
ಕೋಲಾರ: ನಗರದ ಎಟಿಎಂಗಳ ಬಳಿ ಸಾರ್ವಜನಿಕರಿಂದ ಮೊಬೈಲ್‌ನಲ್ಲಿ ಫೋನ್‌ಪೇ ಹಾಗೂ ಗೂಗಲ್‌ಪೇ ಮೂಲಕ ಹಣ ಪಾವತಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೋಲಾರ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ (ಸೆನ್) ಪೊಲೀಸರು ಬಂಧಿಸಿದ್ದಾರೆ.
ನಗರದ ಜಯನಗರ ಶ್ರೀರಾಮ ದೇವಸ್ಥಾನ ಬಳಿಯ ನಿವಾಸಿ ದರ್ಶನ್ ಎನ್ (24) ಹಾಗೂ ನಗರದ ಪವನ್ ಕಾಲೇಜು ಹಿಂಭಾಗದ ನಿವಾಸಿ ಭಾನು ಶಂಕರ್ (25) ಬಂಧಿತರು.
ಕಾಲೇಜು ವಿದ್ಯಾರ್ಥಿನಿಯೊಬ್ಬರು ನಗರದ ಗೌರಿಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಬಳಿ ಹಣ ಠೇವಣಿ ಮಾಡಲು ಬಂದಿದ್ದರು. ಅವರಿಗೆ ಗೂಗಲ್‌ಪೇ ಮೂಲಕ ಪಾವತಿ ವಿನಂತಿ ಕಳಿಸಿದ್ದ ಆರೋಪಿಯು ನಂತರ ಹಣ ಪಡೆದು ಪರಾರಿಯಾಗಿದ್ದ. ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್, ಜಗದೀಶ್ ಮಾರ್ಗದರ್ಶನದಲ್ಲಿ ಸೆನ್ ಠಾಣೆಯ ಡಿವೈಎಸ್ಪಿ ರಾಜೇಶ್ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿ ಆನಂದಕುಮಾರ್, ಶಂಕರ್, ವಿನಯ್, ಸಂತೋಷ್ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸಿದೆ.
ನಗರದಲ್ಲಿ ಹಲವು ಜನರಿಗೆ ಫೋನ್‌ಪೇ ಹಾಗೂ ಗೂಗಲ್‌ಪೇ ಮೂಲಕ ಪಾವತಿ ವಿನಂತಿ ಕಳಿಸಿ ಹಣ ಪಡೆದು ಪರಾರಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನಾಗರಿಕರು ಎಚ್ಚರಿಕೆಯಿಂದ ಇರುವಂತೆಯೂ ಹಾಗೂ ವಂಚನೆಗೆ ಒಳಗಾಗಿರುವವರು ಸೆನ್ ಠಾಣೆ ಡಿವೈಎಸ್ಪಿ ರಾಜೇಶ್ ಅವರನ್ನು ಸಂಪರ್ಕಿಸುವಂತೆಯೂ ಕೋರಿದ್ದಾರೆ.
ಈ ಕಾರ್ಯಾಚರಣೆಯನ್ನು ಎಸ್‌ಪಿ ನಿಖಿಲ್ ಶ್ಲಾಘಿಸಿದ್ದಾರೆ.