ADVERTISEMENT

ಕೆಜಿಎಫ್‌ ತಾಲ್ಲೂಕು ಕಚೇರಿಯಲ್ಲಿ ಸೌಕರ್ಯದ ಕೊರತೆ: ಶಾಸಕಿ ಎಂ.ರೂಪಕಲಾ ತರಾಟೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:27 IST
Last Updated 15 ಜನವರಿ 2026, 6:27 IST
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಶಾಸಕಿ ರೂಪಕಲಾ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಅಧಿಕಾರಿಗಳು ಹಾಜರಿದ್ದರು
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಶಾಸಕಿ ರೂಪಕಲಾ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಅಧಿಕಾರಿಗಳು ಹಾಜರಿದ್ದರು   

ಕೆಜಿಎಫ್‌: ತಾಲ್ಲೂಕು ಆಡಳಿತ ಸೌಧದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಶಾಸಕಿ ಎಂ.ರೂಪಕಲಾ ತಹಶೀಲ್ದಾರ್‌ ಮತ್ತು ಉಪ ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಆಡಳಿತ ಸೌಧದಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಮತ್ತು ಸವಿತಾ ಮಹರ್ಷಿ ಹಾಗೂ ವೇಮನ ಜಯಂತಿ ಕಾರ್ಯಕ್ರಮಗಳ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಅವರು, ತಾಲ್ಲೂಕು ಕಚೇರಿಯ ಎಲ್ಲಾ ಕಚೇರಿಗಳಿಗೂ ಭೇಟಿ ನೀಡಿದರು. ಈ ವೇಳೆ ಸಾರ್ವಜನಿಕರು ಹಾಗೂ ಸಿಬ್ಬಂದಿಗೆ ಉತ್ತಮ ಶೌಚಾಲಯ ವ್ಯವಸ್ಥೆ ಮಾಡಿಕೊಡದ ಬಗ್ಗೆ ತಹಶೀಲ್ದಾರ್‌ ಎಚ್‌.ಜೆ.ಭರತ್‌ ಮತ್ತು ಉಪ ತಹಶೀಲ್ದಾರ್‌ ಮಂಜುನಾಥ ಅವರನ್ನು ತರಾಟೆಗೆ ತೆಗೆದುಕೊಂಡರು.

‘ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಕಷ್ಟ ಪಟ್ಟು ₹10 ಕೋಟಿ ಅನುದಾನ ಪಡೆದು ತಾಲ್ಲೂಕು ಆಡಳಿತ ಸೌಧ ನಿರ್ಮಾಣ ಮಾಡಿದ್ದೆ. ಅದನ್ನು ಪ್ರಜೆಗಳ ಸೇವೆ ಮಾಡುವ ಪ್ರಜಾಸೌಧ ಎಂದು ಭಾವಿಸಿದ್ದೇನೆ. ಆದರೆ, ಅದನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಕನಿಷ್ಠ ಪ್ರಜ್ಞೆಯೂ ನಿಮಗೆ ಇಲ್ಲ. ನಿಮ್ಮ ಸ್ವಂತ ಕಟ್ಟಡವಾಗಿದ್ದರೆ ಈ ರೀತಿ ಇಟ್ಟುಕೊಳ್ಳುತ್ತಿದ್ದೀರಾ?ʼ ಎಂದು ಪ್ರಶ್ನಿಸಿದರು.

ADVERTISEMENT

ನಂತರ ತಾಲ್ಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಹೊಸದಾಗಿ ಕಟ್ಟಿದ್ದರೂ, ಇನ್ನೂ ಉದ್ಘಾಟನೆಯಾಗದ ಸಾರ್ವಜನಿಕ ಶೌಚಾಲಯ ಕಟ್ಟಡಕ್ಕೆ ಭೇಟಿ ನೀಡಿದರು. ಕೂಡಲೇ ಶೌಚಾಲಯವನ್ನು ಸುಲಭ ಶೌಚಾಲಯ ಅವರಿಗೆ ನೀಡಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಮಕ್ಕಳಿಗೆ ಹಾಲು ಕುಡಿಸುವ ಕೋಣೆಯಲ್ಲಿ ಇನ್ನೂ ವ್ಯವಸ್ಥೆ ಮಾಡಬೇಕು ಎಂದು ನಗರಸಭೆ ಆಯುಕ್ತ ಆಂಜನೇಯಲು ಮತ್ತು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಾಜಶೇಖರ್‌ ಅವರಿಗೆ ಸೂಚಿಸಿದರು.

ಸಬ್‌ ರಿಜಿಸ್ಟ್ರಾರ್‌ ಕಚೇರಿಯನ್ನು ಕೆಳ ಅಂತಸ್ತಿಗೆ ಸ್ಥಳಾಂತರ ಮಾಡಬೇಕು. ಇದರಿಂದಾಗಿ ವಯಸ್ಸಾದವರು ಮಹಡಿ ಏರುವುದು ತಪ್ಪುತ್ತದೆ. ಆದರೆ, ಕಚೇರಿಯ ದಾಖಲೆ ಕೊಠಡಿ ಮೊದಲ ಅಂತಸ್ತಿನಲ್ಲಿಯೇ ಇರಲಿ ಎಂದು ಶಾಸಕಿ ಅಧಿಕಾರಿಗಳಿಗೆ ಸೂಚಿಸಿದರು.

ಪೂರ್ವಭಾವಿ ಸಭೆ: ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ವೇಮನ ಜಯಂತಿ ಮತ್ತು ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡುವ ಬಗ್ಗೆ ಶಾಸಕಿ ರೂಪಕಲಾ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ರೆಡ್ಡಿ ಸಮುದಾಯ ಮತ್ತು ಸವಿತಾ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿ, ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಿದ್ದರಾಮೇಶ್ವರ ಜಯಂತಿ: ಇದೇ ಸಂದರ್ಭದಲ್ಲಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ವೆಂಕಟೇಶ್‌, ತಹಶೀಲ್ದಾರ್‌ ಎಚ್‌.ಜೆ.ಭರತ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಪಿ.ಎಂ.ನವೀನ್‌, ಕೆಡಿಎ ಆಯುಕ್ತ ಧರ್ಮೇಂದ್ರ, ಬೆಸ್ಕಾಂ ಎಇಇ ಹೇಮಲತಾ, ಪೌರಾಯುಕ್ತ ಆಂಜನೇಯಲು. ಬೋವಿ ಸಮಾಜದ ಮುಖಂಡರು ಹಾಜರಿದ್ದರು.