ADVERTISEMENT

ಕೋಲಾರ | 'ತುರ್ತು ಸಂದರ್ಭದಲ್ಲಿ 112 ಕ್ಕೆ ಕರೆ ಮಾಡಿ'

‘ಮನೆ ಮನೆಗೆ ಪೊಲೀಸ್‌’ ಕಾರ್ಯಕ್ರಮ; ಸಾರ್ವಜನಿಕರ ಸಹಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 8:03 IST
Last Updated 11 ಆಗಸ್ಟ್ 2025, 8:03 IST
ಕೋಲಾರ ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಪೊಲೀಸರು ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು
ಕೋಲಾರ ತಾಲ್ಲೂಕಿನ ಪಿಂಡಿಪಾಪನಹಳ್ಳಿ ಗ್ರಾಮದಲ್ಲಿ ಪೊಲೀಸರು ಮನೆ ಮನೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು   

ಕೋಲಾರ: ತಾಲ್ಲೂಕಿನ ಪಿಂಡಿಪಾಪನಹಳ್ಳಿ‌ ಗ್ರಾಮದಲ್ಲಿ ಜಿಲ್ಲಾ ಪೊಲೀಸರಿಂದ ಮನೆ ಮನೆಗೆ ಪೋಲೀಸ್ ಕಾರ್ಯಕ್ರಮ ನಡೆಯಿತು.

ಪೊಲೀಸ್‌ ವ್ಯವಸ್ಥೆಯನ್ನು ಸಾರ್ವಜನಿಕ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದು, ಮನೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ ಧೈರ್ಯ ತುಂಬುವ ಕೆಲಸ ಮಾಡಲಾಯಿತು. ಏನೇ ಸಮಸ್ಯೆಗಳು ಇದ್ದರೆ 112 ಸಹಾಯವಾಣಿಗೆ ಕರೆ ಮಾಡಿ ಎಂದು ಗ್ರಾಮಸ್ಥರಿಗೆ ಪೊಲೀಸರು ಮನವರಿಕೆ ಮಾಡಿದರು.

ಕೌಟುಂಬಿಕ ದೌರ್ಜನ್ಯ ವಿರುದ್ಧ ಜಾಗೃತಿ, ಕಾನೂನಿನ ಅರಿವು, ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಮಾಹಿತಿ ಹಾಗೂ ಡ್ರಗ್ಸ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ಪೊಲೀಸರು ಅಭಿಯಾನದಲ್ಲಿ ಜಾಗೃತಿ ಮೂಡಿಸಿದರು.

ADVERTISEMENT

ಗ್ರಾಮದ ಪ್ರತಿ ಮನೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಸಂಬಂಧಪಟ್ಟ ಇಲಾಖೆಯ ಮುಖ್ಯ ಅಧಿಕಾರಿಗಳ ಜೊತೆ ಮಾತನಾಡಿ ಬಗೆಹರಿಸುವಂತೆ ಸೂಚಿಸಿದರು.

ಕುಟುಂಬದ ಸದಸ್ಯರ ಜೊತೆ ಪೊಲೀಸರು ಮಾತನಾಡಿ ಏನಾದರೂ ದೂರುಗಳಿವೆಯೇ ಎಂದು ವಿಚಾರಿಸಿದರು.

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಕಾಂತರಾಜ್‌ ಮಾತನಾಡಿ, ‘ಮನೆ ಮನೆಗೆ ಪೊಲೀಸ್ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಲು ಪೊಲೀಸರಿಗೆ ನೆರವಾಗಲಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು’ ಎಂದರು.

‘ಪೊಲೀಸರು ಮನೆಗೆ ಬರುವುದು, ಜನರು ಪೊಲೀಸ್ ಠಾಣೆಗೆ ಹೋಗುವುದನ್ನು ಯಾರೂ ಅಪೇಕ್ಷಿಸುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಇಲಾಖೆ ಮುಂದಾಗಿದೆ. ಪೊಲೀಸ್‌ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಆತಂಕ ದೂರ ಮಾಡಲು ಸ್ಥಳೀಯ ಪೊಲೀಸ್‌ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸುತ್ತಾರೆ. ಈ ಮೂಲಕ ಸಾರ್ವಜನಿಕರಿಗೆ ಪೊಲೀಸರಿಗೆ ಇರುವ ಭಯವನ್ನು ಹೋಗಲಾಡಿಸಿ ಜನಸ್ನೇಹಿಯಾಗಿಸುವುದು ಈ ಕಾರ್ಯಕ್ರಮ ಉದ್ದೇಶ‌’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು.

ಪಿಂಡಿಪಾಪನಹಳ್ಳಿ‌ ಗ್ರಾಮಕ್ಕೆ ಪೊಲೀಸರ ಭೇಟಿ ಕೌಟುಂಬಿಕ ದೌರ್ಜನ್ಯ ವಿರುದ್ಧ ಜಾಗೃತಿ ಗ್ರಾಮದ ಜನರ ಸಮಸ್ಯೆ ಆಲಿಕೆ

ಗ್ರಾಮದಲ್ಲಿ ಸೌಲಭ್ಯ ಕೊರತೆ ಪಿಂಡಿಪಾಪನಹಳ್ಳಿ‌ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಕಟ್ಟ ಕಡೆಯ ಗ್ರಾಮವಾಗಿದೆ. ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮೂಲಸೌಲಭ್ಯಗಳ ಕೊರತೆ ಇದೆ. ಪೊಲೀಸರು ಸಮಸ್ಯೆಗಳನ್ನು ಪಟ್ಟಿ ಮಾಡಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.