ಕೋಲಾರ: ರಾಜ್ಯ ಸರ್ಕಾರವು ಏ.1ರಿಂದ ಹಾಲಿನ ಮಾರಾಟ ದರವನ್ನು ₹ 4 ಹೆಚ್ಚಿಸಿ ಅದನ್ನು ಹೈನುಗಾರರಿಗೆ ಹಸ್ತಾಂತರಿಸುತ್ತಿರುವ ಬೆನ್ನಲೇ ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟಕ್ಕೆ (ಕೋಮುಲ್) ಹೆಚ್ಚಿನ ಹಾಲು ಹರಿದು ಬರುತ್ತಿದೆ.
ಕಳೆದ ಹತ್ತು ದಿನಗಳಿಂದ ನಿತ್ಯ 20 ಸಾವಿರಕ್ಕೂ ಅಧಿಕ ಹಾಲು ಹೆಚ್ಚುವರಿಯಾಗಿ ಶೇಖರಣೆ ಆಗುತ್ತಿದೆ. ಖಾಸಗಿ ಸೇರಿದಂತೆ ಬೇರೆ ಕಡೆ ಹಾಲು ಮಾರಾಟ ಮಾಡುತ್ತಿದ್ದ ಹೈನುಗಾರರು ಈಗ ಹೆಚ್ಚು ದರ ಸಿಗುತ್ತಿರುವ ಕಾರಣ ಒಕ್ಕೂಟಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಖಾಸಗಿ ಹಾಲು ಉತ್ಪದನಾ ಸಂಸ್ಥೆಗಳಿಗೆ ಕಡಿವಾಣ ಬಿದ್ದಿದೆ.
ಈ ಕ್ರಮದಿಂದಾಗಿ ಈಗ ರೈತರಿಗೂ ಬಂಪರ್ ದರ ಸಿಗುತ್ತಿದ್ದು, ಕೋಮುಲ್‌ಗೂ ಲಾಭದಾಯಕವಾಗಿ ಪರಿಣಮಿಸಿದೆ. ಬೇಸಿಗೆ ಧಗೆ ಕಾರಣ ಹಾಲಿನ ಉತ್ಪಾದನೆಯಲ್ಲಿ ಕಡಿಮೆಯಾಗಿ ಒಕ್ಕೂಟದಲ್ಲಿ ಶೇಖರಣೆ ಗಣನೀಯವಾಗಿ ಇಳಿಯುವುದು ಸಹಜ. ಆದರೆ, ಈ ಬಾರಿ ಅಷ್ಟೇನೂ ಇಳಿದಿಲ್ಲ.
‘ಈ ಬಾರಿ ಬೇಸಿಗೆಯಲ್ಲೂ ಹಾಲಿನ ಶೇಖರಣೆ ಕಡಿಮೆ ಆಗಿಲ್ಲ. ಹಾಲು, ಮೊಸರು, ತುಪ್ಪವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ 16 ಹಾಲು ಒಕ್ಕೂಟಗಳಿದ್ದು, ಕೋಮುಲ್ ಲಾಭದಲ್ಲಿ ನಡೆಯುತ್ತಿದೆ. ಫೆಬ್ರುವರಿ ಅಂತ್ಯಕ್ಕೆ ಆಡಿಟ್ ಮಾಡಿದಾಗ ಅವಿಭಜಿತ ಒಕ್ಕೂಟಕ್ಕೆ (ಕೋಚಿಮುಲ್) ₹ 7 ಕೋಟಿ ಲಾಭ ಬಂದಿದೆ’ ಎಂದು ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬೇಸಿಗೆಯಲ್ಲೂ ಕೋಮುಲ್‌ಗೆ ನಿತ್ಯ ಸುಮಾರು 6.5 ಲಕ್ಷ ಲೀಟರ್ ಬರುತ್ತಿದೆ. ಇದರಲ್ಲಿ ಸುಮಾರು 3 ಲಕ್ಷ ಲೀಟರ್ ಹಾಲನ್ನು ಒಕ್ಕೂಟ ಮಾರಾಟ ಮಾಡುತ್ತಿದೆ. ಕೋಲಾರ ಜಿಲ್ಲೆ ಹಾಗೂ ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚಿನ ಮಾರಾಟ ನಡೆಯುತ್ತಿದೆ. ಹಾಗೆಯೇ ನಿತ್ಯ ಲಕ್ಷ 1 ಕೆ.ಜಿ ಮೊಸರು ಮಾರಾಟವಾಗುತ್ತಿದೆ. ಪ್ರತಿ ತಿಂಗಳು 40 ಸಾವಿರ ಕೆ.ಜಿ ನಂದಿನಿ ತುಪ್ಪವನ್ನು ಮಾರಾಟ ಮಾಡಲಾಗುತ್ತಿದೆ. ದಿನಕ್ಕೆ 1.2 ಟನ್ ಮಾರಾಟವಾಗುತ್ತಿದೆ. ದಿನಕ್ಕೆ 400 ಕೆ.ಜಿ ಮೈಸೂರು ಪಾಕ್ ಮಾರಾಟ ಮಾಡಲಾಗುತ್ತಿದೆ.
ಕೆಲ ಒಕ್ಕೂಟಗಳು ನಷ್ಟದಲ್ಲಿವೆ. ಆದರೆ ಕೋಲಾರ ಹಾಲು ಒಕ್ಕೂಟವು ಮಾರ್ಚ್ ಅಂತ್ಯಕ್ಕೆ ₹ 6 ಕೋಟಿ ಲಾಭ ಗಳಿಸಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಶೇ 16ರಷ್ಟು ಪ್ರಗತಿಯಾಗಿದೆಗೋಪಾಲಮೂರ್ತಿ ವ್ಯವಸ್ಥಾಪಕ ನಿರ್ದೇಶಕ ಕೋಮುಲ್
ಕೋಲಾರ ಹಾಲು ಒಕ್ಕೂಟದಿಂದ ರೈತರಿಗೆ ಏ.1ರಿಂದ ಲೀಟರ್ ಹಾಲಿಗೆ ₹ 35.40 ಸಿಗುತ್ತಿದೆ. ರಾಜ್ಯ ಸರ್ಕಾರ ಗ್ರಾಹಕರಿಗೆ ಹೆಚ್ಚಿಸಿದ ₹ 4 ದರವನ್ನು ಹೈನುಗಾರರಿಗೆ ತಲುಪಿಸಲಾಗುತ್ತಿದೆ. ಈ ಹಿಂದೆ ಕೋಮುಲ್‌ನಿಂದ ರೈತರಿಗೆ ಪ್ರತಿ ಲೀಟರ್‌ಗೆ ₹ 31.40 ಸಿಗುತಿತ್ತು. ಬೇಸಿಗೆ ಕಾರಣ ಮಾರ್ಚ್ 20ರಿಂದ ಒಕ್ಕೂಟವು ರೈತರಿಂದ ಖರೀದಿಸುವ ದರವನ್ನು ಆಂತರಿಕವಾಗಿ ಪ್ರತಿ ಲೀಟರ್‌ಗೆ ₹ 2 ಹೆಚ್ಚಿಸಿತ್ತು. ಇದರಿಂದಾಗಿ ₹ 33.40 ಸಿಗುತಿತ್ತು. ಆದರೆ ಈಗ ಆ ₹ 2 ಹೆಚ್ಚಳದ ಆದೇಶ ವಾಪಸ್ ಪಡೆದು ರಾಜ್ಯ ಸರ್ಕಾರದ ₹ 4 ಹೆಚ್ಚಳ ದರವನ್ನು ರೈತರಿಗೆ ನೀಡಲಾಗುತ್ತಿದೆ. ಏಪ್ರಿಲ್ 1ರಿಂದಲೇ ಈ ದರ ಜಾರಿಯಲ್ಲಿದೆ. ಜಿಲ್ಲೆಯ ಸುಮಾರು 90 ಸಾವಿರ ರೈತರಿಗೆ ಅನುಕೂಲವಾಗಲಿದೆ. ಪೋತ್ಸಾಹಧನ ₹ 5 ಸೇರಿದರೆ ಲೀಟರ್ ಹಾಲಿಗೆ ರೈತರಿಗೆ ₹ 40.40 ಸಿಗುತ್ತದೆ. ಆದರೆ ಬಹಳ ತಿಂಗಳಿಂದ ಪ್ರೋತ್ಸಾಹಧನ ಬಾಕಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.