ADVERTISEMENT

ಕೋಲಾರ: ಖರೀದಿಯಲ್ಲಿ ಲೋಪ; ಕ್ರಮ ವಹಿಸಬೇಕು

ಕೋಮುಲ್‌ ಆಡಳಿತಾಧಿಕಾರಿ ಅವಧಿಯಲ್ಲಿ ಒಕ್ಕೂಟಕ್ಕೆ ₹ 14 ಕೋಟಿ ನಷ್ಟ: ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 2:10 IST
Last Updated 18 ಜುಲೈ 2025, 2:10 IST
ಕೋಮುಲ್‌ ಆಡಳಿತ ಮಂಡಳಿ ಸಭೆ ಬಳಿಕ ಶಾಸಕ, ಒಕ್ಕೂಟದ ನಿರ್ದೇಶಕ ಎಸ್‌.ಎನ್‌.ನಾರಾಯಣಸ್ವಾಮಿ ಮಾತನಾಡಿದರು 
ಕೋಮುಲ್‌ ಆಡಳಿತ ಮಂಡಳಿ ಸಭೆ ಬಳಿಕ ಶಾಸಕ, ಒಕ್ಕೂಟದ ನಿರ್ದೇಶಕ ಎಸ್‌.ಎನ್‌.ನಾರಾಯಣಸ್ವಾಮಿ ಮಾತನಾಡಿದರು    

ಕೋಲಾರ: ‘ಕೋಮುಲ್‌ ಆಡಳಿತಾಧಿಕಾರಿ ಆಗಿದ್ದ ಡಾ.ಮೈತ್ರಿ ಅವರು ವ್ಯವಸ್ಥಾಪಕ ನಿರ್ದೇಶಕರ ಜೊತೆಗೂಡಿ ಒಕ್ಕೂಟದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಖರೀದಿ ವ್ಯವಹಾರ ನಡೆಸಿದ್ದು, ಅದನ್ನು ಒಪ್ಪಲು ಸಾಧ್ಯವಿಲ್ಲ. ಈ ಸಂಬಂಧ ರಚಿಸಿರುವ ನಿರ್ದೇಶಕರು ಹಾಗೂ ಅಧಿಕಾರಿಗಳ ಸಮಿತಿ ತನಿಖೆ ನಡೆಸಿ ವರದಿ ನೀಡುವವರೆಗೆ ಖರೀದಿ ವ್ಯವಹಾರಕ್ಕೆ ಮಾನ್ಯತೆ ನೀಡುವಂತಿಲ್ಲ ಎಂಬ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ’ ಎಂದು ಶಾಸಕ, ಕೋಮುಲ್‌ ನಿರ್ದೇಶಕ ಎಸ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

ಕೋಮುಲ್‌ ಕಚೇರಿ ಆವರಣದಲ್ಲಿ ಗುರುವಾರ ಆಡಳಿತ ಮಂಡಳಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಭೆಯಲ್ಲಿ ಈ ವಿಚಾರದ ಬಗ್ಗೆ ನಾವು ಆಕ್ಷೇಪ ಸಲ್ಲಿಸಿದ್ದಕ್ಕೆ ಸಮಿತಿ ರಚಿಸಲಾಗಿದೆ. ಲೋಪಗಳ ಬಗ್ಗೆ ತನಿಖೆ ನಡೆಸಿ ತಪ್ಪಿದ್ದರೆ ಕ್ರಮ ವಹಿಸಬೇಕಾಗುತ್ತದೆ’ ಎಂದರು.

‘ಎಂವಿಕೆ ಗೋಲ್ಡನ್‌ ಡೇರಿಗೆ ಸಂಬಂಧಿಸಿದ ಟೆಂಡರ್‌ ವಿಚಾರದಲ್ಲಿ ಲೋಪದೋಷವಿದ್ದು, ಅದನ್ನೂ ತನಿಖೆ ನಡೆಸುವ ಬಗ್ಗೆ ತಿರ್ಮಾನವಾಗಿದೆ’ ಎಂದು ಹೇಳಿದರು.

ADVERTISEMENT

‘ಆಡಳಿತಾಧಿಕಾರಿ ಅವಧಿಯಲ್ಲಿ ಹಾಲು ಸರಿಯಾಗಿ ವ್ಯಾಪಾರವಾಗಿಲ್ಲವೆಂದು ಸುಮಾರು ₹ 14 ಕೋಟಿ ನಷ್ಟ ಉಂಟಾಗಿದೆ. ಈ ಬಗ್ಗೆ ತನಿಖೆ ನಡೆಯಲಿದೆ’ ಎಂದು ತಿಳಿಸಿದರು.

‘ಕಾಯಂ ನೌಕರರಿಗೆ ಮಾತ್ರ ವೈದ್ಯಕೀಯ ವಿಮೆ ಮಾಡಿಸಲಾಗುತ್ತಿದೆ. ನಮ್ಮಲ್ಲಿ 800 ಜನ ದಿನಗೂಲಿ ನೌಕರರಿದ್ದು, ಅವರಿಗೂ ವೈದ್ಯಕೀಯ ವಿಮೆ ಮಾಡಿಸಲು ಒತ್ತಾಯ ಮಾಡಿದ್ದೇವೆ. ಈ ಬಗ್ಗೆಯೂ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದರು.

‘ಜಿಲ್ಲೆಯಲ್ಲಿ ಯಾವ ಗ್ರಾಮದಲ್ಲಿ ಡೇರಿ ಇಲ್ಲವೋ ಅಲ್ಲಿ ಹೊಸದಾಗಿ ಡೇರಿ ನಿರ್ಮಿಸಲು ನಿರ್ಧಾರ ಕೈಗೊಂಡಿದ್ದೇವೆ. ಹೆಚ್ಚು ಡೇರಿಗಳು ಇದ್ದರೆ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಮುಂದಿನ ಸಭೆಗಳಲ್ಲಿ ಇನ್ನಿತರ ವಿಚಾರ ಚರ್ಚಿಸುತ್ತೇವೆ. ಒಕ್ಕೂಟ ಲಾಭದಾಯವಾಗಿ ನಡೆಯಬೇಕು’ ಎಂದು ಹೇಳಿದರು.

ನಿರ್ದೇಶಕರಾದ ಕಾಡೇನಹಳ್ಳಿ ನಾಗರಾಜ್‌, ವಡಗೂರು ಡಿ.ವಿ.ಹರೀಶ್‌, ಚೆಲುವನಹಳ್ಳಿ ನಾಗರಾಜ್‌ ಇದ್ದರು.

ಪ್ರಥಮ ಚುಂಬನಂ ದಂತ ಭಗ್ನಂ ಆಗುವುದು ಬೇಡವೆಂದು ಕೋಮುಲ್‌ನ ಮೊದಲ ಸಭೆಯಲ್ಲಿ ತಾಳ್ಮೆಯಿಂದ ಚರ್ಚಿಸಿದ್ದೇವೆ. ನಮ್ಮದು ‘ಹಾಲ್‌ ಪಾರ್ಟಿ’. ನಾವೆಲ್ಲರೂ ರೈತರು ಮಹಿಳೆಯರ ಪರ.
– ಎಸ್‌.ಎನ್‌.ನಾರಾಯಣಸ್ವಾಮಿ, ಶಾಸಕ ಕೋಮುಲ್‌ ನಿರ್ದೇಶಕ

ನ್ಯಾಯಾಂಗ ತನಿಖೆಗೂ ಒತ್ತಾಯಿಸಿದ್ದೇವೆ

‘ಆಡಳಿತಾಧಿಕಾರಿ ಅವಧಿಯಲ್ಲಿ ಆಗಿರುವ ಟೆಂಡರ್‌ ಖರೀದಿ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು ತನಿಖೆಗೆ ಸಮಿತಿ ರಚಿಸಲಾಗಿದೆ. ನಾವು ನ್ಯಾಯಾಂಗ ತನಿಖೆಗೂ ಒತ್ತಾಯಿಸಿದ್ದೇವೆ’ ಎಂದು ಕೋಮುಲ್‌ ನಿರ್ದೇಶಕ ವಡಗೂರು ಡಿ.ವಿ.ಹರೀಶ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ ‘ಒಕ್ಕೂಟದಲ್ಲಿ ಹಲವು ಲೋಪದೋಷ ಅವ್ಯವಹಾರ ನಡೆದಿರುವ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಎಲ್ಲರೂ ಇದರಲ್ಲಿ ಭಾಗಿಯಾಗಿಲ್ಲ. ಆದರೆ ಗೊಂದಲ ಸರಿಪಡಿಸಿಕೊಂಡು ನ್ಯಾಯ ದೊರಕಿಸಿಕೊಡಬೇಕು’ ಎಂದರು.

‘ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಇಲ್ಲ. ಹಾಲು ಉತ್ಪಾದಕರ ಪರವಾಗಿ ಹಾಗೂ ಒಕ್ಕೂಟ ಉಳಿಸಲು ಎಲ್ಲರ ಸಹಕಾರ ಅಗತ್ಯ. ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ರೈತರ ಹಾಕುವ ಹಾಲಿಗೆ ಉತ್ತಮ ದರ ಕೊಡಿಸಬೇಕು ಪ್ರತಿ ಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಬೇಕು ಒಕ್ಕೂಟದ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.