ಕೋಲಾರ: ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 222ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಮಕ್ಕಳ ನಾಟಕ ಪ್ರೇಕ್ಷಕರನ್ನು ಮೋಡಿ ಮಾಡಿತು.
ಕೆಜಿಎಫ್ ಸಮುದಾಯದ ಮಕ್ಕಳು ಲಂಬಕರ್ಣನ ಉಷ್ಣೀಷ ನಾಟಕ ಪ್ರದರ್ಶಿಸಿದರು. ಇತ್ತೀಚೆಗೆ ನಿಧನರಾದ ಕತೆಗಾರ, ಆದಿಮ ಸದಸ್ಯರೂ ಆಗಿದ್ದ ಮೊಗಳ್ಳಿ ಗಣೇಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶೈಲೇಶ್ ಆರು ದಿನಗಳ ಕಾಲ ತರಬೇತಿ ನೀಡಿದ ಯಕ್ಷಗಾನ ಕಲಿಕಾ ಪ್ರಾತ್ಯಕ್ಷಿಕೆಯನ್ನು ಆದಿಮ ಕೇಂದ್ರದ ರಂಗಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಅರದೇಶಹಳ್ಳಿ ವೆಂಕಟೇಶ್ ದಲಿತ ಪ್ಯಾಂಥರ್ಸ್ ಪುಸ್ತಕ ಬಿಡುಗಡೆಗೊಳಿದರು.
ಅರದೇಶಹಳ್ಳಿ ವೆಂಕಟೇಶ್ ಮಾತನಾಡಿ, ‘ಕೋಲಾರ ಚಳವಳಿಗಳ ನಾಡು. ಇವತ್ತು ಮೂಲ ಸಂಸ್ಕೃತಿ ಮಾಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದ್ದರಿಂದ ಸಮ ಸಮಾಜವನ್ನು ನಿರ್ಮಾಣ ಮಾಡಿಕೊಳ್ಳಬೇಕಾಗಿದೆ’ ಎಂದರು.
‘ಆ ಕೆಲಸ ಆದಿಮ ಮಾಡುತ್ತಿದೆ. ದಲಿತ ಪ್ಯಾಂಥರ್ಸ್ ಎಂಬ ಚಳವಳಿ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿತು. ಸುಮಾರು ಐದು ವರ್ಷ ನಡೆದು ನಿಂತು ಹೋಯಿತು. ಇಷ್ಟು ಕಡಿಮೆ ಕಾಲದಲ್ಲಿ ಒಂದು ಸರ್ಕಾರವನ್ನು ಬೀಳಿಸುವಂತಹ ಮಟ್ಟಕ್ಕೆ ಜನರನ್ನು ಜಾಗೃತಿಗೊಳಿತ್ತು. ಆದರೆ, ಭಾರತದಲ್ಲಿ ಎಷ್ಟೊ ಚಳವಳಿ ಹುಟ್ಟಲು ದಲಿತ ಪ್ಯಾಂಥರ್ಸ್ ಕಾರಣವಾಗಿದೆ’ ಎಂದು ಚಳವಳಿಗಳ ಧ್ಯೆಯೋದ್ದೇಶಗಳು, ಏನಾಗಿರಬೇಕು, ಹೇಗೆ ಇರಬೇಕು ಎನ್ನುವುದರ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದರು.
ಗೌರಿಬಿದನೂರಿನ ನ್ಯಾಷನಲ್ ಕಾಲೇಜು ಅಧ್ಯಕ್ಷ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ನಾಗರಾಜಪ್ಪ ಅವರು, ಗೌರಿಬಿದನೂರಿನ ಭಾಗದಲ್ಲಿ ಕೊಮ್ಮಣ್ಣ ಹಾಗೂ ರಾಮಚಂದ್ರಪ್ಪ ದಸಂಸ ಜೊತೆಗೆ ತೊಡಗಿಸಿಕೊಂಡ ಬಗೆ, ಚಳವಳಿ ಜತೆಯಾದ ಹಿರಿಯ ಚಳವಳಿಗಾರರಾದ ಗಂಗಾಧರ ಮೂರ್ತಿ, ಕೋಡಿರಾಂಪುರ, ಕೆಎಎಸ್ ಹೀಗೆ ಅನೇಕರ ಹೆಸರನ್ನು ನೆನೆದರು.
ರಂಗಭೂಮಿ ವಿಷಯಕ್ಕೆ ಬಂದಾಗ ಸಮುದಾಯದೊಂದಿಗೆ 1979-1993ರ ತನಕ ಪ್ರಸನ್ನ, ಮಾಲತಿ, ರಾಮಯ್ಯ, ಗುಂಡಣ್ಣ ಇವರೆಲ್ಲರ ಒಡನಾಟ ಕುರಿತು ಹೇಳಿದರು. ಆವತ್ತಿಂದ ಈ ನಂಟನ್ನು ಉಳಿಸಿಕೊಂಡು ಬಂದಿರುವುದಾಗಿ ತಿಳಿಸಿದರು.
ದಲಿತ ಪ್ಯಾಂಥರ್ಸ್ ಪುಸ್ತಕದ ಕನ್ನಡ ಅನುವಾದಕ ಸದಾಶಿವ ಮರ್ಜಿ, ಅಮೆರಿಕದ ಬ್ಲಾಕ್ ಪ್ಯಾಂಥರ್ಸ್ ಚಳವಳಿ ಮತ್ತು ಮಹಾರಾಷ್ಟ್ರದಲ್ಲಿ ಹುಟ್ಟಿದ ದಲಿತ ಪ್ಯಾಂಥರ್ಸ್ ಚಳವಳಿ ಬಗ್ಗೆ ಮರಾಠಿಯ ಜೆ.ವಿ.ಪವಾರ್ ಅವರು ರಚಿಸಿರುವ ಕೃತಿಯ ಬಗ್ಗೆ ವಿವರಿಸಿದರು.
ನಾಟಕ ನಿರ್ದೇಶಕ, ಜನಾರ್ದನ ಮಾತನಾಡಿ, ‘ಸಮುದಾಯ 50 ವರ್ಷಾಚರಣೆಯ ಕಾರಣ ಇವತ್ತಿನ ನಾಟಕ ಇಲ್ಲಿ ಪ್ರದರ್ಶನಗೊಳ್ಳುತ್ತಿದೆ. ಸುಪ್ರಿಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆಯುವಂತಹ ಮನಸ್ಥಿತಿಗಳಿರುವಾಗ ನಮ್ಮ ನಡೆ ಹೇಗಿರಬೇಕು’ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ವಕೀಲ ಮುನೇಗೌಡ, ಎಂಜಿನಿಯರ್ ಕೃಷ್ಣಪ್ಪ ಮಾತನಾಡಿದರು.
ನೀನಾಸಂ ಹಳೆಗನ್ನಡ ವಾಚಿಕರಾದ ಮಹಾಬಲೇಶ್ವರ ಅವರಿಗೆ ಆದಿಮ ಗೌರವ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ರಂಗಶಿಕ್ಷಣ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಉಪನ್ಯಾಸಕ ಜೆ.ಜಿ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಗ.ನ.ಅಶ್ವತ್ ಸ್ವಾಗತಿಸಿದರೆ, ಆದಿಮ ರಂಗಶಾಲೆಯ ಪ್ರಾಚಾರ್ಯ ಜಗದೀಶ್ ಆರ್ ಜಾಣೆ ವಂದನಾರ್ಪಣೆ ನಡೆಸಿಕೊಟ್ಟರು.
ಲಂಬಕರ್ಣನ ಉಷ್ಣೀಷ ನಾಟಕವನ್ನು ಕೆ.ಜಿ.ಎಫ್ ಸಮುದಾಯ ತಂಡದ ಮಕ್ಕಳು ಪ್ರದರ್ಶಿಸಿದರು. ಲೀಲಾ ಗರಡಿ ರಚನೆಯ ನಾಟಕಕ್ಕೆ ಜನಾರ್ದನ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಮಕ್ಕಳು ಎಲ್ಲಾ ಪಾತ್ರಗಳನ್ನೂ ಅತ್ಯಂತ ನೈಜವಾಗಿ ನಿರ್ವಹಿಸಿ ಪ್ರೇಕ್ಷಕರ ಮನಗೆದ್ದರು. ಎಲ್ಲರಿಗೂ ಆದಿಮ ಆಡಳಿತಾಧಿಕಾರಿ ರಮೇಶ್ ಅಗ್ರಹಾರ ಪ್ರಮಾಣ ಪತ್ರ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.