ADVERTISEMENT

ಕೀರ್ತಿಕೊಪ್ಪ: ನೀರಿಗಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 3:51 IST
Last Updated 11 ಜೂನ್ 2020, 3:51 IST
ಕೆಜಿಎಫ್‌ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಮುಂಭಾಗ ಬುಧವಾರ ಕೀರ್ತಿಕೊಪ್ಪ ಗ್ರಾಮಸ್ಥರು ಸಮರ್ಪಕ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಕೆಜಿಎಫ್‌ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಮುಂಭಾಗ ಬುಧವಾರ ಕೀರ್ತಿಕೊಪ್ಪ ಗ್ರಾಮಸ್ಥರು ಸಮರ್ಪಕ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ಕೆಜಿಎಫ್‌: ಕುಡಿಯುವ ನೀರಿನ ಬವಣೆ ತಪ್ಪಿಸಲು ಹೆಚ್ಚಿನ ನೀರಿನ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ಕೀರ್ತಿಕೊಪ್ಪ ಗ್ರಾಮದ ಜನ ಬುಧವಾರ ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಧರಣಿ ನಡೆಸಿದರು.

ಗ್ರಾಮದಲ್ಲಿ ಖಾಸಗಿ ಕೊಳವೆಬಾವಿಯಿಂದ ನೀರು ಸರಬರಾಜು ಆಗುತ್ತಿದೆ. ಕೇವಲ ಎರಡು ಗಂಟೆ ನೀರು ನೀಡಲಾಗುತ್ತಿದೆ. ಇಡೀ ಗ್ರಾಮದ ಜನತೆಗೆ ಇದು ಸಾಕಾಗುತ್ತಿಲ್ಲ. ಹೆಚ್ಚುವರಿ ಸಮಯ ನೀರು ಕೊಡಿಸಬೇಕು ಎಂದು ಒತ್ತಾಯಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಶವಂತ್‌, ‘ಗ್ರಾಮದಲ್ಲಿ ಸರ್ಕಾರಿ ಕೊಳವೆಬಾವಿ ವಿಫಲವಾಗಿರುವುದರಿಂದ ಖಾಸಗಿ ಕೊಳವೆಬಾವಿಯಿಂದ ನೀರು ನೀಡಲಾಗುತ್ತಿದೆ. ಬೇಸಿಗೆ ಬಿಸಿಲಿನಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಖಾಸಗಿ ಬೋರ್‌ವೆಲ್‌ ಮಾಲೀಕರು ತಿಳಿಸಿದ್ದಾರೆ. ಆದ್ದರಿಂದ ಸರ್ಕಾರಿ ಕೊಳವೆಬಾವಿ ಸಿದ್ಧವಾಗುವ ತನಕ ಗ್ರಾಮಸ್ಥರು ನೀರಿನ ಮಿತವ್ಯಯ ಮಾಡಬೇಕು’ ಎಂದು ಹೇಳಿದರು.

ADVERTISEMENT

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬಹುದು. ಆದರೆ, ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಆದ್ದರಿಂದ ಖಾಸಗಿ ಕೊಳವೆಬಾವಿಯಿಂದ ನೀರು ಪಡೆಯುವುದು ಉತ್ತಮ. ಗ್ರಾಮಸ್ಥರು ಟ್ಯಾಂಕರ್ ಮೂಲಕವೇ ಬೇಕು ಎನ್ನುವುದಾದರೆ ಸರಬರಾಜು ಮಾಡಲಾಗುವುದು ಎಂದು
ತಿಳಿಸಿದರು.

ಖಾಸಗಿ ಕೊಳವೆಬಾವಿಯಿಂದಲೇ ನೀರು ಪಡೆಯುವುದು ಉತ್ತಮ. ಇನ್ನೂ ಹೆಚ್ಚಿನ ಸಮಯ ನೀರು ಪೂರೈಸಲು ಸೂಚಿಸಬೇಕು ಎಂದು ಗ್ರಾಮಸ್ಥರು ಕೋರಿದರು.

ಗ್ರಾಮದ ಮುಖಂಡರಾದ ರಾಮಕೃಷ್ಣಪ್ಪ, ವೆಂಕಟೇಶಪ್ಪ, ವೆಂಕಟಲಕ್ಷ್ಮಮ್ಮ, ಲೀಲಾವತಿ, ಪಾರ್ವತಮ್ಮ, ಗೌರಮ್ಮ, ಆಂಜಮ್ಮ, ಶ್ರೀನಾಥ್‌, ವೆಂಕಟೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.