ಕೋಲಾರ: ಭ್ರಷ್ಟಾಚಾರದ ಪಿಡುಗು ಎಲ್ಲೆಡೆ ವ್ಯಾಪಿಸಿದೆ. ಕ್ಯಾನ್ಸರ್ ವಾಸಿ ಮಾಡಬಹುದು ಆದರೆ, ಭ್ರಷ್ಟಾಚಾರ ಹೋಗಲಾಡಿಸುವುದು ಕಷ್ಟವಾಗಿದೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರ ವಿಚಾರದಲ್ಲಿ ವಿಶ್ವದಲ್ಲಿ ಭಾರತ 96ನೇ ಸ್ಥಾನದಲ್ಲೂ, ದೇಶದಲ್ಲಿ ಕರ್ನಾಟಕ 5ನೇ ಸ್ಥಾನದಲ್ಲೂ ಇವೆ. ದೇಶದಲ್ಲಿ ಈಗ ಶೇ 80ರಷ್ಟು ಸಾಕ್ಷರತೆ ಇದ್ದು, ಶೇ 90ರಷ್ಟು ಭ್ರಷ್ಟಾಚಾರ ನೆಲೆಸಿದೆ ಎಂದರು.
ಅಭಿವೃದ್ಧಿಯಲ್ಲಿ ಭಾರತ ವಿಶ್ವದಲ್ಲೇ ನಾಲ್ಕನೇ ಅಗ್ರಗಣ್ಯ ದೇಶವಾಗಿದೆ. ಭ್ರಷ್ಟಾಚಾರ ಹೋದರೆ ನಾವು ಮೊದಲ ಸ್ಥಾನ ಪಡೆಯುತ್ತೇವೆ. ನಮ್ಮಲ್ಲಿ ಅಷ್ಟೊಂದು ಸಂಪನ್ಮೂಲ ಇದೆ. ದುರಂತವೆಂದರೆ ದೇಶದ ಪ್ರಗತಿಗಿಂತ ಸ್ವಾರ್ಥ ಹೆಚ್ಚಾಗಿದೆ ಎಂದು ತಿಳಿಸಿದರು.
ಭ್ರಷ್ಟಾಚಾರ ಕಿತ್ತು ಹಾಕಲು ಲೋಕಾಯುಕ್ತ ಸಂಸ್ಥೆಯಿಂದ ಬಹಳ ಪ್ರಯತ್ನ ಹಾಕುತ್ತಿದ್ದೇವೆ ಎಂದು ಹೇಳಿದರು.
ಸೈನಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಇನ್ನೂ ನಿವೇಶನ, ಪಿಂಚಣಿ ನೀಡಿಲ್ಲ. ಈ ಸಂಬಂಧ 178 ತಾಲ್ಲೂಕುಗಳ ತಹಶೀಲ್ದಾರ್‌ಗಳು, ಉಪವಿಭಾಗಾಧಿಕಾರಿಗಳ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ನೋಟಿಸ್ ನೀಡಲಾಗಿದೆ ಎಂದರು.
ಹಣ ಪಡೆದು ವೋಟ್ ಹಾಕುವುದನ್ನು ಮೊದಲು ಬಿಡಬೇಕು. ಯುವಜನತೆ ಮೊಬೈಲ್‌ನಲ್ಲಿ ಮುಳುಗಿದ್ದಾರೆ. ಪೆಟ್ರಿಯಾಟಿಸಂ ಮರೆಯಾಗಿ ಮೊಬೈಲಿಸಂಗೆ ಒಳಗಾಗಿದ್ದಾರೆ. ಹುಮ್ಮಸ್ಸು, ತಾಕತ್ತು, ಸ್ವಾತಂತ್ರ್ಯದ ಕೆಚ್ಚು ಇಲ್ಲವಾಗಿದೆ ಎಂದರು.
ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ಪ್ರೇಮ, ದೇಶ ಪ್ರೇಮಕ್ಕೆ ಹೆಚ್ಚು ಒತ್ತು ಕೊಡಬೇಕು. ಮಕ್ಕಳಲ್ಲಿ ಸ್ವಾತಂತ್ರ್ಯ ಪ್ರೇಮ ಬೆಳೆಸಬೇಕಿದೆ ಎಂದು ಮನವಿ ಮಾಡಿದರು.
ಪಿಡಿಒಗಳಿಂದ ಭ್ರಷ್ಟಾಚಾರ–
ಆರೋಪ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮೋಸ ಮಾಡುತ್ತಿದ್ದಾರೆ. ಈಚೆಗೆ ಶ್ರೀನಿವಾಸಪುರ ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಕೆಲ ಅಭಿವೃದ್ಧಿ ಕೆಲಸಗಳಿಗೆ ಕ್ರಿಯಾ ಯೋಜನೆ ರೂಪಿಸಿ ವರ್ಷ ಪೂರ್ತಿ ಬಿಲ್ ಡ್ರಾ ಮಾಡಿದ್ದಾರೆ. ಆ ಮೂಲಕ ಜನಗಳ ದುಡ್ಡನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಬಿ.ವೀರಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.