ADVERTISEMENT

ಕೋಲಾರ: ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 7:06 IST
Last Updated 15 ಅಕ್ಟೋಬರ್ 2025, 7:06 IST
ಕೋಲಾರದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮುಖಂಡರು ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ ನೀಡಿದರು
ಕೋಲಾರದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮುಖಂಡರು ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ ನೀಡಿದರು   

ಕೋಲಾರ: ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಡೂಂ ಲೈಟ್ ವೃತ್ತದಲ್ಲಿ ಮಂಗಳವಾರ ‘ಐ ಲವ್ ಆರ್‌ಎಸ್‌ಎಸ್‌’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮುಖಂಡರು ಹಾಗೂ ಕಾರ್ಯಕರ್ತರು ಇದೇ ವೇಳೆ ವಾಹನಗಳಿಗೆ ‘ಐ ಲವ್ ಆರ್‌ಎಸ್‌ಎಸ್‌’ ಸ್ಟಿಕ್ಕರ್ ಅಂಟಿಸಿ, ಘೋಷಣೆ, ಜೈಕಾರ ಕೂಗಿದರು. ‘ಯಾರು ಭಾರತ ಪ್ರೀತಿಸುತ್ತಾರೋ ಅವರು ಆರ್‌ಎಸ್ಎಸ್‌ ಪ್ರೀತಿಸುತ್ತಾರೆ’ ಎಂದು ಹೇಳಿದರು. ಅಭಿಯಾನದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದವರನ್ನು ತಾಕತ್ತಿದ್ದರೆ ನಿಷೇಧ ಮಾಡಿ. ಅದು ಬಿಟ್ಟು ಲಕ್ಷಾಂತರ, ಕೋಟ್ಯಂತರ ಕಾರ್ಯಕರ್ತರನ್ನು ಹುಟ್ಟು ಹಾಕಿರುವ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಸಹಕಾರ ನೀಡಿರುವ ಆರ್‌ಎಸ್‍ಎಸ್ ಸಂಘಟನೆಯನ್ನು ತಾವು ಎಷ್ಟೇ ಜನ್ಮವೆತ್ತಿದರೂ ನಿಷೇಧ ಅಸಾಧ್ಯ’ ಎಂದರು.

ADVERTISEMENT

1925ರಲ್ಲಿ ಆರ್‌ಎಸ್‌ಎಸ್ ಆರಂಭವಾಗಿದ್ದು, ಪ್ರಪಂಚದಲ್ಲಿ 100 ವರ್ಷ ಪೂರೈಸಿದ 75 ಸಂಘಗಳಲ್ಲಿ ಈ ಸಂಘಟನೆಯೂ ಒಂದು. ಇದರ ಕೊಡುಗೆ ಏನೆಂದು ಹಲವರು ಕೇಳುತ್ತಾರೆ. ನರೇಂದ್ರ ಮೋದಿ, ಎಲ್.ಕೆ.ಅಡ್ವಾಣಿ, ಜೆ.ಪಿ.ನಡ್ಡಾ, ಅಮಿತ್ ಶಾ, ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಆರ್‌ಎಸ್‍ಎಸ್‍ನಿಂದಲೇ ಬಂದವರು ಎಂದರು.

ಅಂತಹ ಆರ್‌ಎಸ್‍ಎಸ್‍ಅನ್ನು ಒಂದು ಪಟ್ಟು ತಾವು ನಿಲ್ಲಿಸಿದರೆ ಅದು 10 ಪಟ್ಟು ಹೆಚ್ಚಾಗುತ್ತದೆ. ಮನೆ, ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೂ ಚಾಲನೆ ನೀಡುತ್ತಿದ್ದೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.

ಚೀನಾ-ಭಾರತ ಯುದ್ಧ, ಪ್ರಾಕೃತಿಕ ಅವಘಡದಲ್ಲಿ ಆರ್‌ಎಸ್‍ಎಸ್ ಯಾವ ಕೆಲಸ ಮಾಡಿಕೊಂಡು ಬಂದಿದೆ ಎಂಬುದನ್ನು ಇತಿಹಾಸ ಓದಿ ಅರ್ಥಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಅವರು, ತಮ್ಮದೇ ಪಕ್ಷದಿಂದ ಪ್ರಧಾನಿಯಾಗಿದ್ದ ನೆಹರೂ ಅವರು ಗಣರಾಜ್ಯೋತ್ಸವ ಪರೇಡ್‍ನಲ್ಲಿ ಆರ್‌ಎಸ್‍ಎಸ್‍ಗೆ ಅವಕಾಶ ನೀಡಿ ಗೌರವಿಸಿದ್ದ ಇತಿಹಾಸ ಕೇಳಿ ತಿಳಿದುಕೊಳ್ಳಿ ಎಂದರು.

ಬಿಜೆಪಿಯ ವಿಜಯ್ ಕುಮಾರ್, ಅಪ್ಪಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ನಾಮಾಲ್ ಮಂಜು, ಸಾ.ಮಾ.ಬಾಬು, ಅರುಣಮ್ಮ, ರತ್ನಮ್ಮ, ಮಂಜುಳಾದೇವಿ, ವಿಜಯಲಕ್ಷ್ಮಿ, ಬಾಲಾಜಿ, ಮಹೇಶ್, ಹಾರೋಹಳ್ಳಿ ವೆಂಕಟೇಶ್, ಮಂಜುನಾಥ್, ಸಾಮಾ ಪ್ರಸನ್ನ, ಯುವಮೋರ್ಚಾ ಬಾಲಾಜಿ, ಸಾಯಿಮೌಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.