ಕೆಜಿಎಫ್: ನಗರದ ಹೊರವಲಯದ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ರಸ್ತೆ ಟೋಲ್ ಬಳಿ ಎರಡು ಬೈಕ್‌ಗಳಲ್ಲಿ ಬಂದ ಯುವಕರು ವ್ಹೀಲೆ ಮಾಡಿದ್ದಾರೆ.
ಒಂದು ದ್ವಿಚಕ್ರ ವಾಹನದಲ್ಲಿ ಕುಳಿತಿದ್ದ ಹಿಂಬದಿ ಸವಾರ ಬಳಿ ಲಾಂಗ್ ಹಿಡಿದುಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಬೆಮಲ್ ನಗರದ ಬೇತಮಂಗಲ ರಸ್ತೆಯಿಂದ ಬುಧವಾರ ಸಂಜೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಯುವಕರು ಟೋಲ್ ರಸ್ತೆಯಲ್ಲಿ ಬೈಕನ್ನು ಅಪಾಯಕಾರಿಯಾಗಿ ಓಡಿಸಿದ್ದಾರೆ. ಅಲ್ಲದೆ, ನಡುರಸ್ತೆಯಲ್ಲೇ ವ್ಹೀಲೆ ಮಾಡಿದ್ದಾರೆ. ಆಗ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬೆಮಲ್ ನಿವಾಸಿಯೊಬ್ಬರು, ಯುವಕರ ಈ ಚೇಷ್ಟೆಯನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೊದಲ್ಲಿ ಒಬ್ಬ ಯುವಕ ಕೈಯಲ್ಲಿ ಲಾಂಗ್ ಹಿಡಿದುಕೊಂಡಿರುವುದು ಕಂಡುಬಂದಿದೆ.
ಈ ಮೊದಲು ವ್ಹೀಲೆ ಮಾಡುವವರು ಎಕ್ಸ್‌ಪ್ರೆಸ್ ಕಾರಿಡಾರ್‌ನಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದರು. ಹೆದ್ದಾರಿಯಲ್ಲಿನ ರಸ್ತೆ ಅಪಘಾತಗಳ ತಡೆಗಾಗಿ ಬೈಕ್ ಸವಾರರು ಎಕ್ಸ್‌ಪ್ರೆಸ್ ಕಾರಿಡಾರ್ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಮುಖ್ಯರಸ್ತೆಯಲ್ಲಿ ವ್ಹೀಲೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಬೇತಮಂಗಲ ರಸ್ತೆಯಿಂದ ಟೋಲ್‌ವರೆಗಿನ ವಿಶಾಲವಾದ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಇರುತ್ತದೆ. ಹೀಗಾಗಿ, ಯುವಕರು ವ್ಹೀಲೆ ಮಾಡಲು ಇದೇ ರಸ್ತೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಅಪ್ರಾಪ್ತ ವಯಸ್ಸಿನ ಬಾಲಕರು ಮತ್ತು ಬಾಲಕಿಯರು ಇತ್ತೀಚಿನ ದಿನಗಳಲ್ಲಿ ಮುಖ್ಯರಸ್ತೆಯಲ್ಲಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಸಾರ್ವಜನಿಕ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.