ADVERTISEMENT

ಆಸ್ಪತ್ರೆಗೆ ಹೆಚ್ಚುವರಿ ವೈದ್ಯರನ್ನು ಕೊಡಿ: ಶಾಸಕಿ ರೂಪಕಲಾ ಮನವಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 6:42 IST
Last Updated 22 ಜನವರಿ 2026, 6:42 IST
ಕೆಜಿಎಫ್‌ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ.ರಜನಿ ಅವರು ಆಸ್ಪತ್ರೆಗೆ ಬೇಕಾದ ಸವಲತ್ತುಗಳ ಕುರಿತು ಶಾಸಕಿ ಎಂ.ರೂಪಕಲಾ ಅವರೊಡನೆ ಚರ್ಚಿಸಿದರು.
ಕೆಜಿಎಫ್‌ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ.ರಜನಿ ಅವರು ಆಸ್ಪತ್ರೆಗೆ ಬೇಕಾದ ಸವಲತ್ತುಗಳ ಕುರಿತು ಶಾಸಕಿ ಎಂ.ರೂಪಕಲಾ ಅವರೊಡನೆ ಚರ್ಚಿಸಿದರು.   

ಕೆಜಿಎಫ್‌: ರಾಬರ್ಟಸನ್‌ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಜೆ ವೇಳೆ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುವುದರಿಂದ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಬೇಕೆಂದು ಶಾಸಕಿ ಎಂ.ರೂಪಕಲಾ ಮನವಿ ಮಾಡಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮಗುವಿನ ಆಸ್ಪತ್ರೆಯನ್ನು ಆಧುನೀಕರಿಸುವ ಮತ್ತು ಮೇಲ್ದರ್ಜೆಗೆ ಏರಿಸುವ ಕುರಿತು ವರದಿ ಪಡೆಯಲು ಬುಧವಾರ ನಗರಕ್ಕೆ ಆಗಮಿಸಿದ್ದ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕಿ ಡಾ.ರಜನಿ ಅವರಿಗೆ ಶಾಸಕಿ ಆಸ್ಪತ್ರೆಯಲ್ಲಿ ಬೇಕಾಗಿರುವ ಸೌಕರ್ಯಗಳ ಕುರಿತು ಚರ್ಚೆ ನಡೆಸಿದ ನಂತರ ಅವರು ಮಾತನಾಡಿದರು.

ನಗರದಲ್ಲಿ ಹೆಚ್ಚು ಮಂದಿ ಕಾರ್ಮಿಕರಿದ್ದು, ಸಂಜೆ ವೇಳೆ ಚಿಕಿತ್ಸೆಗಾಗಿ ಬರುತ್ತಾರೆ. ತುರ್ತು ಚಿಕಿತ್ಸಾ ಘಟಕ ಮತ್ತು ಐಸಿಯು ಘಟಕ ಅಗತ್ಯವಿದೆ. ಸದಾ ವೈದ್ಯರು ಲಭ್ಯ ಇರುತ್ತಾರೆ ಎಂಬ ಭಾವನೆ ಜನರಿಗೆ ಬಂದರೆ ಅವರು ಚಿಕಿತ್ಸೆಗಾಗಿ ಬರುತ್ತಾರೆ. ಇಲ್ಲಿಗೆ ವರ್ಗಾವಣೆಯಾಗಿದ್ದ ಸರ್ಜನ್‌ ದೀರ್ಘ ರಜೆ ಹಾಕಿಹೋಗಿದ್ದಾರೆ. ಅವರು ನಮಗೆ ಬೇಡ. ಇಲ್ಲಿಗೆ ವರ್ಗಾವಣೆಯಾದ ದಿನದಿಂದ ಒಂದು ದಿನ ಕೆಲಸಕ್ಕೆ ಬಂದಿಲ್ಲ. ಅವರ ಬದಲು ಬೇರೆ ಯಾರನ್ನಾದರೂ ನಿಯೋಜಿಸಿ ಎಂದು ತಿಳಿಸಿದರು.

ADVERTISEMENT

ರಕ್ತ ನಿಧಿ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಹೆಚ್ಚುವರಿ ಸಿಬ್ಬಂದಿಯನ್ನು ನೀಡಬೇಕೆಂದು ಕೋರಿದರು.

ಮೂವರು ಇನ್‌ ಸರ್ವಿಸ್ ಸ್ನಾತಕೋತ್ತರ ಪದವಿ ಮುಗಿಸಿದ ಮೂವರು ವೈದ್ಯರು ಇಲ್ಲಿಗೆ ಬರಲು ಸಿದ್ದರಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ವರ್ಗಾವಣೆ ಮಾಡಿಸಿಕೊಳ್ಳಬಹುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ ಕುಮಾರ್‌ ಸಲಹೆ ಮಾಡಿದರು.

ಆರೋಗ್ಯ ಸಮಸ್ಯೆಗಳ ಕುರಿತು ಶಾಸಕಿ ಸದನದಲ್ಲಿ ಮಾತನಾಡಿದ ಹಿನ್ನೆಲೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಾದರೆ ಅವಶ್ಯಕತೆ ಇರುವ ಪ್ರಸ್ತಾವವನ್ನು ತರಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆಸ್ಪತ್ರೆಯ ವಸ್ತುಸ್ಥಿತಿಯ ಬಗ್ಗೆ ವರದಿ ನೀಡುವುದಾಗಿ ಡಾ.ರಜನಿ ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್‌, ಡಾ.ಚಾರಿಣಿ, ಡಾ.ಚಂದನ್‌, ಡಾ.ಸುನಿಲ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.