ಕೋಲಾರ: ಕೋಲಾರ ಹಾಲು ಒಕ್ಕೂಟದ (ಕೋಮುಲ್) ಹಿಂದಿನ ಆಡಳಿತ ಮಂಡಳಿ ಹಾಗೂ ಆಡಳಿತಾಧಿಕಾರಿ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದಾಗಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸದನದಲ್ಲಿ ಪ್ರಸ್ತಾಪಿಸಿದ್ದು, ಸರ್ಕಾರದಿಂದ ಆಂತರಿಕ ತನಿಖೆ ನಡೆಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ‘ಕೋಮುಲ್‌ನಿಂದ ನಿರ್ಮಿಸಿರುವ ಸೌರ ಘಟಕದಿಂದ ಹೆಚ್ಚಿನ ಅನುಕೂಲವಿದೆ. ಮೇವೂ ಬೆಳೆಸಬೇಕು, ವಿದ್ಯುತ್ ಉತ್ಪಾದನೆಯನ್ನೂ ಮಾಡಬೇಕು. ತಿಂಗಳಿಗೆ ₹ 2 ಕೋಟಿ ವಿದ್ಯುತ್ ಶುಲ್ಕ ಉಳಿತಾಯವಾಗುತ್ತದೆ. ಏನಾದರೂ ಲೋಪವಿದ್ದರೆ ಸ ಸರಿಪಡಿಸೋಣ’ ಎಂದರು.
‘ಎತ್ತಿನಹೊಳೆ ಯೋಜನೆ ಮಾಡಿರುವುದೇ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರಕ್ಕೆ ನೀರು ನೀಡಲು. ಹಾಸನ ಜಿಲ್ಲೆಯ ನಂತರ ಸಿಗುವ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಸಹ ಯೋಜನೆ ರೂಪಿಸಲಾಗಿತ್ತು. ಅದಕ್ಕೆ ನಾವೆಲ್ಲರೂ ವಿರೋಧ ವ್ಯಕ್ತಪಡಿಸಿದೆವು. ಕುಡಿಯುವ ನೀರಿಗೆ ಆದ್ಯತೆ ಕೊಡಬೇಕೆಂದು ಕೋರಿದ್ದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಪಂದಿಸಿದ್ದಾರೆ’ ಎಂದು ತಿಳಿಸಿದರು.
‘ಮಂತ್ರಿ ಸ್ಥಾನ ಕೋಲಾರ ಜಿಲ್ಲೆಗೆ ಸಿಗುವ ಕುರಿತು ಯಾರೂ ಬೇಡ ಅಂದಿಲ್ಲ. ಜಿಲ್ಲೆಯ ಕಾಂಗ್ರೆಸ್‌ನ ನಾಲ್ವರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರಿಗೆ ಮಂತ್ರಿಯಾಗುವ ಅರ್ಹತೆಯಿದೆ. ಕೋಲಾರಕ್ಕೆ ಅವಕಾಶ ಸಿಕ್ಕರೆ ನನಗೂ ಸಂತೋಷ. ಅದರಲ್ಲಿಯೂ ಇಡೀ ದೇಶದಲ್ಲೇ ಬಹಳ ಹಿಂದುಳಿದ ಸಮುದಾಯದಿಂದ ಶಾಸಕರಾಗಿರುವ ಕೊತ್ತೂರು ಮಂಜುನಾಥ್ ಅವರಿಗೆ ಸಿಕ್ಕರೆ ಇನ್ನೂ ಹೆಚ್ಚಿನ ಸಂತಸವಾಗುತ್ತದೆ’ ಎಂದರು.
‘ವೇಮಗಲ್–ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಪ್ರಚಾರಕ್ಕೆ ನಾನೂ ಹೋಗಿದ್ದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಉತ್ತಮ ಆಡಳಿತ ನೀಡುತ್ತಿದ್ದು, 17 ಕ್ಕೆ 17 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಜನರ ಆಶೀರ್ವಾದ, ಋಣವಿದ್ದು ತೀರಿಸುವ ಕೆಲಸ ಮಾಡುತ್ತೇವೆ. ಶಾಸಕರನ್ನು ನೀಡಿದಂತೆಯೇ ಸ್ಥಳೀಯ ಸಂಸ್ಥೆಯನ್ನೂ ನಮ್ಮ ಸುಪರ್ದಿಗೆ ನೀಡಬೇಕು’ ಎಂದು ಮನವಿ ಮಾಡಿದರು.
‘ಮಾಲೂರು ಪುರಸಭೆಯನ್ನು ನಗರಸಭೆಯನ್ನಾಗಿಸಿದ್ದು, ಜನಸಂಖ್ಯೆ ಆಧಾರದ ಮೇರೆಗೆ ಕೋಲಾರ ನಗರಸಭೆಯನ್ನು ಪಾಲಿಕೆಯಾಗಿ ಉನ್ನತೀಕರಣ ಮಾಡಲು ಪ್ರಯತ್ನ ನಡೆದಿದೆ. ಮಾರ್ಗಸೂಚಿಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದರು.
‘ಕೋಲಾರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಡಿಪಿಎಆರ್ ಸಿದ್ಧವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ಸಿದ್ಧವಿದೆ. ಒಂದು ವೇಳೆ ಖಾಸಗಿಯವರು ಮುಂದೆ ಬಾರದಿದ್ದಲ್ಲಿ ಸರ್ಕಾರದಿಂದಲೇ ಕಾಲೇಜು ಆರಂಭಿಸಲಾಗುವುದು. ಸದ್ಯದಲ್ಲೇ 50 ಸಾವಿರ ಜನರನ್ನು ಸೇರಿಸಿ ಜಿಲ್ಲೆಯಲ್ಲಿ ಫಲಾನುಭವಿಗಳ ಸಮಾವೇಶ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಆ ಸಮಾವೇಶಕ್ಕೆ ಮುಖ್ಯಮಂತ್ರಿ ಬರುತ್ತಾರೆ’ ಎಂದು ಹೇಳಿದರು.
ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‍ಕುಮಾರ್, ಲಕ್ಷ್ಮಿದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಅಧ್ಯಕ್ಷ ವೈ.ಶಿವಕುಮಾರ್ ಇದ್ದರು.
ಕೋಮುಲ್ ಸಂಬಂಧ ಏನಾದರೂ ಲೋಪದೋಷಗಳು ಆಗಿದ್ದಲ್ಲಿ ಸರಿಪಡಿಸಲಾಗುವುದು. ನಾರಾಯಣಸ್ವಾಮಿ ಹಾಗೂ ನಂಜೇಗೌಡರ ಇಬ್ಬರ ಮಾತನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಬೈರತಿ ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವ
ನಾನೂ ಧರ್ಮಸ್ಥಳದ ಭಕ್ತ
‘ಧರ್ಮಸ್ಥಳ ವಿಚಾರವಾಗಿ ಈಗಾಗಲೇ ಗೃಹ ಸಚಿವರು ಮಾತನಾಡಿದ್ದಾರೆ. ನಾನೂ ಧರ್ಮಸ್ಥಳದ ಭಕ್ತ. ವರ್ಷಕ್ಕೆ 2 ಬಾರಿ ತಿರುಪತಿ ಹಾಗೂ ಧರ್ಮಸ್ಥಳಕ್ಕೆ ಹೋಗುತ್ತೇನೆ. ಶಾಸಕರ (ಕೊತ್ತೂರು) ಹೆಸರಿನಲ್ಲಿ ಮಂಜುನಾಥ್ ಎಂಬುದಿದೆ’ ಎಂದು ಬೈರತಿ ಸುರೇಶ್ ಹೇಳಿದರು. ‘ಯಾರೋ ಒಬ್ಬ ವ್ಯಕ್ತಿ ದೂರು ನೀಡಿದ ಮೇಲೆ ಪ್ರಕರಣ ಅಂತ್ಯ ಮಾಡಲೇಬೇಕಲ್ಲವೇ? ಹೀಗಾಗಿ ಎಸ್‍ಐಟಿ ರಚನೆ ಮಾಡಲಾಗಿದೆ. ಇಲ್ಲದಿದ್ದರೆ ಬಿಜೆಪಿಯವರು ಅದಕ್ಕೂ ರಾಜಕೀಯ ಮಾಡುತ್ತಿದ್ದರು. ರಾಜಕೀಯ ಮಾಡುವುದು ದೇವಸ್ಥಾನ ಚರ್ಚ್ ಮಸೀದಿ ಎನ್ನುವುದೇ ಬಿಜೆಪಿಯವರ ಕೆಲಸ. ಅವರು ಯಾವತ್ತೂ ನಾವೆಲ್ಲರೂ ಒಂದೇ ಎನ್ನುವುದಿಲ್ಲ. ಒಂದು ಪಕ್ಷ ಜನಾಂಗಕ್ಕೆ ರಾಜಕೀಯ ಮಾಡುವುದನ್ನು ಬಿಜೆಪಿಯವರು ಬಿಡಬೇಕು. ಸದ್ಯ ಅನಾಮಿಕನ ದೂರಿಗೆ ಸಂಬಂಧಪಟ್ಟಂತೆ ತನಿಖೆ ಮಾಡಲಾಗುತ್ತಿದೆ. ಆತನ ಹಿಂದಿನ ಷಡ್ಯಂತ್ರವನ್ನೂ ಕಂಡು ಹಿಡಿಯುತ್ತೇವೆ. ಎಸ್‍ಐಟಿಯನ್ನು ಕೇಳಿ ಮುಂದಿನ ನಿರ್ಧಾರ ಮಾಡಲಾಗುವುದು’ ಎಂದರು.
ಗ್ಯಾರಂಟಿಗೆ ಟೀಕೆ; ಬಿಜೆಪಿ ವಿರುದ್ಧ ಗರಂ
‘ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಚುನಾವಣೆ ವೇಳೆ ಟೀಕೆ ಮಾಡುವ ನಾಟಕವಾಡುವ ಬಿಜೆಪಿ ಜೆಡಿಎಸ್‌ನವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯೇ? ಬರೀ ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ. ಬಿಜೆಪಿಯವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಬೇಕು’ ಎಂದು ಬೈರತಿ ಸುರೇಶ್ ಗರಂ ಆದರು. ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳು ಆಗಿದೆ. ಗ್ಯಾರೆಂಟಿ ಯೋಜನೆಗಳ ಪ್ರಯೋಜನವನ್ನು ಜನರು ಪಡೆದುಕೊಳ್ಳುತ್ತಿಲ್ಲವೇ? ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಭರಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಮಾತ್ರ ಈವರೆಗೆ ₹ 1143 ಕೋಟಿಯನ್ನು ಮನೆ ಯಜಮಾನಿ ಖಾತೆಗೆ ನೀಡಲಾಗಿದೆ’ ಎಂದರು.
ಶ್ರೀರಾಮುಲುಗೆ ಒಳ್ಳೆಯ ಸ್ಥಾನ ಇದೆಯೇ?
‘ಕೆ.ಎನ್.ರಾಜಣ್ಣ ಅವರನ್ನು ವಾಪಸ್ ಸಚಿವ ಸಂಪುಟಕ್ಕೆ ಪಡೆಯುವುದು ಅಥವಾ ಪಡೆಯದಿರುವುದು ಪಕ್ಷದ ಹೈಕಮಾಂಡ್‍ಗೆ ಬಿಟ್ಟಿದ್ದು. ರಾಜಣ್ಣ ಪರವಾಗಿ ಮಾತನಾಡಿರುವ ಶ್ರೀರಾಮುಲು ಅವರಿಗೆ ಮೊದಲು ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ಇದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲಿ. ನಂತರ ನಮ್ಮ ಪಕ್ಷದ ರಾಜಣ್ಣ ಅವರನ್ನು ಅವರ ಪಕ್ಷಕ್ಕೆ ಕರೆಯಲಿ’ ಎಂದು ಬೈರತಿ ಸುರೇಶ್ ತಿರುಗೇಟು ನೀಡಿದರು. ರಾಜಣ್ಣ ಅವರನ್ನು ಬಿಜೆಪಿಗೆ ಆಹ್ವಾನಿಸಿರುವ ಶ್ರೀರಾಮುಲು ವಿಚಾರಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
ಟೊಮೆಟೊ ಮಾರುಕಟ್ಟೆಗೆ 60 ಎಕರೆ
ಕೋಲಾರದಲ್ಲಿ ಹೊಸದಾಗಿ ಟೊಮೆಟೊ ಮಾರುಕಟ್ಟೆ ನಿರ್ಮಿಸಲು 60 ಎಕರೆ ಜಾಗ ನಿಗದಿ ಮಾಡಲಾಗಿದೆ ಎಂದು ಬೈರತಿ ಸುರೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಬಳಿ ಕಡತಗಳಿದ್ದು ಒಂದೆರಡು ತಿಂಗಳಲ್ಲಿ ಅಂತಿಮವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.