ADVERTISEMENT

ಅಥ್ಲೆಟಿಕ್ಸ್, ಜುಡೊ ಶಿಬಿರಕ್ಕೆ ಚಾಲನೆ

ಕ್ರೀಡಾ ಇಲಾಖೆಯಿಂದ ಎರಡು ಹಂತಗಳಲ್ಲಿ ಉಚಿತ ಶಿಬಿರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 16:40 IST
Last Updated 3 ಏಪ್ರಿಲ್ 2025, 16:40 IST
ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಹಾಗೂ ಜುಡೊ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿದ ಪ್ಯಾರಾ ಒಲಿಂಪಿಕ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಕೆ.ಜಯದೇವ್, ಕ್ರೀಡಾ ಇಲಾಖೆ‌ ಸಹಾಯಕ ನಿರ್ದೇಶಕಿ ಆರ್‌.ಗೀತಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು
ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಹಾಗೂ ಜುಡೊ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿದ ಪ್ಯಾರಾ ಒಲಿಂಪಿಕ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಕೆ.ಜಯದೇವ್, ಕ್ರೀಡಾ ಇಲಾಖೆ‌ ಸಹಾಯಕ ನಿರ್ದೇಶಕಿ ಆರ್‌.ಗೀತಾ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು    

ಕೋಲಾರ: ನಗರದಲ್ಲಿನ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಅಥ್ಲೆಟಿಕ್ಸ್ ಹಾಗೂ ಜುಡೊ ಕ್ರೀಡಾ ಬೇಸಿಗೆ ಶಿಬಿರ ಆರಂಭವಾಗಿದೆ.

ಮೊದಲ ಹಂತದ ಶಿಬಿರವು ಮೇ 1 ರವರೆಗೆ ಹಾಗೂ ಎರಡನೇ ಹಂತದ ಶಿಬಿರವು ಮೇ 2 ರಿಂದ 26 ರವರೆಗೆ ನಡೆಯಲಿದೆ. ಅಥ್ಲೆಟಿಕ್ಸ್‌ನಲ್ಲಿ 10 ರಿಂದ 16 ವಯೋಮಾನ ಹಾಗೂ ಜುಡೊದಲ್ಲಿ 10 ರಿಂದ 21 ವಯೋಮಾನದವರು ಭಾಗವಹಿಸಲು ಅವಕಾಶವಿದ್ದು, ಉಚಿತ ಬೇಸಿಗೆ ಶಿಬಿರವಾಗಿದೆ.

ಶಿಬಿರಕ್ಕೆ ಪ್ಯಾರಾ ಒಲಿಂಪಿಕ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಕೆ.ಜಯದೇವ್, ಕ್ರೀಡಾ ಇಲಾಖೆ‌ ಸಹಾಯಕ ನಿರ್ದೇಶಕಿ ಆರ್‌.ಗೀತಾ ಚಾಲನೆ ನೀಡಿದರು.

ADVERTISEMENT

ಜಯದೇವ್‌ ಮಾತನಾಡಿ, ‘ಎರಡು ದಶಕಗಳ ಹೋರಾಟದ ಫಲವಾಗಿ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆ ಸಾಧ್ಯವಾಗಿದೆ. ಯುವ ಕ್ರೀಡಾಪಟುಗಳು ಕ್ರೀಡಾಂಗಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

‘ಈ ಕ್ರೀಡಾಂಗಣದಲ್ಲಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಲು ಸಿದ್ಧತೆ ನಡೆಸಿದ್ದು, ಎಲ್ಲಾ ಕ್ರೀಡಾಪಟುಗಳು ಸಹಕಾರ ನೀಡಬೇಕು’ ಎಂದು ಕೋರಿದರು.

‘ವಿದ್ಯಾರ್ಥಿಗಳು ಬೇಸಿಗೆ ಶಿಬಿರವನ್ನು ಸದುಪಯೋಗಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ರೀಡೆಯಲ್ಲಿ ಉತ್ತಮ ಸಾಧನೆ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು’ ಎಂದರು.

ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಮಾತನಾಡಿ, ‘ಇಲಾಖೆಯು ಉಚಿತವಾಗಿ ಅಥ್ಲೆಟಿಕ್ಸ್ ಹಾಗೂ ಜುಡೊ ಬೇಸಿಗೆ ಶಿಬಿರವನ್ನು ಆರಂಭಿಸಿದೆ. ಎರಡು ಹಂತಗಳ ಈ ಶಿಬಿರದಲ್ಲಿ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಬೇಕು’ ಎಂದು ಹೇಳಿದರು.

ಕ್ರೀಡಾ ತರಬೇತುದಾರ ಜಗನ್ ಮಾತನಾಡಿ, ‘ವಿದ್ಯಾರ್ಥಿಗಳು ವ್ಯಾಸಂಗದ ಜೊತೆ ಕ್ರೀಡೆಯನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಉದ್ಯೋಗ ಗಿಟ್ಟಿಸಿಕೊಳ್ಳುವುದರ ಜೊತೆಗೆ, ಜೀವನ ಪೂರ್ತಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ’ ಎಂದರು.

ವಾಕಿಂಗ್ ಗೆಳೆಯರ ಬಳಗದ ಅಧ್ಯಕ್ಷ ದೇವರಾಜ್, ವೆಂಕಟಶಿವಪ್ಪ, ಕ್ರೀಡಾಪಟು ರಾಜೇಶ್, ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿದರು.

ಶಿಬಿರದಲ್ಲಿ ಕ್ರೀಡಾಪಟುಗಳಾದ ಗೌಸ್‍ಖಾನ್, ಹಾಬಿ ರಮೇಶ್, ವಾಕಿಂಗ್ ಗೆಳೆಯರಾದ ರಾಜಣ್ಣ, ಅಮರನಾರಾಯಣ ಇದ್ದರು. ಶಿಬಿರಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಶಿಬಿರದ ಕ್ರೀಡಾ ತರಬೇತುದಾರ ವೆಂಕಟೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.