ADVERTISEMENT

ರಥೋತ್ಸವದಲ್ಲಿ ಒಗ್ಗಟ್ಟು ಮಂತ್ರವಾಗಲಿ: ಎಸ್‌ಪಿ ಶಿವಾಂಶು ರಜಪೂತ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:23 IST
Last Updated 24 ಫೆಬ್ರುವರಿ 2026, 6:23 IST
ಕೆಜಿಎಫ್‌ ರಾಬರ್ಟಸನ್‌ಪೇಟೆಯ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಸೋಮವಾರ ಎಸ್‌ಪಿ ಶಿವಾಂಶು ರಜಪೂತ್‌ ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್ಪಿ ಲಕ್ಷ್ಮಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್‌ ಇದ್ದರು.
ಕೆಜಿಎಫ್‌ ರಾಬರ್ಟಸನ್‌ಪೇಟೆಯ ಪ್ರಸನ್ನ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಸೋಮವಾರ ಎಸ್‌ಪಿ ಶಿವಾಂಶು ರಜಪೂತ್‌ ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್ಪಿ ಲಕ್ಷ್ಮಯ್ಯ, ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್‌ ಇದ್ದರು.   

ಕೆಜಿಎಫ್‌: ರಾಬರ್ಟಸನ್‌ಪೇಟೆಯ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ಬ್ರಹ್ಮ ರಥೋತ್ಸವದಲ್ಲಿ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌ ಹೇಳಿದರು.

ನಗರದಲ್ಲಿ ಸೋಮವಾರ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುವ ವಿವಿಧ ಸಮುದಾಯಗಳ ಮುಖಂಡರ ಸಭೆ ನಡೆಸಿ ಮಾತನಾಡಿದ ಅವರು, ರಥೋತ್ಸವಕ್ಕೆ ಸಾವಿರಾರು ಮಂದಿ ಬರುತ್ತಾರೆ. ಅವರ ಧಾರ್ಮಿಕ ಶ್ರದ್ಧೆಗಳಿಗೆ ಚ್ಯುತಿ ಬಾರದಂತೆ ಕಾರ್ಯಕ್ರಮ ನಿರ್ವಹಿಸಬೇಕು. ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಬರಬಾರದು ಎಂದರು.

ದೇವಾಲಯದಲ್ಲಿ ನಡೆಯುವ ಪ್ರಮುಖ ಉತ್ಸವಗಳ ಸಮಯದಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗುವುದು. ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗುವುದು. ಹೊರ ಜಿಲ್ಲೆಗಳಿಂದಲೂ ಪೊಲೀಸ್‌ ಸಿಬ್ಬಂದಿಯನ್ನು ಕರೆಸಲಾಗುತ್ತಿದೆ. ಡ್ರೋನ್‌ ಮೂಲಕ ಕಾರ್ಯಕ್ರಮದ ಕಣ್ಗಾವಲು ಇಡಲಾಗುತ್ತಿದೆ. ರಥೋತ್ಸವ ಸುಸೂತ್ರವಾಗಿ ನಡೆದುಕೊಂಡು ಹೋಗುವುದಕ್ಕೆ ಎಲ್ಲರೂ ಪೊಲೀಸರಿಗೆ ಸಹಕಾರ ನೀಡಬೇಕು ಎಂದರು.

ADVERTISEMENT

ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಓದುತ್ತಿರುವುದರಿಂದ ಕಾರ್ಯಕ್ರಮದ ಆಯೋಜಕರು ಶಬ್ದ ಮಾಲಿನ್ಯ ಉಂಟು ಮಾಡಬಾರದು. ಈಗಾಗಲೇ ಧ್ವನಿವರ್ಧಕ ಉಪಯೋಗಿಸುವ ಬಗ್ಗೆ ಸ್ಥಳೀಯ ಪೊಲೀಸರು ಸೂಚನೆ ನೀಡಿದ್ದಾರೆ. ಅದನ್ನು ಎಲ್ಲರೂ ಪಾಲಿಸಬೇಕೆಂದು ತಿಳಿಸಿದರು.

ಪುಷ್ಪ ಪಲ್ಲಕ್ಕಿಯ ಬಗ್ಗೆ ಮಾತನಾಡಿದ ಮೊದಲಿಯಾರ್‌ ಸಮುದಾಯದವರು ಮಾತನಾಡಿ, ಪಲ್ಲಕ್ಕಿಯನ್ನು ಹೊರಲು 350 ಮಂದಿಗೆ ತರಬೇತಿ ನೀಡಲಾಗಿದೆ. ಎಲ್ಲರೂ ಹೆಗಲ ಮೇಲೆ ಪಲ್ಲಕ್ಕಿಯನ್ನು ಹೊರಲಿದ್ದಾರೆ. ಸಾಂಪ್ರದಾಯಿಕವಾಗಿ ಪಲ್ಲಕ್ಕಿಯ ಉತ್ಸವ ನಡೆಯಲಿದೆ. ಒಂದು ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪಲ್ಲಕ್ಕಿ ವೀಕ್ಷಣೆಗೆ ಸುಮಾರು ಒಂದು ಲಕ್ಷ ಜನ ಸೇಉವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಬಲಿಜ, ರೆಡ್ಡಿ, ಬ್ರಾಹ್ಮಣ, ಒಕ್ಕಲಿಗ, ಮಲೆಯಾಳಿ, ಮರಾಠಿ ಮತ್ತು ಇತರ ಸಮುದಾಯದವರು ತಮ್ಮ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್‌ ಇನ್‌ಸ್ಪೆಕ್ಟರ್‌ ರಂಗಶಾಮಯ್ಯ, ನಗರಸಭೆ, ಅಗ್ನಿಶಾಮಕ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಸಭೆ ನಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌ ಅವರು ಅಧಿಕಾರಿಗಳೊಂದಿಗೆ ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದ ಆವರಣ ಪರಿಶೀಲನೆ ನಡೆಸಿದರು. ದೇವಾಲಯದ ಧರ್ಮದರ್ಶಿಗಳ ಜೊತೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.