ADVERTISEMENT

ಕೆಜಿಎಫ್‌ | ಸ್ವರ್ಣನಗರದ ಬಳಿ ಕಸಾಯಿಖಾನೆ: ಸ್ಥಳೀಯರ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:29 IST
Last Updated 26 ಅಕ್ಟೋಬರ್ 2025, 7:29 IST
ಕೆಜಿಎಫ್‌ ಸ್ವರ್ಣನಗರದ ಬಳಿ ಇರುವ ಇಸ್ಲಾಮಿಯರ ಸ್ಮಶಾನದಲ್ಲಿ ನಡೆಯುತ್ತಿರುವ ಕಾಮಗಾರಿ
ಕೆಜಿಎಫ್‌ ಸ್ವರ್ಣನಗರದ ಬಳಿ ಇರುವ ಇಸ್ಲಾಮಿಯರ ಸ್ಮಶಾನದಲ್ಲಿ ನಡೆಯುತ್ತಿರುವ ಕಾಮಗಾರಿ   

ಕೆಜಿಎಫ್‌: ಸ್ವರ್ಣನಗರ ಬಡಾವಣೆಗೆ ಹೊಂದಿಕೊಂಡಿರುವ ಇಸ್ಲಾಮಿಯರ ಸ್ಮಶಾನದ ಬಳಿಯಲ್ಲಿ ಕಸಾಯಿಖಾನೆ (ಬೀಫ್‌) ನಿರ್ಮಾಣ ಮಾಡುವ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕೆಂದು ಸ್ವರ್ಣ ನಗರ ನಿವಾಸಿಗಳು ಆಗ್ರಹಿಸಿದ್ದಾರೆ.

ರಾಬರ್ಟಸನ್‌ಪೇಟೆಯ ಮಾಂಸದ ಮಾರುಕಟ್ಟೆಯಲ್ಲಿ ಈಚೆಗೆ ಹಸು ಕಡಿಯುವ ಸಂಬಂಧವಾಗಿ ಉಂಟಾದ ವಿವಾದದ ಹಿನ್ನೆಲೆ ಅಲ್ಲಿನ ವರ್ತಕರು ಅಂಡರಸನ್‌ಪೇಟೆಯಲ್ಲಿರುವ ಕಸಾಯಿ ಖಾನೆಗೆ ಹೋಗಿ ಕಟಾವು ಮಾಡುವುದು ದುಬಾರಿಯಾಗುತ್ತದೆ. ಆದ್ದರಿಂದ ರಾಬರ್ಟಸನ್‌ಪೇಟೆಯಲ್ಲಿಯೇ ಹಸು ಕಡಿಯಲು ಕಸಾಯಿ ಖಾನೆ ನಿರ್ಮಿಸಿಕೊಡಬೇಕೆಂದು ಕೋರಿದ್ದರು.

ಈ ಹಿನ್ನೆಲೆ ಸ್ವರ್ಣ ನಗರದ ಬಳಿಯಲ್ಲಿ ಕಸಾಯಿಖಾನೆ ನಿರ್ಮಾಣ ಮಾಡಲು ಕಾಮಗಾರಿ ನಡೆಯುತ್ತಿದೆ. ಈಗ ನಡೆಯುತ್ತಿರುವ ಕಾಮಗಾರಿ ಪ್ರದೇಶ ಇಸ್ಲಾಮಿಯರ ಸ್ಮಶಾನವಾಗಿದೆ. ಅಲ್ಲಿ ಅಂತ್ಯಸಂಸ್ಕಾರ ಮಾಡುವ ಸ್ಥಳವಾಗಿದ್ದು, ಕಸಾಯಿಖಾನೆ ನಿರ್ಮಾಣ ಮಾಡುವ ಸ್ಥಳವಾಗಿಲ್ಲ. ಕಸಾಯಿಖಾನೆ ಪ್ರಾರಂಭ ಮಾಡಿದರೆ ದುರ್ವಾಸನೆ ಬಡಾವಣೆಗೆ ಹರಡುತ್ತದೆ. ಮಾಂಸದ ಆಸೆಗೆ ಬೀದಿಗಳ ನಾಯಿಗಳ ಕಾಟ ಹೆಚ್ಚಾಗುತ್ತದೆ. ಶುಚಿತ್ವದ ಕೊರತೆಯಿಂದಾಗಿ ರೋಗ ರುಚಿನಗಳು ಬರುವ ಸಾಧ್ಯತೆ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಸಾಯಿಖಾನೆಯನ್ನು ಬಡಾವಣೆಗಳಿಂದ ದೂರ ಇರುವ ಪ್ರದೇಶದಲ್ಲಿ ನಿರ್ಮಿಸುವುದು ಉತ್ತಮ. ಮಾರಿಕುಪ್ಪಂ ರೋರ್ಜರ್ಸ್‌ ಕ್ಯಾಂಪ್‌ ಬಳಿ ನಿರ್ಮಾಣ ಮಾಡಿದರೆ ಜನ ವಸತಿ ಪ್ರದೇಶವು ಮುಕ್ತವಾಗಿರುತ್ತದೆ. ಕೂಡಲೇ ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಶಾಸಕಿ ಭೇಟಿ: ಸ್ವರ್ಣ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಸಾಯಿ ಖಾನೆಯ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿ, ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ನೂರಾರು ನಿವಾಸಿಗಳು ಶನಿವಾರ ಶಾಸಕಿ ಎಂ.ರೂಪಕಲಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.