ಪರವಾಗಿ ಹತ್ತು ವಿಚಾರ ಹೇಳಬೇಕು
ಸಿದ್ದರಾಮಯ್ಯ, ಮುಖ್ಯಮಂತ್ರಿ
ಜೆಡಿಎಸ್‌ನಿಂದ ಅಪಪ್ರಚಾರ: ಸಿ.ಎಂ
‘ಕೆ.ಸಿ.ವ್ಯಾಲಿ ಯೋಜನೆ ಬಗ್ಗೆ ಜೆಡಿಎಸ್‌ ಪಕ್ಷದವರು ಸೇರಿದಂತೆ ಹಲವರು ಅಪಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್‌ನ ಮುಖಂಡರೊಬ್ಬರು ನ್ಯಾಯಾಲಯಕ್ಕೂ ಹೋಗಿದ್ದಾರೆ. ಅದರೆ, ಕೆ.ಸಿ.ವ್ಯಾಲಿಯಿಂದ ಯಾವುದೇ ಸತ್ಯಾಂಶವಿಲ್ಲ ಎಂಬುವುದು ಈಗಾಗಲೇ ಸಾಬೀತಾಗಿದೆ. ಬೆಳೆಗಳಿಗೆ, ದನಕರುಗಳಿಗೆ, ಪಕ್ಷಿಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ನಿರೂಪಿತವಾಗಿದೆ’ ಎಂದು ಸಿದ್ದರಾಮಯ್ಯ ಹೇಳಿದರು. ‘ಕೋಲಾರ ಜಿಲ್ಲೆಯಲ್ಲಿ ಈ ಮೊದಲು 1,300 ಅಡಿ ಕೊರೆದರೂ ನೀರು ಬರುತ್ತಿರಲಿಲ್ಲ. ಈಗ ಅಂತರ್ಜಲ ಮಟ್ಟ ಹೆಚ್ಚಿದೆ’ ಎಂದರು.
440 ಎಂಎಲ್‌ಡಿ ನೀರು ಹರಿಸಿ
ಕೆ.ಸಿ.ವ್ಯಾಲಿ ಸಂಸ್ಕರಣಾ ಘಟಕ ಗಳಿಂದ 440 ಎಂಎಲ್‌ಡಿ ನೀರು ಹರಿಸಬೇಕು. ಈಗ ಸರಾಸರಿ 290 ಎಂಎಲ್‌ಡಿ ನೀರು ಲಭ್ಯವಾಗು ತ್ತಿದೆ. ಇನ್ನುಳಿದ 150 ಎಂಎಲ್‌ಡಿ ನೀರು ಬೇಗ ಹರಿಸಿ ಎಂದು ಸಿ.ಎಂ, ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರಿಗೆ ಡಿಸಿಎಂ ಸೂಚನೆ
ಕೋಲಾರ ಹಾಗೂ ಚಿಕ್ಕ ಬಳ್ಳಾಪುರ ಭಾಗದ ಕಾಂಗ್ರೆಸ್‌ ಶಾಸಕರು ಕೆ.ಸಿ.ವ್ಯಾಲಿ ವ್ಯಾಪ್ತಿಯ ಕೆರೆ ಬಳಿ ಹೋಗಿ‌ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಿ ಜಾಗೃತಿ ಮೂಡಿಸಬೇಕು. ಎಲ್ಲಾ ತಾಲ್ಲೂಕುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಯೋಜನೆಯ ಅನುಕೂಲಗಳನ್ನು ತಿಳಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರು.
30 ಕೆರೆಗಳಿಗೆ 11.23 ಎಂಎಲ್‌ಡಿ ನೀರು
ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆಯ ಐದನೇ ಪಂಪಿಂಗ್‌ ಕೇಂದ್ರವಾದ ಲಕ್ಷ್ಮಿಸಾಗರದ ಪಂಪ್‌ಹೌಸ್‌ನಿಂದ 5.28 ದಶ ಲಕ್ಷ ಲೀಟರ್‌ (ಎಂಎಲ್‌ಡಿ) ನೀರನ್ನು ಪಂಪ್‌ ಮಾಡಿ 11 ಕೆರೆ ತುಂಬಿಸುವುದು, 1 ಎಂಎಲ್‌ಡಿ ನೀರನ್ನು ಏರು ಕೊಳವೆ ಮಾರ್ಗದ ಮೂಲಕ ಹರಿಸಿ 4 ಕೆರೆ ತುಂಬಿಸುವುದು, 4.95 ಎಂಎಲ್‌ಡಿ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಹರಿಸಿ 15 ಕೆರೆ ತುಂಬಿಸಲಾಗುತ್ತದೆ. ಒಟ್ಟು 30 ಕೆರೆಗಳಿಗೆ 11.23 ಎಂಎಲ್‌ಡಿ ನೀರು ಹರಿಸಲಾಗುತ್ತದೆ.
ಯಾವೆಲ್ಲ ಕೆರೆಗಳಿಗೆ?
ಮಲ್ಲಸಂದ್ರ, ರಾಮಸಂದ್ರ, ಚಾಕರಸನಹಳ್ಳಿ, ಬೆಳಮಾರನಹಳ್ಳಿ, ಗುಟ್ಟಹಳ್ಳಿ, ಕೊರಟಿಮಲ್ಲಂಡಹಳ್ಳಿ–1 ಕೊರಟಿಮಲ್ಲಂಡ ಹಳ್ಳಿ–2, ಮರಿಯಪ್ಪನಹಳ್ಳಿ, ಕಾಮದೇನಹಳ್ಳಿ, ಮಂಚಾಂಡಹಳ್ಳಿ, ವಿಶ್ವನಾಥಪುರ ಕೆರೆ, ಖಾಜಿಕಲ್ಲಹಳ್ಳಿ, ನಾಗಾಲ, ಅಚ್ಚಟನ ಹಳ್ಳಿ–1, ಅಚ್ಚಟನಹಳ್ಳಿ–2, ಮಂಜಲಿ ಕೆರೆ–1, ಮಂಜಲಿ ಕೆರೆ–2, ಕಲ್ಯಾ, ಚೊಕ್ಕಾಪುರ–1, ಚೊಕ್ಕಾಪುರ–2, ಚೊಕ್ಕಾಪುರ–3, ಚನ್ನಪ್ಪನಹಳ್ಳಿ, ಪುರಹಳ್ಳಿ ಕೆರೆ–1, ಪುರಹಳ್ಳಿ ಕೆರೆ–2, ಮೇಡಿಹಳ್ಳಿ ಕೆರೆ–1, ಮೇಡಿಹಳ್ಳ ಕೆರೆ–2, ನಾಗನಲ್ಲ, ಬೂಸನಹಳ್ಳಿ, ಉರುಗಿಲಿ ದಿನ್ನಹಳ್ಳಿ ಕೆರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.