
ಕೋಲಾರ: ಈ ಬಾರಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಇಳಿಕೆಯಾದಲ್ಲಿ ಸಂಬಂಧಪಟ್ಟ ಮುಖ್ಯ ಶಿಕ್ಷಕರು ಮತ್ತು ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಶೈಕ್ಷಣಿಕ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಲು ಪ್ರತಿ ಶಾಲೆಯೂ ‘ಮೈಕ್ರೋ ಪ್ಲಾನಿಂಗ್’ ರೂಪಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಕೇವಲ ಗುರುತಿಸುವುದಷ್ಟೇ ಅಲ್ಲ; ನಿರ್ದಿಷ್ಟ ಕಲಿಕಾ ನ್ಯೂನತೆ ಪತ್ತೆ ಹಚ್ಚಿ ಪರಿಹಾರ ಬೋಧನೆ ನಡೆಸಬೇಕು. ಪ್ರತಿ ಮಗುವೂ ಕನಿಷ್ಠ ಉತ್ತೀರ್ಣ ಅಂಕ ಪಡೆಯುವಂತೆ ಆತ್ಮವಿಶ್ವಾಸ ತುಂಬುವ ಕೆಲಸವಾಗಬೇಕು. ಹೆಚ್ಚಿನ ಗಮನದ ಅಗತ್ಯವಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಅಧಿಕಾರಿಗಳು ದತ್ತು ಪಡೆದು, ಅವರ ಶೈಕ್ಷಣಿಕ ಪ್ರಗತಿಯನ್ನು ವಾರಕ್ಕೊಮ್ಮೆ ಪರಿಶೀಲಿಸಬೇಕು. ಶೂನ್ಯ ಫಲಿತಾಂಶ ಬರುವ ಸಾಧ್ಯತೆ ಇರುವ ಶಾಲೆಗಳ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದರು.
ವಿದ್ಯಾರ್ಥಿಗಳ ಪ್ರಗತಿಯ ಬಗ್ಗೆ ಪೋಷಕರಿಗೆ ನಿಯಮಿತವಾಗಿ ಮಾಹಿತಿ ನೀಡಬೇಕು. ಶಾಲೆಯಿಂದ ಹೊರಗುಳಿಯುವ ಅಥವಾ ಗೈರುಹಾಜರಾಗುವ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಪರೀಕ್ಷೆಗೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಮುಖ್ಯ ಶಿಕ್ಷಕರು ವಹಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಪರೀಕ್ಷಾ ಭಯ ನಿವಾರಿಸಲು ಮಾದರಿ ಪ್ರಶ್ನೆ ಪತ್ರಿಕೆಗಳ ಆಧಾರದ ಮೇಲೆ ಸರಣಿ ಪರೀಕ್ಷೆಗಳನ್ನು ನಡೆಸಬೇಕು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿ, ವಿದ್ಯಾರ್ಥಿಗಳು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಲು ವೈಯಕ್ತಿಕ ಮಾರ್ಗದರ್ಶನ ನೀಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೇವಲ ಕಚೇರಿ ಕೆಲಸಕ್ಕೆ ಸೀಮಿತವಾಗದೆ, ನಿರಂತರವಾಗಿ ಶಾಲೆಗಳಿಗೆ ಭೇಟಿ ನೀಡಿ ಬೋಧನಾ ಕ್ರಮಗಳನ್ನು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ (ಡಿಡಿಪಿಐ) ಅಲ್ಮಾಸ್ ಪರ್ವೀನ್ ತಾಜ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ಇದ್ದರು.
ಹೆಚ್ಚಿನ ಗಮನದ ಅಗತ್ಯವಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಅಧಿಕಾರಿಗಳು ದತ್ತು ಪಡೆದು ಅವರ ಶೈಕ್ಷಣಿಕ ಪ್ರಗತಿಯನ್ನು ವಾರಕ್ಕೊಮ್ಮೆ ಪರಿಶೀಲಿಸಬೇಕುಎಂ.ಆರ್.ರವಿ ಜಿಲ್ಲಾಧಿಕಾರಿ
ಹಾಸ್ಟೆಲ್ ವಿದ್ಯಾರ್ಥಿಗಳತ್ತ ಗಮನವಿಡಿ
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಸಂಜೆ ಮತ್ತು ಬೆಳಿಗ್ಗೆ ಕಡ್ಡಾಯ ಅಧ್ಯಯನ ಅವಧಿಯನ್ನು ನಿಗದಿಪಡಿಸಬೇಕು. ನಿಲಯ ಪಾಲಕರು ವಿದ್ಯಾರ್ಥಿಗಳ ಓದಿಗೆ ಪೂರಕವಾದ ಪಠ್ಯ ಸಾಮಗ್ರಿ ಮತ್ತು ಮಾರ್ಗದರ್ಶನ ಸಿಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎಂ.ಆರ್.ರವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.