
ಬಂಗಾರಪೇಟೆ: ಬ್ಯಾಟರಾಯ ದೇವಾಲಯದ ಜಾತ್ರೆಯ ಅಂಗವಾಗಿ ಶುಕ್ರವಾರ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.
ತಾಲ್ಲೂಕಿನ ದೊಡ್ಡೂರುಕರಪನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಬ್ಯಾಟರಾಯ ಬೆಟ್ಟದ ಮೇಲಿರುವ ಬ್ಯಾಟರಾಯಸ್ವಾಮಿಯ ದೇವಾಲಯದ 8 ದಿನ ನಡೆಯುವ ಜಾತ್ರೆ ಅಂಗವಾಗಿ ಶುಕ್ರವಾರ ಅದ್ದೂರಿಯಾಗಿ ರಥೋತ್ಸವ ನಡೆಯಿತು. ಡಿ.17ರ ಬುಧವಾರದಿಂದ ಆರಂಭವಾದ ಜಾತ್ರೆ ಡಿ. 24ರಂದು ಮುಕ್ತಾಯವಾಗಲಿದೆ. ಸುಂದರವಾಗಿ ಅಲಂಕೃತಗೊಂಡ ಬ್ಯಾಟರಾಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಬೆಟ್ಟದ ಬಳಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಜಾತ್ರೆ ಅಂಗವಾಗಿ ದೇವರಿಗೆ ಸೂರ್ಯ ಪ್ರಭ ಉತ್ಸವ, ಪಾರಾಟೋತ್ಸವ, ವಸಂತೋತ್ಸವ, ಪೂರ್ಣಾಹುತಿ, ಚಂದ್ರಪ್ರಭ ಉತ್ಸವ, ಗಜೇಂದ್ರ ವಾಹನ ಉತ್ಸವ, ಪುಷ್ಪ ಪಲ್ಲಕ್ಕಿ ಉತ್ಸವ, ಆವರಣ ಸಪ್ತ ಪ್ರಕಾರೋತ್ಸವ, ಆಂಜನೇಯ ವಾಹನೋತ್ಸವ, ಪುಷ್ಪ ವಾಹನೋತ್ಸವ, ಶಯನೋತ್ಸವ ಇತ್ಯಾದಿ ಉತ್ಸವಗಳು ನಡೆದವು. ವಿಶೇಷ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ರಥವು ನೋಡುಗರ ಕಣ್ಣಿಗೆ ಹಬ್ಬದಂತಿತ್ತು. ಮಂಗಳವಾದ್ಯ, ತಮಟೆ ಹಾಗೂ ಭಜನಾ ತಂಡಗಳ ಸಂಕೀರ್ತನೆಯು ಉತ್ಸವಕ್ಕೆ ಮೆರುಗು ನೀಡಿತು.
ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ದೇವರ ಪೂಜಾ ಕಾರ್ಯಗಳಿಗೆ ಬೆಟ್ಟ ಹತ್ತಲು ಅನುಕೂಲವಾಗುವಂತೆ ₹1 ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಈ ಹಿಂದೆ ಯಾತ್ರಾ ಭವನ ನಿರ್ಮಿಸಲು ಅನುದಾನ ನೀಡಲಾಗಿತ್ತು. ದೇವಾಲಯದಲ್ಲಿ ಬಡ ವರ್ಗದವರು ಮದುವೆ ಇತ್ಯಾದಿ ಶುಭಕಾರ್ಯಗಳಿಗಾಗಿ ಕಲ್ಯಾಣ ಮಂಟಪ ನಿರ್ಮಿಸಿಕೊಡಲು ಮನವಿ ಮಾಡಲಾಗಿದ್ದು, ಒಂದು ವರ್ಷದ ಒಳಗಾಗಿ ₹1.50 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪದ ಕಾಮಗಾರಿ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಡವರಿಗೆ ನಿವೇಶನ ಹಂಚಿಕೆ ಮಾಡಲು 10 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ದೇವಾಲಯದ ಉತ್ತರಕ್ಕೆ 300 ಎಕರೆಯಲ್ಲಿ ಟೌನ್ ಶಿಪ್ ಮಾಡಲಾಗುತ್ತಿದ್ದು, ಮುಂದೆ ದೇವಾಲಯಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಮತ್ತಷ್ಟು ಪ್ರಸಿದ್ಧಿಯನ್ನು ಪಡೆದು ಯಾತ್ರಾ ಸ್ಥಳವಾಗಿ ಬದಲಾಗಲಿದೆ ಎಂದರು..
ಈ ವೇಳೆ ಡಿಕೆಹಳ್ಳಿ ಗ್ರಾ.ಪಂ. ಅಧ್ಯಕ್ಷ ಜೆ.ಸುರೇಶ್, ಪಿಡಿಒ ಭಾಸ್ಕರ್, ಚಂದ್ರಾರೆಡ್ಡಿ, ಮುನಿರಾಜು, ಮಂಜುನಾಥ, ಪೆಷ್ಕಾರ್ ಶ್ರೀನಿವಾಸ ರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.