ADVERTISEMENT

ಕೆಜಿಎಫ್‌ | ಪಾರ್ಕಿಂಗ್‌ ವ್ಯವಸ್ಥೆ: ವರ್ತಕರ ಮನವೊಲಿಸಿದ ಶಾಸಕಿ ಎಂ.ರೂಪಕಲಾ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 4:06 IST
Last Updated 11 ಅಕ್ಟೋಬರ್ 2025, 4:06 IST
ಕೆಜಿಎಫ್‌ ಹುಲ್ಲು ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿದ ಶಾಸಕಿ ಎಂ.ರೂಪಕಲಾ ಮಾರುಕಟ್ಟೆಯ ವರ್ತಕರೊಂದಿಗೆ ಮಾತನಾಡಿದರು. ಆಯುಕ್ತ ಆಂಜನೇಯಲು ಇದ್ದರು.
ಕೆಜಿಎಫ್‌ ಹುಲ್ಲು ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿದ ಶಾಸಕಿ ಎಂ.ರೂಪಕಲಾ ಮಾರುಕಟ್ಟೆಯ ವರ್ತಕರೊಂದಿಗೆ ಮಾತನಾಡಿದರು. ಆಯುಕ್ತ ಆಂಜನೇಯಲು ಇದ್ದರು.   

ಕೆಜಿಎಫ್‌: ಹುಲ್ಲು ಮಾರುಕಟ್ಟೆಯಲ್ಲಿ ಪಾರ್ಕಿಂಗ್‌ ಸ್ಥಳಕ್ಕಾಗಿ ಜಾಗ ಮೀಸಲು ಇಡಲು ಕೆಲ ಅಂಗಡಿಗಳನ್ನು ತೆರವು ಮಾಡಲಾಗುತ್ತಿದೆ. ಅಭಿವೃದ್ಧಿಯ ದೃಷ್ಟಿಯಿಂದ ವರ್ತಕರು ಸಹಕರಿಸಬೇಕೆಂದು ಶಾಸಕಿ ಎಂ.ರೂಪಕಲಾ ಮನವಿ ಮಾಡಿದರು.

ನಗರಸಭೆ ಅಧಿಕಾರಿಗಳೊಂದಿಗೆ ಬುಧವಾರ ಹುಲ್ಲು ಮಾರುಕಟ್ಟೆಗೆ ಭೇಟಿ ನೀಡಿದ ಅವರು, 25 ವರ್ಷದಿಂದ ಇಲ್ಲಿ ಅಂಗಡಿಗಳನ್ನು ಇಟ್ಟುಕೊಂಡಿದ್ದರೂ, ಮೂಲಭೂತ ಸೌಕರ್ಯಗಳಿಲ್ಲದೆ ವ್ಯಾಪಾರ ಮಾಡುತ್ತಿದ್ದೀರಿ. 56 ಅಂಗಡಿಗಳಲ್ಲಿ ಹಲವು ಅಂಗಡಿಗಳ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿಲ್ಲ. ಐದು ಅಂಗಡಿ ಬಿಟ್ಟರೆ ಉಳಿದ ಅಂಗಡಿಯವರು ಏಕೆ ವ್ಯಾಪಾರ ಮಾಡುತ್ತಿಲ್ಲ. ಬಸ್‌ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ. ಸಾರ್ವಜನಿಕರಿಗೆ ಮತ್ತು ಅಂಗಡಿ ವರ್ತಕರಿಗೆ ಪಾರ್ಕಿಂಗ್‌ ಸ್ಥಳ ಇಲ್ಲ. ಇದರ ಪಕ್ಕದಲ್ಲಿಯೇ ಇರುವ ಎಂ.ಜಿ.ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ವ್ಯಾಪಾರಗಳು ನಡೆಯುತ್ತಿವೆ. ಅಲ್ಲಿ ಕೂಡ ಉತ್ತಮ ದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಪಾರ್ಕಿಂಗ್‌ ಅನಿವಾರ್ಯತೆ ಇದೆ ಎಂದು ಹೇಳಿದರು.

ಪೊಲೀಸ್‌ ಅಕಾಡೆಮಿ ಸ್ಥಾಪನೆಯಾಗುತ್ತಿದೆ. ಕೈಗಾರಿಕೆಗಳು ಕೆಜಿಎಫ್‌ ನತ್ತ ಮುಖ ಮಾಡುತ್ತಿವೆ. ಅಲ್ಲಿ ಜನ ಇಲ್ಲಿನ ಮಾರುಕಟ್ಟೆಗೆ ಬರಬೇಕು. ದೊಡ್ಡ ವ್ಯವಸ್ಥೆ ಆಗಬೇಕು. ಸರ್ಕಾರ ಅನುದಾನ ನೀಡುತ್ತಿದೆ. ಅದರಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತದೆ. ಮಾರುಕಟ್ಟೆ ಜಾಗ ಸರ್ಕಾರಕ್ಕೆ ಸೇರಿದ್ದು, ಅದು ವ್ಯಾಪಾರಿಗಳ ಸ್ವತ್ತಲ್ಲ. ಬದಕಲು ಅದನ್ನು ನೀಡಲಾಗಿದೆ. ಈ ಪರಿಸ್ಥಿತಿಯನ್ನು ಮನಗಾಣಬೇಕು. ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲೇಬೇಕು. ಅದಕ್ಕೆ ಮುಕ್ತ ಮನಸ್ಸಿನಿಂದ ಸಹಕಾರ ಕೊಡಿ. ಅಂಗಡಿ ಬಿಟ್ಟುಕೊಟ್ಟವರಿಗೆ ಬದಲಿ ವ್ಯವಸ್ಥೆ ಮಾಡಲಾಗುವುದು ಎಂದು ವರ್ತಕರಿಗೆ ಮನವರಿಕೆ ಮಾಡಿದರು.

ADVERTISEMENT

ನಗರಸಭೆ ಆಯುಕ್ತ ಆಂಜನೇಯಲು, ನಗರಸಭೆ ಸದಸ್ಯ ರಮೇಶ್‌ ಕುಮಾರ್‌, ವಳ್ಳಲ್‌ ಮುನಿಸ್ವಾಮಿ, ಪ್ರವೀಣ್‌, ಎಂ.ಜಿ.ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ದೇವೇಂದ್ರನ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.