
ಕೋಲಾರ: ‘ಯಾವುದೇ ಸರ್ಕಾರ ಬಂದರೂ, ಯಾರೇ ಉಸ್ತುವಾರಿ ಸಚಿವರಾದರೂ, ಎಷ್ಟೇ ಬಾಯಿ ಬಡಿದುಕೊಂಡರೂ ಕೋಲಾರ ಜಿಲ್ಲೆಗೆ ಪ್ರತಿ ಬಾರಿಯೂ ಮೋಸ ಆಗುತ್ತಿದೆ. ಇನ್ನೆಷ್ಟು ದಿನ ಅನ್ಯಾಯ ಸಹಿಸಿಕೊಳ್ಳಬೇಕು? ಚಪ್ಪಾಳೆಗಾಗಿನ ಭಾಷಣ, ಪೊಳ್ಳು ಭರವಸೆ ನಿಲ್ಲಿಸಿ ಇನ್ನಾದರೂ ಜಿಲ್ಲೆಯ ಕೋರಿಕೆ ಪೂರೈಸಿ. ಇಲ್ಲದಿದ್ದರೆ ಜನ ತಮ್ಮನ್ನು ಕ್ಷಮಿಸುವುದಿಲ್ಲ…’
ರಾಜ್ಯ ಬಜೆಟ್ ಮಂಡನೆಗೆ ಕೇವಲ ಎರಡು ದಿನಗಳು ಇರುವಂತೆ ಜಿಲ್ಲೆಯ ಜನಸಾಮಾನ್ಯರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರ ಅಂತರಾಳದ ಕೂಗಿದು. ಇನ್ನು ಸಹಿಸಲು ಸಾಧ್ಯವಿಲ್ಲ ಎಂಬ ಜನಾಕ್ರೋಶವಿದು.
ಬಜೆಟ್ ಮಂಡನೆ ವೇಳೆ ಪ್ರತಿ ಬಾರಿ ನಿರೀಕ್ಷೆಯ ಭಾರ ಹೊತ್ತು ನಿರಾಸೆ ಅನುಭವಿಸಿ ಜಿಲ್ಲೆಯ ನಾಗರಿಕರು ಬೇಸತ್ತು ಹೋಗಿದ್ದಾರೆ.
ವೈದ್ಯಕೀಯ ಕಾಲೇಜು ನಿರ್ಮಿಸಬೇಕೆಂಬುದು ಜಿಲ್ಲೆಯ ಸಾರ್ವಜನಿಕರ ದೀರ್ಘಕಾಲದ ಬೇಡಿಕೆ. ಕೋಲಾರದವರು ಏನೋ ಕೇಳುತ್ತಾರೆ ಎಂದು 2025ರ ಬಜೆಟ್‌ನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಘೋಷಣೆ ಮಾಡಿದ್ದ ಸರ್ಕಾರ ಈಗಾಗಲೇ ಹಿಂದೆ ಸರಿದಿದೆ. ಕಳೆದ ಬಾರಿ ಬಹುತೇಕ ಪಿಪಿಪಿ ಮಾದರಿಯ ಯೋಜನೆಗಳನ್ನು ಘೋಷಿಸಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾಡಿತ್ತು.
ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ತಮ್ಮ 17ನೇ ಬಜೆಟ್‌ನಲ್ಲಾದರೂ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆ ಮಾಡಬಹುದೇ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಕೂಡ ಈ ಬಾರಿ ಘೋಷಣೆ ಆಗಲಿದೆ ಎಂಬ ಭರವಸೆ ನೀಡಿದ್ದಾರೆ. ಆದರೆ, ಅದು ಭರವಸೆಗೆ ಸೀಮಿತವಾದರೆ ಈ ಬಾರಿ ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ನಾಗರಿಕರು ರವಾನಿಸುತ್ತಿದ್ದಾರೆ.
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಕಾಂಗ್ರೆಸ್ ಸರ್ಕಾರದ ಹಿಂದಿನ ಅವಧಿಯಲ್ಲೇ ಜಾರಿ ಆಗಬೇಕಿತ್ತು. ನಂತರ ಬಂದ ಸಮ್ಮಿಶ್ರ ಸರ್ಕಾರ, ಬಿಜೆಪಿ ಸರ್ಕಾರದಿಂದಲೂ ಆಗಲಿಲ್ಲ. ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿ ಮಂಗಳವಾರಕ್ಕೆ (03–03–2026) 12 ವರ್ಷಗಳು ಭರ್ತಿಯಾಗಿದೆ. 2014ರಲ್ಲಿ ಸಿದ್ದರಾಮಯ್ಯ ಭೂಮಿಪೂಜೆ ಮಾಡಿದ್ದ ಈ ಯೋಜನೆಗೆ ಅವರಿಂದಲೇ ಉದ್ಘಾಟನೆ ಭಾಗ್ಯ ಸಿಗುವುದೇ ಎಂದು ಜನ ಕಾಯುತ್ತಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನ ಗಡಿಭಾಗದಲ್ಲಿ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕಾಗಿ ಆನೆ ಕಾರಿಡಾರ್ ಸ್ಥಾಪನೆ ಮಾಡಬೇಕು, ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ₹ 1 ಕೋಟಿ ಪರಿಹಾರ, ಬೆಳೆ ನಾಶವಾದರೆ ₹ 25 ಲಕ್ಷ ಪರಿಹಾರ ನೀಡಬೇಕೆಂಬ ಆಗ್ರಹ ರೈತ ಸಂಘಟನೆಗಳಿಂದ ವ್ಯಕ್ತವಾಗಿದೆ.
ಟೊಮೆಟೊ ಹಾಗೂ ಮಾವಿನ ಬೆಳೆಯಲ್ಲಿ ಇಡೀ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗೆ ಸಂಸ್ಕರಣಾ ಘಟಕ, ಶಿಥಲೀಕರಣ ಘಟಕ ಬೇಕೆಂಬ ಬೇಡಿಕೆ ಹಲವು ವರ್ಷಗಳದ್ದು. ಆದರೆ, ಈ ಕೂಗು ಸರ್ಕಾರದ ಯಾರಿಗೂ ಕೇಳುತ್ತಿಲ್ಲ.
ಈ ಬಾರಿಯೂ ಬಜೆಟ್ ಸಂಬಂಧ ಜಿಲ್ಲೆಯ ಬೇಡಿಕೆಗಳೇನು ಎಂಬುದರ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲಾಮಟ್ಟದಲ್ಲಿ ಚರ್ಚಿಸಿಲ್ಲ. ಸಂಘಟನೆಗಳ ಅಭಿಪ್ರಾಯವನ್ನೂ ಕೇಳಿಲ್ಲ.
ರೋಗ ಬಂದಮೇಲೆ ಶುದ್ಧೀಕರಣವೇ?
ಕೋಲಾರ ಜಿಲ್ಲೆಯ ಮಣ್ಣು ಹಾಗೂ ತರಕಾರಿಗಳಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ರಚಿಸಿದ ತಜ್ಞರ ಸಮಿತಿ ಈಚೆಗೆ ಈ ವಿಚಾರ ಬಯಲು ಮಾಡಿದೆ. ಹೀಗಾಗಿ ಹಲವರು ಕೆ.ಸಿ.ವ್ಯಾಲಿ ನೀರಿನತ್ತ ಬೊಟ್ಟು ಮಾಡುತ್ತಿದ್ದಾರೆ. ಅರೆ ಸಂಸ್ಕರಣಗೊಂಡ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡದೆ ಹರಿಸುತ್ತಿರುವ ಬಗ್ಗೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ರೋಗ ಬಂದ ಮೇಲೆ ಶುದ್ಧೀಕರಣ ಮಾಡುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಕೆ.ಸಿ.ವ್ಯಾಲಿ ನೀರಿನಲ್ಲಿ ರಾಸಾಯನಿಕ ಅಂಶ ತೆಗೆದು ಜಿಲ್ಲೆಗೆ ಹರಿಸಲು ಮೂರನೇ ಹಂತದ ಶುದ್ಧೀಕರಣ ಘಟಕ ನಿರ್ಮಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಚುನಾವಣೆಯಲ್ಲಿ ಈ ವಿಚಾರಕ್ಕೆ ಒತ್ತು ನೀಡಿದ್ದ ಕಾಂಗ್ರೆಸ್‌ನ ಮುಖಂಡರು ಈಗ ಆ ವಿಚಾರವನ್ನೇ ಮರೆತಂತಿದೆ. ಈ ಬಾರಿ ಬಜೆಟ್‌ನಲ್ಲಾದರೂ ಅದಕ್ಕೆ ಒತ್ತು ಕೊಡುತ್ತಾರಾ ಎಂದು ಜನ ಕಾಯುತ್ತಿದ್ದಾರೆ.
ಟೊಮೆಟೊ ಮಾರುಕಟ್ಟೆಗೆ ಜಾಗ–ಇನ್ನೆಷ್ಟು ದಿನ?
ಏಷ್ಯಾದಲ್ಲಿ 2ನೇ ಅತಿದೊಡ್ಡ ಮಾರುಕಟ್ಟೆ ಎನಿಸಿರುವ ಟೊಮೆಟೊ ಮಾರುಕಟ್ಟೆ ಜಾಗದ ಸಮಸ್ಯೆ ಈವರೆಗೆ ಬಗೆಹರಿದಿಲ್ಲ. 100 ಎಕರೆ ಜಾಗ ಬೇಕಿದ್ದು ಸುಮಾರು 20 ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ. ಜನಪ್ರತಿನಿಧಿಗಳು ‘ಜಾಗ ಸಿದ್ಧವಿದೆ ಇವತ್ತು ನಾಳೆ’ ಎನ್ನುತ್ತಲೇ ಬರುತ್ತಿದ್ದಾರೆ. ಈಗಾಗಲೇ 60 ಎಕರೆ ಜಾಗವನ್ನು ಜಿಲ್ಲಾಡಳಿತ ಗುರುತಿಸಿದೆ. ಅದಕ್ಕೆ ಹೊಂದಿಕೊಂಡಂತೇ ಅರಣ್ಯ ಇಲಾಖೆ ಸುಪರ್ದಿಯಲ್ಲಿ ಮತ್ತಷ್ಟು ಜಾಗವಿದೆ. ಇದು ಕಂದಾಯ ಇಲಾಖೆಗೆ ಸೇರಿದ್ದ ಜಾಗ ಎನ್ನಲಾಗುತ್ತಿದ್ದು ಅದನ್ನು ಕೊಡಿಸಿ ಎಂಬ ಆಗ್ರಹ ವ್ಯಕ್ತವಾಗುತ್ತಿದೆ. ಕಡತಗಳಿಗೆ ಸರ್ಕಾರದ ಮಟ್ಟದಲ್ಲಿ ಮುಕ್ತಿ ಸಿಗಬೇಕಿದೆ.
ಶುದ್ಧ ನೀರು ಹರಿಸಿ ಪುಣ್ಯ ಕಟ್ಟಿಕೊಳ್ಳಿ
ಕೋಲಾರಕ್ಕೆ ಮುಖ್ಯವಾಗಿ ಬೇಕಿರುವುದು ಶುದ್ಧ ಕುಡಿಯುವ ನೀರು. ಈಗಾಗಲೇ ಕೊಚ್ಚೆ ನೀರು ಹರಿಸಿ ಜಿಲ್ಲೆಯ ಜನರಿಗೆ ಮೋಸ ಮಾಡಲಾಗಿದೆ. ಜನರು ರೋಗಗ್ರಸ್ಥರನ್ನಾಗಿ ಮಾಡುವ ಮೊದಲು ಶುದ್ಧ ನೀರು ಹರಿಸಿ ಪುಣ್ಯಕಟ್ಟಿಕೊಳ್ಳಿ. ಕೃಷ್ಣಾ ನದಿಯಿಂದ ನಮಗೆ ಬರಬೇಕಿರುವ ಪಾಲನ್ನಾದರೂ ಕೊಡಿಸಿ. ಈಗಾಗಲೇ ವಿಳಂಬವಾಗಿರುವ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನಾದರೂ ಬೇಗ ಪೂರ್ಣಗೊಳಿಸಿ ನೀರು ಹರಿಸಿ ಅಬ್ಬಣಿ ಶಿವಪ್ಪ ರೈತ ಮುಖಂಡ ಬಡ್ಡಿ ಸಬ್ಸಿಡಿ ಬಿಡುಗಡೆ ಮಾಡಿ ಈ ಬಜೆಟ್‌ನಲ್ಲಿ ನೀರಾವರಿ ಯೋಜನೆಗಳಿಗೆ ಒತ್ತು ಕೊಡಬೇಕು. ಎಪಿಎಂಸಿ ಮಾರುಕಟ್ಟೆಗೆ ಜಾಗ ಕಲ್ಪಿಸಬೇಕು. ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತು ಕೊಡಬೇಕು. ಡಿಸಿಸಿ ಬ್ಯಾಂಕ್‌ನಿಂದ ಸಾಲವೂ ಸಿಗುತ್ತಿಲ್ಲ ಸಬ್ಸಿಡಿ ಬಡ್ಡಿಯೂ ಸಿಕ್ಕಿಲ್ಲ. ಇದರಿಂದ ಸ್ತ್ರೀಶಕ್ತಿ ಸಂಘಗಳು ಕೃಷಿಕರು ಹೈನುಗಾರರಿಗೆ ತೊಂದರೆ ಆಗಿದ್ದು ಬಾಕಿ ಬಡ್ಡಿ ಸಬ್ಸಿಡಿ ಬಿಡುಗಡೆ ಮಾಡಿಸಿ. ಡಿಸಿಸಿ ಬ್ಯಾಂಕ್‌ಗೆ ಪುನಶ್ಚೇತನ ಕಲ್ಪಿಸಿ ವಿ.ಗೀತಾ ಜನವಾದಿ ಮಹಿಳಾ ಸಂಘಟನೆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಕೋಲಾರ ಜಿಲ್ಲೆಯನ್ನು ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಕಡೆಗಣಿಸಲಾಗುತ್ತಿದೆ. ಧ್ವನಿ ಎತ್ತಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಸಂಸದರು ಜನಪ್ರತಿನಿಧಿಗಳು ಅಸಹಾಯಕರಾಗಿದ್ದಾರೆ. ಕೃಷಿ ಕ್ಷೇತ್ರಕ್ಕೆ ಅನುದಾನದ ಜೊತೆಗೆ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಿ. ಸರ್ಕಾರಿ ವೈದ್ಯಕೀಯ ಕಾಲೇಜು ಕೃಷಿಯಾಧಾರಿತ ಕೈಗಾರಿಕೆಗಳು ಮಾವು ಸಂಸ್ಕರಣ ಘಟಕ ಸ್ಥಾಪಿಸಿ ಕೆ.ನಾರಾಯಣಗೌಡ ರೈತ ಮುಖಂಡ 3ನೇ ಹಂತದ ಶುದ್ಧೀಕರಣ ಮಾಡಿ ಕೆ.ಸಿ.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣಕ್ಕೆ ಈ ಬಾರಿಯಾದರೂ ಬಜೆಟ್‌ನಲ್ಲಿ ಅನುದಾನ ತೆಗೆದಿರಿಸಿ. ಇಲ್ಲದಿದ್ದರೆ ಜಿಲ್ಲೆಯ ಜನ ಬದುಕಲು ಕಷ್ಟವಾಗುತ್ತದೆ. ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಬೇಕು ಕೋಲಾರ ನಗರಕ್ಕೆ ರಿಂಗ್ ರಸ್ತೆ ಬೇಕು. ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆಯಿಂದ ನಗರದ ಮೋರಿಗಳ ಸ್ವಚ್ಛತೆ ಇಲ್ಲವಾಗಿದೆ. ಪೌರಕಾರ್ಮಿಕರ ನೇಮಕಕ್ಕೆ ಸರ್ಕಾರ ಕ್ರಮ ವಹಿಸಬೇಕು. ಬಡಾವಣೆಯ ರಸ್ತೆಗಳು ಗುಂಡಿ ಬಿದ್ದು ಹೋಗಿವೆ. ಈ ಕಡೆಯೂ ಗಮನ ಹರಿಸಬೇಕು ಕುರುಬರಪೇಟೆ ವೆಂಕಟೇಶ್ ನಾಗರಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.