ಕೆಜಿಎಫ್: ನಗರದ ಹೊರವಲಯದ ಮಲ್ಲಂಪಲ್ಲಿ ಗ್ರಾಮದ ಬಳಿ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಲು ಜಿಲ್ಲಾಡಳಿತ ನಾಲ್ಕು ಎಕರೆ ಜಮೀನನ್ನು ಮಂಜೂರು ಮಾಡಿದೆ ಎಂದು ದಲಿತ ಸಮರ ಸೇನೆ ಮುಖಂಡೆ ಪವಿತ್ರಾ ಹೇಳಿದ್ದಾರೆ.
ನಗರದ ಊರಿಗಾಂ ಫೈಲೈಟ್ಸ್ ಬಳಿ ಭಾನುವಾರ ನಿವೇಶನ ರಹಿತ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಡಳಿತವು ಈ ಮೊದಲು ಒಂಬತ್ತು ಎಕರೆ ಜಮೀನನ್ನು ಅಜ್ಜಂಪಲ್ಲಿ ಗ್ರಾಮದ ಬಳಿ ಸ್ಲಂ ಬೋರ್ಡ್‌ಗೆ ನೀಡಿತ್ತು. ಸ್ಥಳ ಪರಿಶೀಲನೆ ನಡೆಸಿದ್ದ ಮಂಡಳಿ ಅಧಿಕಾರಿಗಳು ನಕ್ಷೆಯನ್ನು ತಯಾರು ಮಾಡಿದ್ದರು. ಫಲಾನುಭವಿಗಳ ಪಟ್ಟಿಗೆ ಜಿಲ್ಲಾಡಳಿತ ಒಪ್ಪಿಗೆ ಸಹ ನೀಡಿತ್ತು. ನಂತರ, ಮಂಜೂರಾದ ಜಮೀನನ್ನು ಕೈಗಾರಿಕೆ ಅಭಿವೃದ್ಧಿಗೆ ನೀಡಲಾಯಿತು. ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ಮಹಿಳೆಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆ. 19 ರಂದು ನ್ಯಾಯಾಧೀಶ ಬಿ.ಎಂ.ಶ್ಯಾಂ ಪ್ರಸಾದ್ ಅವರಿದ್ದ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಮನೆ ಇಲ್ಲದವರ ಪರವಾಗಿ ತೀರ್ಪು ಬಂದಿದೆ. ತೀರ್ಪು ಬರಲು ಶಾಸಕಿ ಎಂ.ರೂಪಕಲಾ ಮತ್ತು ಜಿಲ್ಲಾಧಿಕಾರಿ ಅವರು ಪೂರಕ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ಹೇಳಿದರು.
ನಗರದಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ದಿನನಿತ್ಯ ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋಗುತ್ತಾರೆ. ಅವರಿಗೆ ಒಂದು ಸೂರು ಇಲ್ಲ. ಇಂತಹ 36 ಸಾವಿರ ಕುಟುಂಬಗಳಿಗೆ ಸ್ವಂತ ಮನೆ ಇಲ್ಲ. ಅವರೆಲ್ಲರೂ ಬಿಜಿಎಂಎಲ್‌ನ ಮುರುಕು ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಅಂತವರಿಗೆ ಮನೆ ನೀಡಲು ಸಂಘಟನೆ ಹೋರಾಟ ನಡೆಸಿತ್ತು. ಹೋರಾಟದ ಫಲವಾಗಿ ಶಾಸಕಿ ನಾಲ್ಕು ಎಕರೆ ಜಮೀನನ್ನು ಮಲ್ಲಂಪಲ್ಲಿ ಗ್ರಾಮದ ಬಳಿ ನೀಡಲು ಜಿಲ್ಲಾಧಿಕಾರಿಗೆ ಸಲಹೆ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ಜಮೀನು ಮಂಜೂರು ಮಾಡುವುದಾಗಿ ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಂಡ ಫಲವಾಗಿ ಮನೆ ಇಲ್ಲದವರೆರಿಗೆ ಸ್ವಂತ ಮನೆ ಹೊಂದುವ ಅವಕಾಶ ಒದಗಿ ಬಂದಿದೆ ಎಂದರು.
ಸ್ಲಂ ಬೋರ್ಡ್ ಮಂಜೂರಾದ ಜಾಗದಲ್ಲಿ 405 ಮನೆಗಳನ್ನು ಮೊದಲ ಹಂತದಲ್ಲಿ ನಿರ್ಮಾಣ ಮಾಡಲಿದೆ. ಜಿ+1 ರೀತಿಯ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಮೊದಲು ಆಯ್ಕೆಯಾಗಿದ್ದ ಫಲಾನುಭವಿಗಳೇ ಹೊಸದಾಗಿ ನಿರ್ಮಾಣವಾಗುವ ಬಡಾವಣೆಯ ಫಲಾನುಭವಿಗಳಾಗಿದ್ದಾರೆ. ನಗರದ ಟ್ಯಾಂಕ್ ಬ್ಲಾಕ್, ಕೋರಮಂಡಲ್, ಹೆನ್ರೀಸ್, ಚಾಂಪಿಯನ್, ಫಿಶ್ ಲೈನ್, ಮಿಲ್ ಬ್ಲಾಕ್, ಕೆನಡೀಸ್ ಮೊದಲಾದ ಬಡಾವಣೆಗಳ ಬಡವರಿಗೆ ಮೊದಲ ಹಂತದಲ್ಲಿ ಮನೆಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.
ಇನ್ನೂ ಹೆಚ್ಚಿನ ಸಂಖ್ಯೆ ದಿನಗೂಲಿ ಕಾರ್ಮಿಕರು ಇದ್ದಾರೆ ಎಂದು ಕಾರ್ಮಿಕ ಇಲಾಖೆ ನೀಡಿರುವ ವರದಿ ಮೇರೆಗೆ ಹೆಚ್ಚುವರಿಯಾಗಿ ಆರು ಎಕರೆ ಜಮೀನನ್ನು ನೀಡಲು ಜಿಲ್ಲಾಡಳಿತ ಸಮ್ಮತಿ ಸೂಚಿಸಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.