
ಕೆಜಿಎಫ್: ಗಣರಾಜ್ಯೋತ್ಸವ ಸೇರಿದಂತೆ ಮೂವರು ಮಹನೀಯರ ಜಯಂತಿ ಆಚರಣೆಗಾಗಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಗೆ ಯಾವುದೇ ಸಮುದಾಯದ ಮುಖಂಡರು ಹಾಜರಾಗಲಿಲ್ಲ. ಇದರಿಂದಾಗಿ ಶಾಸಕಿ ರೂಪಕಲಾ ಶಿಶಧರ್ ಅವರು ತಾಲ್ಲೂಕು ಆಡಳಿತ ಸೌಧದಲ್ಲಿ ಗಂಟೆಗಟ್ಟಲೇ ಕಾದು ಕುಳಿತುಕೊಂಡರು.
ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ ಮತ್ತು ಸವಿತಾ ಮಹರ್ಷಿ ಅವರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯನ್ನೂ ಆಯೋಜಿಸಲಾಗಿತ್ತು.
ವೇಮನ ಜಯಂತಿ ಸಂಬಂಧ ಮಾತನಾಡಲು ರೆಡ್ಡಿ ಸಮುದಾಯದ ಮುಖಂಡರು ಆಗಮಿಸುತ್ತಾರೆ ಎಂದು ಬಹಳ ಹೊತ್ತು ಶಾಸಕರು ಕಾದರು. ತಡವಾದ ಕಾರಣ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಸಿದರು. ಸುಮಾರು ಹೊತ್ತಿನ ನಂತರ ರೆಡ್ಡಿ ಸಮುದಾಯದ ಪ್ರಸನ್ನ ರೆಡ್ಡಿ ಮತ್ತು ರಾಧಾಕೃಷ್ಣರೆಡ್ಡಿ ಸಭೆಗೆ ಆಗಮಿಸಿದರು. ಸವಿತಾ ಮಹರ್ಷಿ ಸಮುದಾಯದ ಬೆರಳೆಣಿಕೆಯಷ್ಟು ಮಂದಿ ಬಂದಿದ್ದರು. ಅಂಬಿಗ ಚೌಡಯ್ಯ ಅವರ ಸಮುದಾಯಕ್ಕೆ ಸೇರಿದ ಯಾರೂ ಬಂದಿರಲಿಲ್ಲ. ನಂತರ ಮಹನೀಯರ ಜಯಂತಿಗೆ ಪುನಃ ಬುಧವಾರ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ಶಾಸಕಿ ಸೂಚಿಸಿದರು.
ಡಿವೈಎಸ್‌ಪಿ ಲಕ್ಷ್ಮಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ, ನಗರಸಭೆ ಆಯುಕ್ತ ಆಂಜನೇಯಲು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.