ADVERTISEMENT

ಕೋಲಾರ: ಆಡಳಿತಾಧಿಕಾರಿ ಅವಧಿ ತೀರ್ಮಾನ; ತನಿಖೆಗೆ ಸಮಿತಿ

ಮುಂದಿನ ಸಭೆಗೆ ವರದಿ ಮಂಡನೆ– ಕೋಮುಲ್‌ ಆಡಳಿತ ಮಂಡಳಿ ಮೊದಲ ಸಭೆ ಬಳಿಕ ಅಧ್ಯಕ್ಷ ನಂಜೇಗೌಡ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:09 IST
Last Updated 18 ಜುಲೈ 2025, 2:09 IST
ಕೋಲಾರದ ಕೋಮುಲ್‌ ಕಚೇರಿಯಲ್ಲಿ ಗುರುವಾರ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು
ಕೋಲಾರದ ಕೋಮುಲ್‌ ಕಚೇರಿಯಲ್ಲಿ ಗುರುವಾರ ಹಾಲು ಒಕ್ಕೂಟದ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು   

ಕೋಲಾರ: ‘ಒಕ್ಕೂಟದಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ ಕೈಗೊಂಡಿರುವ ತೀರ್ಮಾನಗಳ ಬಗ್ಗೆ ಕೆಲ ನಿರ್ದೇಶಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒಳಗೊಂಡಂತೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳ ಸಮಿತಿ ರಚಿಸಿದ್ದು, ಮುಂದಿನ ಮಂಡಳಿ ಸಭೆಗೆ ವರದಿ ನೀಡಲಿದ್ದಾರೆ’ ಎಂದು ಶಾಸಕ, ಕೋಮುಲ್‌ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.

ಕೋಮುಲ್‌ ಕಚೇರಿಯಲ್ಲಿ ಗುರುವಾರ ಆಡಳಿತ ಮಂಡಳಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಒಕ್ಕೂಟಕ್ಕೆ ಹಾಗೂ ಹಾಲು ಉತ್ಪಾದಕರಿಗೆ ವಿರುದ್ಧವಾದ ಯಾವುದೇ ತೀರ್ಮಾನ ಕೈಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಎಂವಿಕೆ ಗೋಲ್ಡನ್‌ ಡೇರಿಯ ಶೇ 85ರಷ್ಟು ಸಿವಿಲ್‌ ಕಾಮಗಾರಿ ಮುಗಿದಿದೆ. ಶೇ 15 ರಷ್ಟು ಕಾಮಗಾರಿ ಬಾಕಿ ಇದ್ದು, ಬೇರೆಬೇರೆ ಕಾಮಗಾರಿಗಳ ಸಂಬಂಧ ಆಡಳಿತಾಧಿಕಾರಿ ಕೆಲವೊಂದು ತೀರ್ಮಾನ ಕೈಗೊಂಡಿದ್ದಾರೆ’ ಎಂದರು.

‘ಸಮಿತಿಯಲ್ಲಿ ನಾರಾಯಣಸ್ವಾಮಿ ಅಲ್ಲದೇ, ನಿರ್ದೇಶಕರಾದ ಜಯಸಿಂಹ ಕೃಷ್ಣ, ಚಂಜಿಮಲೆ ಬಿ.ರಮೇಶ್‌, ಕಾಡೇನಹಳ್ಳಿ ನಾಗರಾಜ್‌, ಚೆಲುವನಹಳ್ಳಿ ನಾಗರಾಜ್‌, ಮಂಜುನಾಥ್‌ ಇದ್ದಾರೆ. ಆಡಳಿತಾಧಿಕಾರಿ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬಹುದೆಂದು ಸಹಕಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸಭೆಯಲ್ಲಿ 13 ಚುನಾಯಿತ ನಿರ್ದೇಶಕರು ಸೇರಿದಂತೆ ಒಟ್ಟು 18 ನಿರ್ದೇಶಕರು ಇದ್ದರು’ ಎಂದು ತಿಳಿಸಿದರು.

ADVERTISEMENT

‘ಹಾಲು ಉತ್ಪಾದನೆಯಲ್ಲಿ ಯಾವುದೇ ಕುಂಠಿತವಾಗಿಲ್ಲ. ಆಡಳಿತಾಧಿಕಾರಿ ಅವಧಿಯಲ್ಲಿ ಶೇ 17ರಷ್ಟು ಹೆಚ್ಚಳವಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೆಚ್ಚು ಮಾಡಲಾಗಿದೆ’ ಎಂದರು.

‘ಸಭೆಯಲ್ಲಿ ಪ್ರಮುಖವಾಗಿ ಮೂರು ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹಾಲು ಉತ್ಪಾದನೆಯನ್ನು 10 ಲಕ್ಷ ಲೀಟರ್‌ಗೆ ಏರಿಸಲು ಹೆಚ್ಚಿನ ಸಂಘಗಳನ್ನು ಸ್ಥಾಪಿಸುವುದು. ಗುಣಮಟ್ಟದ ಹಾಲು ನೀಡಲು ಎಲ್ಲಾ ಸಂಘಗಳಲ್ಲಿ ಕಾಮನ್ ಸಾಫ್ಟ್‌ವೇರ್ ಅಳವಡಿಸುವುದು ಹಾಗೂ ಜಿಲ್ಲೆಯಲ್ಲಿರುವ 10 ಲಕ್ಷ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎನ್ನುವ ನಿರ್ಣಯಗಳನ್ನು ಕೈಗೊಳ್ಳಲಾಯಿತು’ ಎಂದು ಹೇಳಿದರು.

‘ಈ ಹಿಂದೆ ರಾಸುಗಳಿಗೆ ವರ್ಷದಲ್ಲಿ ಒಮ್ಮೆ ಮಾತ್ರ ವಿಮೆ ಮಾಡಿಸಲು ಅವಕಾಶವಿತ್ತು. ಕಳೆದ ಆಡಳಿತ ಮಂಡಳಿಯಲ್ಲಿ ವರ್ಷಕ್ಕೆ ಎರಡು ಬಾರಿ ವಿಮೆ ಮಾಡಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೂ ಶೇ 60ರಷ್ಟು ಗುರಿಯನ್ನು ಮಾತ್ರವೇ ಸಾಧಿಸಲಾಗಿತ್ತು. ಹೀಗಾಗಿ, ವರ್ಷದಲ್ಲಿ ಮೂರು ಬಾರಿ ಅಂದರೆ ಪ್ರತಿ 4 ತಿಂಗಳಿಗೊಮ್ಮೆ ವಿಮೆಗೆ ಅವಕಾಶ ಕಲ್ಪಿಸಿಕೊಡಲು ತೀರ್ಮಾನ ಮಾಡಲಾಗಿದೆ. ಆ ಮೂಲಕ ಶೇ 100ರಷ್ಟು ಗುರಿ ಸಾಧಿಸುವುದು ನಮ್ಮ ಉದ್ದೇಶ. ರೈತರು ಅರ್ಧದಷ್ಟು ಮಾತ್ರವೇ ವಿಮಾ ಮೊತ್ತ ಪಾವತಿಸಬೇಕಿದೆ’ ಎಂದರು.

‘ಮೂರ್ನಾಲ್ಕು ತಿಂಗಳಲ್ಲಿ ಎಂವಿಕೆ ಗೋಲ್ಡನ್ ಡೇರಿ, ಸೋಲಾರ್ ಘಟಕ ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುವುದು. ಹಾಲು ಉತ್ಪಾದನೆ ಜತೆಗೆ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಹೆಚ್ಚು ಮಾಡಲು ಸಭೆಯಲ್ಲಿ ಚರ್ಚಿಸಲಾಗಿದೆ. ಪಾರ್ಲರ್ ಹಾಗೂ ಏಜೆಂಟ್‍ಗಳನ್ನು ಜಿಲ್ಲಾ, ತಾಲ್ಲೂಕು ಕೇಂದ್ರ, ಹೋಬಳಿಗಳಲ್ಲಿ ಹೆಚ್ಚಾಗಿ ತೆರೆಯಲು ಕ್ರಮಕೈಗೊಳ್ಳುವ ಬಗ್ಗೆಯೂ ಪ್ರಸ್ತಾಪವಾಯಿತು’ ಎಂದು ನುಡಿದರು.

ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಚಂಜಿಮಲೆ ಬಿ.ರಮೇಶ್ ಇದ್ದರು.

ಶಾಸಕರ ವಿರುದ್ಧವಾಗಿ ಮಾತನಾಡಿಲ್ಲ

‘ನಿಯಮಗಳ ಬದಲಾವಣೆಗೆ ಸರ್ಕಾರದ ಮುಂದೆ ಜನಪ್ರತಿನಿಧಿಗಳು ಹೋಗಬೇಕೇ ಹೊರತು ಅಧಿಕಾರಿಗಳ ಮೇಲೆ ಮಾತನಾಡುವುದು ಸರಿಯಲ್ಲ. ಚರ್ಚೆ ಉತ್ತಮವಾಗಿರಬೇಕು ಎಂಬುದಾಗಿ ನಾನು ದಿಶಾ ಸಭೆಯಲ್ಲಿ ಸಲಹೆ ನೀಡಿದೆ. ಸಮೃದ್ಧಿ ಮಂಜುನಾಥ್‌ ಅಥವಾ ಎಸ್‌.ಎನ್‌.ನಾರಾಯಣಸ್ವಾಮಿ ಸೇರಿದಂತೆ ಯಾವ ಶಾಸಕರ ವಿರುದ್ಧವಾಗಿ ನಾನು ಮಾತನಾಡಿಲ್ಲ’ ಎಂದು ನಂಜೇಗೌಡ ಸ್ಪಷ್ಟಪಡಿಸಿದರು.

‘ಈಚೆಗೆ ನಡೆದ ದಿಶಾ ಸಭೆಗೆ ನಾನು ತಡವಾಗಿ ಬಂದಿದ್ದೆ. ಆಗ ಅರಣ್ಯ ಇಲಾಖೆ ವಿಚಾರ ಚರ್ಚೆ ಆಗುತ್ತಿತ್ತು ನಾನು ಯಾರ ವಿರುದ್ಧವೂ ಮಾತನಾಡಿಲ್ಲ. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರ ರಾಜ್ಯ ಸರ್ಕಾರದ ನಿಯಮಗಳು ಹಾಗೂ ಸುಪ್ರೀಂ ಕೋರ್ಟ್‌ ತೀರ್ಪು ಬೇರೆ ಇವೆ. ಜನಪ್ರತಿನಿಧಿಗಳು ಬೇರೆ ರೀತಿ ಅರ್ಥ ಮಾಡಿಕೊಂಡರು ಜಿಲ್ಲಾಧಿಕಾರಿ ಸ್ಪಷ್ಟವಾಗಿ ಹೇಳಿದರು’ ಎಂದರು.

ಕಾಮನ್ ಸಾಫ್ಟ್‌ವೇರ್ ಅಳವಡಿಕೆ

‘ಎಲ್ಲಾ ಸಂಘಗಳಲ್ಲಿ ಕಾಮನ್‌ ಸಾಫ್ಟ್‌ವೇರ್‌ ಅಳವಡಿಸಲು ನಿರ್ಧರಿಸಲಾಗಿದೆ. ರೈತರು ಹಾಕುವ ಹಾಲಿನ ಗುಣಮಟ್ಟದ ಮೇಲೆ ದರ ನಿಗದಿಪಡಿಸಲು ಇದರಿಂದ ಸಾಧ್ಯವಾಗುತ್ತದೆ. ಫ್ಯಾಟ್‌ ಆಧಾರದ ಮೇಲೆ ದರ ನಿಗದಿಪಡಿಸಬಹುದು’ ಈ ಸಂಬಂಧ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವಾಗಿದೆ’ ಎಂದು ನಂಜೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.