ಕೋಲಾರ: ಜಿಲ್ಲೆಯಲ್ಲಿ ನಗರ ಸೇರಿದಂತೆ ಎಲ್ಲೆಡೆ ಸೋಮವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಉತ್ಸವ. ಜೈ ಭೀಮ್ ಜೈ ಭೀಮ್ ಕೂಗು. ಸ್ತಬ್ಧಚಿತ್ರಗಳು, ಪಲ್ಲಕ್ಕಿಗಳಲ್ಲಿ ಅಂಬೇಡ್ಕರ್ ಅವರ ಮೆರವಣಿಗೆ, ಅವರದ್ದೇ ಗುಣಗಾನ.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ನಗರದ ವಿವಿಧೆಡೆ ವಿಜೃಂಭಣೆಯಿಂದ ನೆರವೇರಿತು.
ನಗರದ ಬಂಗಾರಪೇಟೆ ವೃತ್ತದಿಂದ ಆರಂಭವಾದ ಪಲ್ಲಕ್ಕಿಗಳು, ಸ್ತಬ್ಧಚಿತ್ರಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಚಾಲನೆ ನೀಡಿದರು.
ಮೆರವಣಿಗೆಯು ನಗರದ ಡೂಂ ಲೈಟ್ ವೃತ್ತ, ಯೋಗಿ ನಾರಾಯಣ ವೃತ್ತ, ಕ್ಲಾಕ್ ಟವರ್, ಹೊಸ ಬಸ್ ನಿಲ್ದಾಣ, ಅಮ್ಮವಾರಿಪೇಟೆ ವೃತ್ತ, ಮೆಕ್ಕೆ ವೃತ್ತ ಮಾರ್ಗವಾಗಿ ಟಿ. ಚನ್ನಯ್ಯ ರಂಗಮಂದಿರದಲ್ಲಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ತಮಟೆ ಬಾರಿಸಿ, ಟ್ರಾಕ್ಟರ್ ಚಲಾಯಿಸುವ ಮೂಲಕ ಮೆರವಣಿಗೆಯಲ್ಲಿ ಗಮನ ಸೆಳೆದರು. ವಿವಿಧ ಕಲಾ ತಂಡಗಳು ಸಾಥ್ ನೀಡಿದವು. ಡಿ.ಜೆಗಳ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ವಿವಿಧ ಹಳ್ಳಿಗಳಿಂದ 60ಕ್ಕೂ ಅಧಿಕ ಪಲ್ಲಕ್ಕಿ, ಸ್ತಬ್ಧಚಿತ್ರಗಳನ್ನು ತರಲಾಗಿತ್ತು. ವಿವಿಧ ಇಲಾಖೆಗಳಿಂದಲೂ ಸ್ತಬ್ಧಚಿತ್ರ ಮಾಡಿಕೊಂಡು ಬಂದಿದ್ದರು.
ಮುಖಂಡರು, ಅಧಿಕಾರಿಗಳು ನಚಿಕೇತನ ನಿಲಯ ಹಾಗೂ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ದಾರಿಯುದ್ದಕ್ಕೆ ಪಾನಕ, ಕೋಸಂಬರಿ ವಿತರಣೆ ನಡೆಯಿತು.
ಆದರೆ, ಅಂಬೇಡ್ಕರ್ ಪ್ರತಿಮೆಗೆ ಸಚಿವರು ಮಾಲಾರ್ಪಣೆ ಮಾಡಲಿಲ್ಲ. ಬೆನ್ನು ನೋವಿದ್ದ ಕಾರಣ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.
ಶಾಸಕ ಕೊತ್ತೂರು ಜಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‍ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್., ತಹಶೀಲ್ದಾರ್ ನಯನಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಹಾನ್ ಮಾನವತಾವಾದಿ: ‘ಬಾಬಾ ಸಾಹೇಬ್ ಎಂದೇ ಜನಪ್ರಿಯರಾಗಿದ್ದ ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಮಹಾನ್ ಮಾನವತಾವಾದಿ ಎಂದರೆ ತಪ್ಪಾಗಲಾರದು’ ಎಂದು ಬೈರತಿ ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ದಲಿತರ ವಿರುದ್ಧದ ಸಾಮಾಜಿಕ ತಾರತಮ್ಯವನ್ನು ಕೊನೆಗೊಳಿಸಲು ಬಯಸಿದ್ದ ಅಂಬೇಡ್ಕರ್ ಬಹುಪಾಲು ಯಶಸ್ಸು ಕಂಡಿದ್ದರು. ಅಸ್ಪೃಶ್ಯತೆಯ ವಿರುದ್ಧ ತಮ್ಮ ನಿರಂತರ ಹೋರಾಟದಲ್ಲಿ ತಮ್ಮ ಆಯಾಸವನ್ನು ಮರೆತು ಹಗಲು-ರಾತ್ರಿ ಎನ್ನದೆ ಆ ತಳ ಸಮುದಾಯಗಳ ಏಳಿಗೆಗೆ ಶ್ರಮಿಸಿದ್ದರು. ಇಡೀ ಜಗತ್ತೇ ಮೆಚ್ಚುವಂತಹ ದೇಶದ ಸಂವಿಧಾನ ರಚನೆಗೂ ಇದು ಅವರಿಗೆ ಸ್ಫೂರ್ತಿಯ ಸೆಲೆಯಾಯಿತು ಎನ್ನುವುದನ್ನು ಯಾರೂ ಮರೆಯಬಾರದು’ ಎಂದಿದ್ದಾರೆ.
‘ಸಮ ಸಮಾಜ ನಿರ್ಮಾಣ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ಸಂವಿಧಾನವನ್ನು ಈ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಸಮ ಸಮಾಜದ ನಿರ್ಮಾಣಕ್ಕಾಗಿ ಮತ್ತು ಅದರ ರಕ್ಷಣೆಗೆ ಪಣತೊಡಬೇಕು’ ಎಂದು ಹೇಳಿದ್ದಾರೆ.
ಕ್ಲಾಕ್ ಟವರ್ ಬಳಿ ಸಾಗಲು ಅನುಮತಿ
ಅಂಬೇಡ್ಕರ್ ಜಯಂತಿ ಅಂಗವಾಗಿ ಪಲ್ಲಕ್ಕಿಗಳು ಸ್ತಬ್ಧಚಿತ್ರಗಳ ಮೆರವಣಿಗೆಯು ಬಂಗಾರಪೇಟೆ ವೃತ್ತ ಎಸ್‌ಎನ್‌ಆರ್ ಆಸ್ಪತ್ರೆ ಮುಂಭಾಗದಿಂದ ಎಂ.ಜಿ ರಸ್ತೆ ಮೂಲಕ ತೆರಳಲು ಮಾರ್ಗವನ್ನು ನೀಡಲಾಗಿತ್ತು. ಆದರೆ ಮಾಜಿ ಸಂಸದ ಎಸ್.ಮುನಿಸ್ವಾಮಿ ಕ್ಲಾಕ್ ಟವರ್ ಮೂಲಕವೇ ಸಾಗಬೇಕೆಂದು ಪಟ್ಟು ಹಿಡಿದಿದ್ದರು. ಅದೇ ಮಾರ್ಗದಲ್ಲಿ ಹೋಗುವುದಾಗಿ ಹೇಳಿದ್ದರು. ಆರಂಭದಲ್ಲಿ ಪೊಲೀಸರು ಅವಕಾಶ ನೀಡಿರಲಿಲ್ಲ. ಪರಿಸ್ಥಿತಿ ಬಿಗಡಾಯಿಸಬಹುದು ಎಂಬುದನ್ನು ಅರಿತ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅನುಮತಿ ನೀಡುವಂತೆ ಪೊಲೀಸರಿಗೆ ಸೂಚಿಸಿದರು. ಇಷ್ಟಾಗಿಯೂ ಮುನಿಸ್ವಾಮಿ ಚಲಾಯಿಸುತ್ತಿದ್ದ ಟ್ರಾಕ್ಟರ್‌ಗೆ ಕೆಲ ಪೊಲೀಸರು ಅಡ್ಡಪಡಿಸಿದರು. ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಪೊಲೀಸ್ ವಾಹನ ಅಡ್ಡ ನಿಲ್ಲಿಸಿದ್ದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮುಂದೆ ನಿಂತು ಮೆರವಣಿಗೆ ಸಾಗಲು ಅನುವು ಮಾಡಿಕೊಟ್ಟರು. ಕ್ಲಾಕ್ ಟವರ್‌ನಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಅವರ ಜೊತೆ ಇದ್ದು ಮೆರವಣಿಗೆ ಯಶಸ್ವಿಯಾಗಿ ಸಾಗುವಂತೆ ನೋಡಿಕೊಂಡರು.
‘ಟವರ್‌ನಲ್ಲಿ ಹುಲಿ ಸಿಂಹಗಳೇನು ಇಲ್ಲ’
ಕ್ಲಾಕ್ ಟವರ್‌ನಲ್ಲಿ ಹುಲಿ ಸಿಂಹಗಳೇನು ಇಲ್ಲ. ಮುಸ್ಲಿಮರು ದಲಿತರು ಒಗ್ಗಟ್ಟಾಗಿಯೇ ಇದ್ದಾರೆ. ಯಾವುದೇ ತೊಂದರೆ ಇಲ್ಲ. ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ್ದರೂ ಆರಂಭದಲ್ಲಿ ಪೊಲೀಸ್‌ನವರು ಮೆರವಣಿಗೆಗೆ ಅಡ್ಡಿಪಡಿಸಲು ಮುಂದಾಗಿದ್ದು ಖಂಡನೀಯ. ರಾಜ್ಯದಲ್ಲಿಂದು ಕಾಂಗ್ರೆಸ್ ಸರ್ಕಾರ ಇದೆ ನಾಳೆ ನಮ್ಮ ಸರ್ಕಾರ ಬರುತ್ತದೆ ಎನ್ನುವುದನ್ನು ಪೊಲೀಸ್ ಅಧಿಕಾರಿಗಳು ಮರೆಯಬಾರದು ಎಸ್.ಮುನಿಸ್ವಾಮಿ ಮಾಜಿ ಸಂಸದ
ಸಂವಿಧಾನದಂತೆ ನಮ್ಮ ನಡೆ
ಅಂಬೇಡ್ಕರ್ ಸ್ತಬ್ಧಚಿತ್ರಗಳ ಮೆರವಣಿಗೆ ಕ್ಲಾಕ್ ಟವರ್‌ನಲ್ಲೇ ಹೋಗಬೇಕೆಂಬ ಮಾಜಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಕೆಲವರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ‘ಈ ಬಗ್ಗೆ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ಧಾರ ಕೈಗೊಳ್ಳುತ್ತಾರೆ. ನಾವೆಲ್ಲಾ ಇಲ್ಲಿ ಕುಳಿತುಕೊಂಡಿರುವುದಕ್ಕೆ ಕಾರಣ ಸಂವಿಧಾನ ಶಿಲ್ಪಿ ಅಂಬೇಡ್ಕರ್. ಕಾಂಗ್ರೆಸ್ ಸರ್ಕಾರ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.