ಕೋಲಾರ: ಕೋಲಾರ–ಚಿಂತಾಮಣಿ ರಸ್ತೆಯ ಸುಗಟೂರು ಬಳಿ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಖಾಸಗಿ ಬಸ್ ರಸ್ತೆ ಬದಿ ಕಾಲುವೆಗೆ ಉರುಳಿ ಬಿದ್ದ ಪರಿಣಾಮ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕೋಲಾರ–ಮುಳಬಾಗಿಲು ರಸ್ತೆಯ ರತ್ನ ಕನ್ವೆನ್ಷನ್ ಹಾಲ್‍ನಲ್ಲಿ ಮದುವೆ ಆರತಕ್ಷತೆಗೆ ಬಂದಿದ್ದವರು ಈ ಬಸ್ಸಿನಲ್ಲಿ ತಮ್ಮ ತಮ್ಮ ಹಳ್ಳಿಗೆ ವಾಪಸ್ ಹೋಗುತ್ತಿದ್ದರು. ಮೂರು ಖಾಸಗಿ ಬಸ್‌ಗಳ ಪೈಕಿ ಒಂದು ವಾಹನ ಉರುಳಿ ಬಿದ್ದಿದೆ. ಈ ಬಸ್ಸಿನಲ್ಲಿ ಸುಮಾರು 55 ಮಂದಿ ಇದ್ದರು. ಬಸ್‌ನಲ್ಲಿದ್ದ ಜನರು ಗಾಬರಿಯಾಗಿ ಕಿರುಚಾಡಿದ್ದಾರೆ.
ಕೋಲಾರದ ವಧು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ವರನ ಮದುವೆ ಬುಧವಾರ ನಿಗದಿಯಾಗಿತ್ತು. ಮಂಗಳವಾರ ಆರತಕ್ಷತೆಗೆ ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಗ್ರಾಮದ ಜನರನ್ನು ಮೂರು ಬಸ್ಸುಗಳಲ್ಲಿ ಕರೆತರಲಾಗಿತ್ತು.
ಆರತಕ್ಷತೆ ಮುಗಿಸಿ ಊಟ ಮಾಡಿಕೊಂಡು ಊರಿನತ್ತ ತೆರಳಿದ್ದ ಮೂರು ಬಸ್ಸುಗಳ ಪೈಕಿ ಒಂದು ಸುಗಟೂರು ಗ್ರಾಮದ ಹೊರವಲಯದಲ್ಲಿ ಇರುವ ರಸ್ತೆ ಬದಿಯ ಕಾಲುವೆಗೆ ಉರುಳಿದೆ. ಇದರಿಂದಾಗಿ ಬಸ್ಸಿನಲ್ಲಿದ್ದ ಸುಮಾರು 15 ಮಹಿಳೆಯರು ಸೇರಿದಂತೆ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ಪೈಕಿ ಐದಾರು ಮಂದಿ ಗಂಭೀರ ಗಾಯಗೊಂಡಿದ್ದು, ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಬಸ್ಸು ಹಳ್ಳಕ್ಕೆ ಬಿದ್ದು ಕೆ.ಸಿ ವ್ಯಾಲಿ ನೀರಿನಲ್ಲಿ ಮುಳುಗಿದ ಕಾರಣ ಅದರಲ್ಲಿದ್ದ ಎಲ್ಲರೂ ತೊಂದರೆಗೆ ಒಳಗಾದರು. ಈ ವಾಹನದ ಜತೆಗಿದ್ದ ಇನ್ನೆರಡು ಬಸ್ಸುಗಳ ಜನರು ಕೂಡಲೇ ನೀರಿನಲ್ಲಿ ಬಿದ್ದಿದ್ದವರನ್ನು ರಕ್ಷಿಸಿದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಮಹಿಳೆಯರು ಮದುವೆಗೆಂದು ಹಾಕಿಕೊಂಡು ಬಂದಿದ್ದ ಚಿನ್ನದ ಒಡವೆ ಹಾಗೂ ಮೊಬೈಲ್‌ಗಳು ನೀರಿನಲ್ಲಿ ಬಿದ್ದಿರುವುದು ಗೊತ್ತಾಗಿದೆ.
ವಿಚಾರ ಗೊತ್ತಾದ ಕೂಡಲೇ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮ ಕೈಗೊಂಡರು. ಬುಧವಾರ ಬೆಳಿಗ್ಗೆ ಕ್ರೇನ್‌ಗಳನ್ನು ತಂದು ನೀರಿನಲ್ಲಿದ್ದ ಬಸ್ ಮೇಲಕ್ಕೆ ಎತ್ತಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.