ADVERTISEMENT

ಕೋಲಾರ ಜಿಲ್ಲಾಸ್ಪತ್ರೆ: ನರ್ಸ್‌ಗಳಿಲ್ಲವೆಂದು ಒಳರೋಗಿಗಳು ಹೊರಕ್ಕೆ!

ವೈದ್ಯರು ಮತ್ತು ನರ್ಸ್‌ಗಳ ಕೊರತೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 4:17 IST
Last Updated 2 ಮಾರ್ಚ್ 2023, 4:17 IST
ಕೋಲಾರದಲ್ಲಿ ಬುಧವಾರ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿದ್ದರಿಂದ ಆವರಣದಲ್ಲಿ ಕುಳಿತಿದ್ದ ಬಂಗಾರಪೇಟೆ ತಾಲ್ಲೂಕಿನ ರೆಡ್ಡಹಳ್ಳಿಯ ರೋಗಿ
ಕೋಲಾರದಲ್ಲಿ ಬುಧವಾರ ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿದ್ದರಿಂದ ಆವರಣದಲ್ಲಿ ಕುಳಿತಿದ್ದ ಬಂಗಾರಪೇಟೆ ತಾಲ್ಲೂಕಿನ ರೆಡ್ಡಹಳ್ಳಿಯ ರೋಗಿ   

ಕೋಲಾರ: ನಗರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಹಲವು ಒಳರೋಗಿ
ಗಳನ್ನು ಬುಧವಾರ ವೈದ್ಯರು ಮತ್ತು ನರ್ಸ್‌ಗಳು ಲಭ್ಯ ಇಲ್ಲವೆಂದು ಹೊರಹಾಕಲಾಗಿದೆ.

ಲಗೇಜು ಸಮೇತ ಆಸ್ಪತ್ರೆ ಆವರಣದಲ್ಲಿ ಕಾದು ಕುಳಿತಿದ್ದ ರೋಗಿಗಳನ್ನು ಅವರ ಕುಟುಂಬ ಸದಸ್ಯರು ಬಂದು ಮನೆಗೆ ಕರೆದೊಯ್ದರು. ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕಾಲು ಉರಿಗೆ ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದೆ. ಮುಷ್ಕರವಿದ್ದು, ವೈದ್ಯರು ಬರುವುದಿಲ್ಲವೆಂದು ಆಸ್ಪತ್ರೆಯಿಂದ ಹೊರಡಲು ಹೇಳಿದರು. ಕಾಲು ಉರಿ ಇನ್ನೂ ವಾಸಿ ಆಗಿಲ್ಲ. ನನ್ನ ಜೊತೆ ಇನ್ನೂ ಹಲವು ರೋಗಿಗಳಿಗೆ ಡಿಸ್ಚಾರ್ಜ್‌ ಮಾಡಿಕೊಂಡು ಮನೆಗೆ ಹೋಗುವಂತೆ ಸೂಚಿಸಿದರು’ ಎಂದು ಬಂಗಾರಪೇಟೆ ತಾಲ್ಲೂಕಿನ ರೆಡ್ಡಹಳ್ಳಿಯ ಯಲ್ಲಪ್ಪ ‘ಪ್ರಜಾವಾಣಿ‍’ಗೆ ತಿಳಿಸಿದರು.

ADVERTISEMENT

60 ವರ್ಷ ವಯಸ್ಸಿನ ಅವರು ಎಂಟು ದಿನಗಳಿಂದ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಲಿನ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ ಮುಳಬಾಗಿಲು ತಾಲ್ಲೂಕಿನ ಸಂಗಸಂದ್ರದ ಮುನಿವೆಂಕಟಪ್ಪ ಅವರಿಗೂ ಮನೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದಾರೆ. ಗಾಯ ಇನ್ನೂ ವಾಸಿಯಾಗದ ಕಾರಣ ನೋವಿನಿಂದ ಆಸ್ಪತ್ರೆ ಆವರಣದಲ್ಲೇ ನರಳುತ್ತಾ ಮನೆಯವರಿಗಾಗಿ ಅವರು ಕಾದು ಕುಳಿತಿದ್ದರು. ಆಸ್ಪತ್ರೆಯ ಸಿಬ್ಬಂದಿ ತಮ್ಮೊಂದಿಗೆ ಅಮಾನವೀಯವಾಗಿ ನಡೆದುಕೊಂಡರು ಎಂದು ಅವರು ನೋವು ತೋಡಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಎಸ್‌.ಎನ್‌.ವಿಜಯಕುಮಾರ್‌, ‘ಆಸ್ಪತ್ರೆ
ಯಲ್ಲಿ ಸಿಬ್ಬಂದಿ ಕೊರತೆ ಇದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ನರ್ಸ್‌ಗಳು 15 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.

ಸುಮಾರು 75 ನರ್ಸ್‌ಗಳು ಕೆಲಸಕ್ಕೆ ಬರುತ್ತಿಲ್ಲ. ಬ್ಯಾಂಡೇಜ್ ಕಟ್ಟುವುದು ಸೇರಿದಂತೆ ಎಲ್ಲಾ ಕೆಲಸವನ್ನು ವೈದ್ಯರೇ ಮಾಡುತ್ತಿದ್ದಾರೆ. ಇದಲ್ಲದೇ ಸರ್ಕಾರಿ ನೌಕರರು ಬುಧವಾರ ಮುಷ್ಕರ ನಡೆಸಿದರು. ಆದರೆ, ನಾವು ಯಾವುದೇ ರೋಗಿಯನ್ನು ಹೊರಹೋಗುವಂತೆ ಹೇಳಿಲ್ಲ. ಅವರೇ ಹೋಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.