ADVERTISEMENT

ದ್ವಿತೀಯ ಪಿಯು ಫಲಿತಾಂಶ | ಕೋಲಾರ: ನನಸಾಗದ 10ರೊಳಗಿನ ಸ್ಥಾನ!

ಕೆ.ಓಂಕಾರ ಮೂರ್ತಿ
Published 11 ಏಪ್ರಿಲ್ 2024, 7:03 IST
Last Updated 11 ಏಪ್ರಿಲ್ 2024, 7:03 IST
ರಾಮಚಂದ್ರಪ್ಪ
ರಾಮಚಂದ್ರಪ್ಪ   

ಕೋಲಾರ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯದ ಮಟ್ಟದಲ್ಲಿ 10ರೊಳಗಿನ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಕೋಲಾರ ಜಿಲ್ಲೆಯ ಕನಸು ಈ ಬಾರಿಯೂ ನನಸಾಗಲಿಲ್ಲ.

2023–24ನೇ ಸಾಲಿನ ವಾರ್ಷಿಕ ಪರೀಕ್ಷಾ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಶೇ 86.12 ಫಲಿತಾಂಶದೊಂದಿಗೆ 12ನೇ ಸ್ಥಾನ ಪಡೆದುಕೊಂಡಿದೆ. ಕಳೆದ ಬಾರಿಗಿಂತ ಎರಡು ಸ್ಥಾನ ಸುಧಾರಿಸಿರುವುದೇ ಸಾಧನೆ ಆಗಿದೆ. ಜೊತೆಗೆ ಕಳೆದ ಆರು ವರ್ಷಗಳಲ್ಲಿನ ಉತ್ತಮ ಫಲಿತಾಂಶ ಕೂಡ. 2022–23ರಲ್ಲಿ ಶೇ 79.2 ಫಲಿತಾಂಶದೊಂದಿಗೆ ಜಿಲ್ಲೆಯು 14ನೇ ಸ್ಥಾನ ಪಡೆದುಕೊಂಡಿತ್ತು. 

ಪಿಯು ಫಲಿತಾಂಶದಲ್ಲಿ ಬಹಳ ಹಿಂದುಳಿದಿರುವ ಜಿಲ್ಲೆಯ ರ‍್ಯಾಂಕಿಂಗ್‌ ಸುಧಾರಿಸಲು ಈ ಬಾರಿ ಜಿಲ್ಲಾಧಿಕಾರಿ ಅಕ್ರಂ ಪಾಷ ಅಖಾಡಕ್ಕಿಳಿದಿದ್ದರು. ಅವರ ನೇತೃತ್ವದಲ್ಲಿ ಹಲವಾರು ಸಭೆ, ಕಾರ್ಯಾಗಾರ ನಡೆದಿದ್ದವು. ಕನಿಷ್ಠ ಹತ್ತು ಸ್ಥಾನದೊಳಗೆ ಕಾಣಿಸಿಕೊಳ್ಳಬೇಕೆಂದು ಗುರಿ ನಿಗದಿಪಡಿಸಿದ್ದರು. ಡಿಡಿಪಿಯು ರಾಮಚಂದ್ರಪ್ಪ ಸವಾಲಾಗಿ ಸ್ವೀಕರಿಸಿ ಸಾಕಷ್ಟು ಪ್ರಯತ್ನ ಹಾಕಿದ್ದರು. ಆದರೆ, ಆ ಕಸರತ್ತು ಸಾಕಾಗಿಲ್ಲ.

ADVERTISEMENT

‘ಅಗ್ರ ಹತ್ತರೊಳಗಿನ ಸ್ಥಾನದಲ್ಲಿ ಬರಲು ಸಾಧ್ಯವಾಗದ್ದು ನಿರಾಸೆ ಮೂಡಿಸಿದೆ. ಆದರೆ, ಕ್ರಮೇಶ ಸುಧಾರಣೆ ಕಾಣುತ್ತಿದ್ದೇವೆ. ಇದೇ ಕೊನೆಯಲ್ಲ; ಉತ್ತಮ ಫಲಿತಾಂಶಕ್ಕೆ ನಿರಂತರ ಪ್ರಯತ್ನ ಮುಂದುವರಿಸುತ್ತೇವೆ. ಖುಷಿಯ ವಿಚಾರವೆಂದರೆ ಸರ್ಕಾರಿ ಕಾಲೇಜುಗಳಲ್ಲಿ ಫಲಿತಾಂಶ ಸುಧಾರಣೆ ಕಂಡಿದೆ’ ಎಂದು ಡಿಡಿಪಿಯು ರಾಮಚಂದ್ರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಿತ್ಯ ಬೆಳಿಗ್ಗೆ 8.30ರಿಂದ 9.30ರವರೆಗೆ ಹೆಚ್ಚುವರಿ ತರಗತಿ ಹಾಗೂ ಮಧ್ಯಾಹ್ನ 3.30ರಿಂದ 4.30 ಗಂಟೆವರೆಗೆ ಗುಂಪು ಅಧ್ಯಯನ ನಡೆಸಲಾಗುತ್ತಿತ್ತು. ಎಲ್ಲಾ ವಿಷಯಗಳಲ್ಲಿ ಪ್ರಶ್ನೆ ಪತ್ರಿಕೆ ಕೈಪಿಡಿ ಮಾಡಿ ಮಕ್ಕಳನ್ನು ಸಜ್ಜುಗೊಳಿಸಲಾಗಿತ್ತು. ಆದರೆ, ಶಿಕ್ಷಕರ ಪ್ರಯತ್ನ ಸಾಕಾಗಿಲ್ಲ. 

ಜಿಲ್ಲೆಯಲ್ಲಿ ಈ ಬಾರಿ 13,360 ಹೊಸ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 11,505 ಮಂದಿ ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಈ ಬಾರಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರು ಶೇ 83.98 ಅಂಕಗಳೊಂದಿಗೆ ಬಾಲಕರನ್ನು (ಶೇ 78.32) ಹಿಂದಿಕ್ಕಿದ್ದಾರೆ.

ಈ ಬಾರಿಯೂ ಕಲಾ ಹಾಗೂ ವಾಣಿಜ್ಯ ವಿಭಾಗಗಳಿಗಿಂತ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೇ 90.16ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದೇ ಅದಕ್ಕೆ ಸಾಕ್ಷಿ.

ಕಲಾ ವಿಭಾಗದಲ್ಲಿ ಈ ಬಾರಿ ತುಸು ಸುಧಾರಣೆ ಕಂಡರೂ ಉಳಿದ ವಿಭಾಗಕ್ಕೆ ಹೋಲಿಸಿದರೆ ಹಿಂದಿದ್ದಾರೆ. ಶೇ 71.81 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ 1,316 ವಿದ್ಯಾರ್ಥಿಗಳಲ್ಲಿ 945 ಮಂದಿ ತೇರ್ಗಡೆಯಾಗಿದ್ದಾರೆ. 2023ರಲ್ಲಿ ಶೇ 62.9, 2022ರಲ್ಲಿ ಶೇ 35.05, ಅದಕ್ಕೂ ಮುನ್ನ ಶೇ 36.59 ಫಲಿತಾಂಶ ಬಂದಿತ್ತು. ವಾಣಿಜ್ಯ ವಿಭಾಗದಲ್ಲಿ ಈ ಬಾರಿ 85.29ಶೇ ಫಲಿತಾಂಶ ಬಂದಿದೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್‌ 1ರಿಂದ 22ರವರೆಗೆ ನಡೆದಿತ್ತು.

ಕಳೆದ ಆರು ವರ್ಷಗಳಲ್ಲಿ ಉತ್ತಮ ಫಲಿತಾಂಶ ಫಲಿತಾಂಶದಲ್ಲಿ ಈ ಬಾರಿ ಶೇ 6ರಷ್ಟು ಹೆಚ್ಚಳ ಆದರೂ ಸಾಕಾಗದ ಜಿಲ್ಲೆಯ ಕಸರತ್ತು
ಅಗ್ರ 10ರಲ್ಲಿ ಬರಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಈ ನಿಟ್ಟಿನಲ್ಲಿ ಸಾಕಷ್ಟು ಶ್ರಮ ಹಾಕಿದ್ದೇವೆ. ಆದರೆ ಕಳೆದ ಬಾರಿಗಿಂತ ತುಸು ಪ್ರಗತಿ ಸಾಧಿಸಿದ್ದೇವೆ
ರಾಮಚಂದ್ರಪ್ಪ ಡಿಡಿಪಿಯು
ಮೆಥೋಡಿಸ್ಟ್‌ ಕಾಲೇಜು; ಶೂನ್ಯ ಫಲಿತಾಂಶ!
ನಗರದ ಮೆಥೋಡಿಸ್ಟ್‌ ಬಾಲಕಿಯರ ಪಿಯು ಕಾಲೇಜಿನಲ್ಲಿ (ಅನುದಾನಿತ) ಈ ಬಾರಿ ಶೂನ್ಯ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ ಎಲ್ಲರೂ ಅನುತ್ತೀರ್ಣರಾಗಿದ್ದಾರೆ. ‘ಈ ಕಾಲೇಜಿನಲ್ಲಿ ಒಬ್ಬರೂ ಕಾಯಂ ಉಪನ್ಯಾಸಕರು ಇರಲಿಲ್ಲ. ಎಲ್ಲರೂ ನಿವೃತ್ತರಾಗಿದ್ದಾರೆ. ಬಹಳ ಹಳೇ ಕಾಲೇಜು ಇದಾಗಿದ್ದು ಅರೆಕಾಲಿಕ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ. ಹೀಗಾಗಿ ಕಾಲೇಜು ಮುಚ್ಚಲು ನಾನು ಹೇಳಿದ್ದೆ’ ಎಂದು ಡಿಡಿಪಿಯು ರಾಮಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.