ADVERTISEMENT

ಕೆಜಿಎಫ್‌: ಸ್ವಯಂ ಭುವನೇಶ್ವರ ದೇವಾಲಯದ ಭಾಗ ಕುಸಿತ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 5:53 IST
Last Updated 27 ಆಗಸ್ಟ್ 2025, 5:53 IST
ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಸ್ವಯಂಭುವನೇಶ್ವರ ದೇವಾಲಯದ ಒಂದು ಭಾಗ ಮಳೆಗೆ ಕುಸಿದಿರುವುದು 
ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ಸ್ವಯಂಭುವನೇಶ್ವರ ದೇವಾಲಯದ ಒಂದು ಭಾಗ ಮಳೆಗೆ ಕುಸಿದಿರುವುದು    

ಕೆಜಿಎಫ್‌: ಚೋಳರ ಕಾಲದಲ್ಲಿ ನಿರ್ಮಾಣವಾದ ತಾಲ್ಲೂಕಿನ ಕ್ಯಾಸಂಬಳ್ಳಿ ಬಳಿ ಮಡಿವಾಳ ಸ್ವಯಂಭುವನೇಶ್ವರ ದೇವಾಲಯದ ಒಂದು ಪಾರ್ಶ್ವ ಮಳೆಗೆ ಕುಸಿದಿದೆ. ದೇವಾಲಯ ಪ್ರಾಚೀನ ಪುರಾತತ್ವ ಇಲಾಖೆಗೆ ಸೇರಿದೆ.

ದೇವಾಲಯ ಹಿಂಭಾಗದ ಒಂದು ಭಾಗದಲ್ಲಿ ಕಲ್ಲು ಕಂಬ ಮತ್ತು ಅದಕ್ಕೆ ಬೆಂಬಲವಾಗಿ ನಿಂತಿದ್ದ ಮೇಲ್ಛಾವಣಿ ನೆಲಕ್ಕೆ ಉರುಳಿದೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದೆ. ರಾತ್ರಿ ವೇಳೆ ಘಟನೆ ನಡೆದಿದ್ದರಿಂದ ಯಾರಿಗೂ ತೊಂದರೆಯಾಗಿಲ್ಲ. ದೇವಾಲಯದ ಬಹುಭಾಗ ಶಿಥಿಲವಾಗಿತ್ತು. ಧರ್ಮಸ್ಥಳದ ಅನುದಾನದಲ್ಲಿ ದೇವಾಲಯವನ್ನು ಈಚೆಗೆ ಪುನರುಜ್ಜೀವನಗೊಳಿಸಲಾಗಿತ್ತು. 

ಶೈವ ಸಂಪ್ರದಾಯಕ್ಕೆ ಸೇರಿದ ದೇವಾಲಯ ಇದಾಗಿದೆ. ಕ್ರಿ.ಶ.1265 ಆಸುಪಾಸಿನಲ್ಲಿ ದೇವಾಲಯ ನಿರ್ಮಾಣವಾಗಿದೆ. ದೇವಾಲಯದಲ್ಲಿ ಚೋಳ, ಹೊಯ್ಸಳ ಮತ್ತು ವಿಜಯನಗರದ ಶಾಸನಗಳು ಇವೆ. ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಶಾಸನಗಳನ್ನು ಕೆತ್ತಲಾಗಿದೆ. ಇಳವಂಜಿ ರಾಯ ಈ ದೇವಾಲಯಕ್ಕೆ ಹೆಚ್ಚಿನ ಅನುದಾನ ನೀಡಿದ್ದ ಎಂದು ಇತಿಹಾಸಕಾರರು ಹೇಳುತ್ತಾರೆ.

ADVERTISEMENT

ದೇವಾಲಯದ ಭಕ್ತರು ನೀಡಿದ ದೂರಿನ ಮೇರೆಗೆ ತಹಶೀಲ್ದಾರ್‌ ಭರತ್‌ ಮಂಗಳವಾರ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದೇವಾಲಯ ಪುರಾತತ್ವ ಇಲಾಖೆಗೆ ಸೇರಿದೆ. ಬಹುತೇಕ ಭಾಗ ಶಿಥಿಲವಾಗಿದೆ. ಇದನ್ನು ಸರಿಪಡಿಸಲು ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗುವುದು. ದೇವಾಲಯದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.