ADVERTISEMENT

ಕೆಜಿಎಫ್‌: ಪೊಲೀಸ್‌ ವಸತಿ ಕಾಲೋನಿ ಕೈಗಾರಿಕೆ ನಿರ್ಮಾಣಕ್ಕೆ ಹಸ್ತಾಂತರ?

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 7:13 IST
Last Updated 18 ಏಪ್ರಿಲ್ 2025, 7:13 IST
ಕೆಜಿಎಫ್‌ ಬೆಮಲ್‌ ನಗರದ ಪೊಲೀಸ್‌ ವಸತಿಗೃಹದ ಕಾಲೋನಿಯಲ್ಲಿ ಕೆಐಎಡಿಬಿ ನಾಮಫಲಕ
ಕೆಜಿಎಫ್‌ ಬೆಮಲ್‌ ನಗರದ ಪೊಲೀಸ್‌ ವಸತಿಗೃಹದ ಕಾಲೋನಿಯಲ್ಲಿ ಕೆಐಎಡಿಬಿ ನಾಮಫಲಕ   

ಕೆಜಿಎಫ್‌: ಪೊಲೀಸ್‌ ಇಲಾಖೆಗೆ ಮೀಸಲಿದ್ದ ಜಾಗವನ್ನು ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ ವಶಪಡಿಸಿಕೊಂಡಿದ್ದು, ಈ ಪ್ರಕರಣ ಎರಡು ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯನ್ನು ಎತ್ತಿ ತೋರಿಸಿದೆ.

ಬೆಮಲ್‌ ನಗರದ ಸರ್ಕಾರಿ ಐಟಿಐ ಪಕ್ಕದಲ್ಲಿ 31 ಪೊಲೀಸ್‌ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿತ್ತು. ರೈಲ್ವೆ ನಿಲ್ದಾಣ ಮತ್ತು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ವಸತಿ ಗೃಹಕ್ಕೆ ಪೊಲೀಸರಿಂದ ಬೇಡಿಕೆ ಇತ್ತು. ಪೊಲೀಸ್‌ ಅಧಿಕಾರಿಗಳು ಮತ್ತು ಕಚೇರಿಯ ಅಧಿಕಾರಿಗಳು ಕೂಡ ವಾಸವಾಗಿದ್ದರು. ಬರುಬರುತ್ತಾ ಬಡಾವಣೆಯಲ್ಲಿ ನೀರಿನ ಕೊರತೆ ಕಂಡು ಬಂದಿದ್ದರಿಂದ, ಜಿಲ್ಲೆಯ ಇತರ ಭಾಗಗಳಲ್ಲಿ ಹೊಸ ಮನೆಗಳು ನಿರ್ಮಾಣವಾಗಿದ್ದರಿಂದ ಮತ್ತು ಅಲ್ಲಿ ವಾಸವಿದ್ದ ಅಧಿಕಾರಿಗಳು ನಿವೃತ್ತಿಯಾದ ನಂತರ ಮನೆಗಳಿಗೆ ಬೇಡಿಕೆ ಕುಸಿಯತ್ತಾ ಬಂದಿತು. ಇತ್ತೀಚಿನ ವರ್ಷಗಳಲ್ಲಿ ಇಡೀ ಪೊಲೀಸ್‌ ವಸತಿ ಗೃಹ ಇರುವ ಕಾಲೋನಿ ಖಾಲಿಯಾಗಿತ್ತು.

ಪಾಳು ಬಿದ್ದ ಮನೆಗಳನ್ನು ನೆಲಸಮ ಮಾಡಲು ಹಿರಿಯ ಅಧಿಕಾರಿಗಳು ನಿರ್ಧರಿಸಿದ್ದರಿಂದ, ಒಂದು ಮನೆಯನ್ನು ಬಿಟ್ಟು ಉಳಿದೆಲ್ಲಾ ಮನೆಗಳನ್ನು ನೆಲ ಸಮ ಮಾಡಲಾಯಿತು. ಒಂದು ಮನೆಯನ್ನು ಅಪರಾಧ ವಿಭಾಗದ ಪೊಲೀಸರು ಇಟ್ಟುಕೊಂಡಿದ್ದರು. ಪ್ರಸ್ತುತ ಇಡೀ ವಸತಿಗೃಹದ ಸಮುಚ್ಚಯ ಮುಳ್ಳು ಪೊದೆಗಳಿಂದ ಆವೃತವಾಗಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ.

ADVERTISEMENT

ಇದೆಲ್ಲದರ ನಡುವೆ ಬೆಮಲ್‌ನಿಂದ ವಶಪಡಿಸಿಕೊಂಡಿದ್ದ ಜಾಗವನ್ನು ಕೈಗಾರಿಕೆ ಅಭಿವೃದ್ಧಿಗಾಗಿ ಕೆಐಎಡಿಬಿಗೆ ಈಚೆಗೆ ಹಸ್ತಾಂತರ ಮಾಡಲಾಗಿತ್ತು. ನಗರದೆಲ್ಲೆಡೆ ಕೆಐಎಡಿಬಿ ಅಧಿಕಾರಿಗಳು ನಾಮಫಲಕ ಹಾಕಿ, ಇದು, ಮಂಡಳಿಗೆ ಸೇರಿದ ಪ್ರದೇಶ, ಅತಿಕ್ರಮಣ ಪ್ರವೇಶ ಮಾಡಬಾರದು ಎಂಬ ಎಚ್ಚರಿಕೆ ನೀಡಿತ್ತು. ಇಂತಹ ನಾಮಫಲಕವನ್ನು ಪೊಲೀಸ್‌ ವಸತಿಗೃಹ ಇರುವ ಜಾಗದಲ್ಲಿ ಕೂಡ ಹಾಕಲಾಗಿದ್ದು, ಇದು ಪೊಲೀಸ್‌ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ.

ಪೊಲೀಸ್‌ ಇಲಾಖೆಯಿಂದ ನೂತನ ವಸತಿ ಗೃಹಗಳ ನಿರ್ಮಾಣಕ್ಕಾಗಿ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಇವುಗಳಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಸತಿಗೃಹಗಳು ಸೇರಿವೆ. ಅದ್ಯತೆ ಮೇರೆಗೆ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೆಐಎಡಿಬಿ ನಾಮಫಲಕ ಹಾಕಿರುವ ಜಾಗ ಕೂಡ ಪೊಲೀಸ್‌ ವಸತಿ ಗೃಹಕ್ಕೆ ಸೇರಿದೆ. ಅಲ್ಲಿ ಮನೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕರೆ, ಕೆಐಎಡಿಬಿ ಪೊಲೀಸರಿಗೆ ಮನೆ ನಿರ್ಮಾಣ ಮಾಡಲಿಕ್ಕೆ ಅವಕಾಶ ಕೊಡಲಿದೆಯೇ ಅಥವಾ ಕೈಗಾರಿಕೆ ನಿರ್ಮಾಣಕ್ಕೆ ಪ್ರಾಶಸ್ತ್ಯ ಕೊಡಲಿದೆಯೇ ಎಂಬುದು ಜಿಜ್ಞಾಸೆಯಾಗಿದೆ.

ಕಂದಾಯ ಇಲಾಖೆಯು ಕೆಐಎಡಿಬಿಗೆ ಜಾಗವನ್ನು ಹಸ್ತಾಂತರ ಮಾಡಿದೆ. ಮಂಡಳಿಯು ಯಾವ ಆಧಾರದ ಮೇಲೆ ಈ ಪ್ರದೇಶದಲ್ಲಿ ನಾಮಫಲಕ ಹಾಕಿದೆ ಎಂಬುದು ಗೊತ್ತಿಲ್ಲ.
ಕೆ.ನಾಗವೇಣಿ, ತಹಶೀಲ್ದಾರ್
ಪೊಲೀಸ್‌ ಮತ್ತು ಕೆಐಎಡಿಬಿ ಎರಡೂ ಸರ್ಕಾರದ ಸಂಸ್ಥೆಗಳಾಗಿರುವುದರಿಂದ ಸಮಸ್ಯೆ ಉದ್ಭವಿಸುವುದಿಲ್ಲ. ತಾಂತ್ರಿಕ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಇತ್ಯರ್ಥ ಮಾಡಿಕೊಳ್ಳಲಾಗುವುದು.
 ಕೆ.ಎಂ.ಶಾಂತರಾಜು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
ಪಾಳು ಬಿದ್ದಿರುವ ಸ್ಥಿತಿಯಲ್ಲಿರುವ ಪೊಲೀಸ್‌ ವಸತಿ ಗೃಹಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.