ADVERTISEMENT

ಕೋಲಾರ: ನಾಮಫಲಕ ಮರು ಸ್ಥಾಪಿಸಲು ಆಗ್ರಹ

ಸರ್ಕಾರಿ ಕಾಲೇಜಿನಲ್ಲಿ 1964 ರಿಂದ 1974ರವರೆಗೆ ಪ್ರಾಂಶುಪಾಲರಾಗಿದ್ದ ರಾಮಕೃಷ್ಣ ಉಡುಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 8:01 IST
Last Updated 28 ಜುಲೈ 2025, 8:01 IST
ಕೋಲಾರ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು
ಕೋಲಾರ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜು   

ಕೋಲಾರ: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ (ಬಾಲಕರ ಸರ್ಕಾರಿ ಕಾಲೇಜು) ಘನತೆ, ಗೌರವ ಹೆಚ್ಚಿಸಿದ ನಿವೃತ್ತ ಪ್ರಾಂಶುಪಾಲ ದಿವಂಗತ ರಾಮಕೃಷ್ಣ ಉಡುಪ ಅವರ ನಾಮಫಲಕವನ್ನು ಕಾಲೇಜಿನ ಮುಂಭಾಗದಲ್ಲಿ ಮರು ಅನಾವರಣಗೊಳಿಸಲು ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈ ಸಂಬಂಧ ಹಳೆ ವಿದ್ಯಾರ್ಥಿ, ಮನ್ವಂತರ ಪ್ರಕಾಶನದ ಅಧ್ಯಕ್ಷ ಪಾ.ಶ್ರೀ.ಅನಂತರಾಮ ಜಿಲ್ಲಾಧಿಕಾರಿ, ನಗರಸಭೆಯ ಅಧ್ಯಕ್ಷೆ, ಪೌರಾಯುಕ್ತ ಹಾಗೂ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಿದ್ದಾರೆ.

‘ಸರ್ಕಾರಿ ಕಾಲೇಜಿನಲ್ಲಿ 1964 ರಿಂದ 1974ರವರೆಗೆ 11 ವರ್ಷ ಪ್ರಾಂಶುಪಾಲರಾಗಿ ಕೆಲಸ ಮಾಡಿದ್ದರು. ಸಾವಿರಾರು ವಿದ್ಯಾರ್ಥಿಗಳ ಪ್ರಗತಿಗೆ, ಏಳಿಗೆಗೆ ಶ್ರಮಿಸಿ ವಿದ್ಯಾರ್ಥಿ ಸ್ನೇಹಿ ಪ್ರಾಂಶುಪಾಲರೆಂದು ಹೆಗ್ಗಳಿಕೆ ಹೊಂದಿದ್ದರು’ ಎಂದಿದ್ದಾರೆ.

ADVERTISEMENT

‘ಅವರ ಸೇವೆ ಸ್ಮರಿಸಬೇಕೆಂಬ ಉದ್ದೇಶದಿಂದ ನಗರದ ಜನರು, ವಿದ್ಯಾರ್ಥಿಗಳು ಹಾಗೂ ಗಣ್ಯರ ಒತ್ತಾಸೆಯ ಮೇರೆಗೆ ಅಂದಿನ ಕೋಲಾರ ಸ್ಥಳೀಯ ಸಂಸ್ಥೆಯ ಆಡಳಿತ ವರ್ಗ 1974-75ನೇ ಸಾಲಿನಲ್ಲಿ ಕಾಲೇಜು ರಸ್ತೆಗೆ ರಾಮಕೃಷ್ಣ ಉಡುಪ ಹೆಸರಿಡಲು ನಿರ್ಣಯ ಕೈಗೊಂಡಿತ್ತು. ಕಲ್ಲಿನ ಮೇಲೆ ಉಡುಪ ರಸ್ತೆ ಎಂದು ಕೆತ್ತನೆ ಮಾಡಿಸಿ ಫಲಕವನ್ನು ಅನಾವಣಗೊಳಿಸಿತ್ತು. ಆದರೆ, ಕಾಲೇಜಿನ ಮುಂಭಾಗದ ರಸ್ತೆ ವಿಸ್ತರಣೆ ಹಾಗೂ ಪಾರಂಪರಿಕ ರಸ್ತೆಯಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಯವರು ಅಥವಾ ಗುತ್ತಿಗೆದಾರು ಅವರ ಹೆಸರಿನ ಫಲಕವನ್ನು ತೆರವುಗೊಳಿಸಿದ್ದಾರೆ’ ಎಂದು ಹೇಳಿದ್ದಾರೆ.

ಇಂದು ಭೇಟಿ: ಈ ಸಂಬಂಧ ಕಾಲೇಜಿನಲ್ಲಿ 1982-83ನೇ ಸಾಲಿನಲ್ಲಿ ಓದಿದ್ದ ಹಳೆ ವಿದ್ಯಾರ್ಥಿಗಳಾದ ಬೆಳಗಾವಿಯ ಚೆನ್ನಮ್ಮ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ರಾಮಚಂದ್ರೇಗೌಡ, ಆದರ್ಶ ಕಾಲೇಜಿನ ಮುಖ್ಯಸ್ಥ ಶ್ರೀರಾಮ, ಹಳೆ ವಿದ್ಯಾರ್ಥಿಗಳ ಬಳಗದ ಸದಸ್ಯರಾದ ಸಚ್ಚಿದಾನಂದ, ಗೋವಿಂದರಾಜು ಇನ್ನಿತರರು ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಎಸ್.ಮುರಳೀಧರ ಅವರ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ 2.30ಕ್ಕೆ ಸಮಾವೇಶಗೊಳ್ಳಲಿದ್ದಾರೆ. ರಾಮಕೃಷ್ಣ ಉಡುಪ ಅವರಿಗೆ ಗೌರವ ಸಮರ್ಪಣೆ ಮಾಡುವ ಕುರಿತು ಚರ್ಚಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.