ಕೆಜಿಎಫ್: ರಾಬರ್ಟ್‌ಸನ್‌ಪೇಟೆಯಲ್ಲಿರುವ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ಕಾರ್ಮಿಕನೊಬ್ಬ ಸುಮಾರು 1.31 ಕೋಟಿ ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಿ, ಚಿನ್ನದ ಅಂಗಡಿ ಮಾಲೀಕ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಇಲ್ಲಿನ ಪಿ. ಬಸ್ತಿಮಲ್ ಬೋಹ್ರಾ ಜ್ಯುವೆಲ್ಲರಿ ಅಂಗಡಿ ಮಾಲೀಕ ನಿತೀಶ್ ಕುಮಾರ್ ಅವರು, ತಮ್ಮ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಯಶ್ ಮತ್ತು ಸುರೇಂದ್ರ ಎಂಬುವರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಜಸ್ಥಾನದ ಮೂಲದ ಆರೋಪಿ ಸುರೇಂದ್ರ 2019ರಿಂದಲೂ ನಿತೀಶ್ ಕುಮಾರ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಒಂದು ವರ್ಷದ ನಂತರ ಕೆಲಸ ಬಿಟ್ಟು ಹೋಗಿದ್ದ. ಕಳೆದ ವಾರ ಅಂಗಡಿ ಮಾಲೀಕ ನಿತೀಶ್ ಕುಮಾರ್ ಅವರ ಸಹೋದರ ಹಾಗೂ ಪಾಲುದಾರನಾದ ವಿನೋದ್ ಕುಮಾರ್ ಅವರಿಗೆ ಕರೆ ಮಾಡಿದ ಸುರೇಂದ್ರ, ತನಗೆ ಪರಿಚಯವಿರುವ ಹುಡುಗನೊಬ್ಬ ಕೆಲಸ ಹುಡುಕುತ್ತಿದ್ದಾನೆ. ಆತ ವಿದ್ಯಾಭ್ಯಾಸ ಮಾಡಿಲ್ಲ. ಆದರೆ, ನಂಬಿಕಸ್ಥ ಹುಡುಗ ಎಂದು ತಿಳಿಸಿದ್ದ. ಇದನ್ನು ನಂಬಿದ ವಿನೋದ್ ಕುಮಾರ್, ರಾಜಸ್ಥಾನದ ಬಿಕನೇರ್‌ನಿಂದ ಬಂದಿದ್ದ ಆರೋಪಿ ಯಶ್‌ಗೆ ಕೆಲಸ ನೀಡುತ್ತಾರೆ. ಆದರೆ, ಯಶ್‌ಗೆ ಕೆಲಸ ನೀಡುವಾಗ ಆತನ ಆಧಾರ್, ಗುರುತಿನ ಚೀಟಿ ಪಡೆದಿರಲಿಲ್ಲ. ಜೊತೆಗೆ ಆರೋಪಿಗೆ ಗೋದಾಮಿನಲ್ಲಿ ಉಳಿಯಲು ವ್ಯವಸ್ಥೆ ಮಾಡಿಕೊಡಲಾಗಿತ್ತು.
ದೀಪಾವಳಿ ಅಂಗವಾಗಿ ಬುಧವಾರ ಅಂಗಡಿ ಸ್ವಚ್ಛಗೊಳಿಸಲಾಗುತ್ತಿತ್ತು. ಹೊಸ ಹುಡುಗ ಯಶ್ ಕೂಡ ಕೆಲಸ ಮಾಡುತ್ತಿದ್ದ. ನಂತರ ಎರಡನೇ ಮಹಡಿಗೆ ಹೋದ ಯಶ್ ಬಂಗಾರದ ಒಡವೆಗಳನ್ನು ತನ್ನ ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಇಟ್ಟುಕೊಂಡು, ಏನೂ ತಿಳಿಯದವನಂತೆ ಅಂಗಡಿಯಿಂದ ಆಚೆ ಹೋಗಿದ್ದಾನೆ. ತುಂಬಾ ಹೊತ್ತು ಆದರೂ, ಆತ ವಾಪಸ್ ಬರದಿದ್ದಾಗ ಅನುಮಾನಗೊಂಡ ಅಂಗಡಿ ಮಾಲೀಕರು, ಯಶ್ ಮೊಬೈಲ್‌ಗೆ ಕರೆ ಮಾಡಿದ್ದು, ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡ ಅಂಗಡಿ ಮಾಲೀಕರು, ಎರಡನೇ ಮಹಡಿಗೆ ಬಂದು ನೋಡಿದಾಗ, ಶೌಚಾಲಯದಲ್ಲಿ ಬಂಗಾರದ ಒಡವೆಗಳ ಡಬ್ಬಗಳು ಬಿದ್ದಿದ್ದನ್ನು ಕಂಡಿದ್ದಾರೆ. ಆತನನ್ನು ಕೆಲಸಕ್ಕೆ ಕರೆದುತಂದು ಬಿಟ್ಟಿದ್ದ ಸುರೇಂದ್ರನಿಗೆ ಕರೆ ಮಾಡಿದ್ದಾರೆ. ಆದರೆ, ಆತನ ಮೊಬೈಲ್ ಸಂಖ್ಯೆಯೂ ಸ್ವಿಚ್ ಆಫ್ ಆಗಿತ್ತು ಎಂದು ತಿಳಿದುಬಂದಿದೆ.
ಅಂಗಡಿಯಲ್ಲಿ ಸುಮಾರು 1.31 ಕೋಟಿ ಮೌಲ್ಯದ 1.93 ಕೆ.ಜಿ ಚಿನ್ನ ಕಳ್ಳತನವಾಗಿದೆ ಎಂಬುದು ಪರಿಶೀಲನೆಯಿಂದ ಗೊತ್ತಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಶಿವಾಂಶು ರಜಪೂತ್ ಹಾಗೂ ಡಿವೈಎಸ್‌ಪಿ ಲಕ್ಷ್ಮಯ್ಯ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.