ADVERTISEMENT

ರಾಜ್ಯ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯ ಕಡೆಗಣನೆ: ಗೋವಿಂದರಾಜು ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 14:34 IST
Last Updated 18 ಮಾರ್ಚ್ 2022, 14:34 IST

ಕೋಲಾರ: ‘ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ 65 ಕಿಮೀ ದೂರದಲ್ಲಿದ್ದರೂ ಕೋಲಾರ ಜಿಲ್ಲೆ ನಿರೀಕ್ಷಿತ ಅಭಿವೃದ್ಧಿ ಸಾಧಿಸಿಲ್ಲ. ಪ್ರಸಕ್ತ ಬಜೆಟ್‌ನಲ್ಲಿ ಜಿಲ್ಲೆಗೆ ಹೊಸ ಯೋಜನೆ ನೀಡದೆ ಕಡೆಗಣಿಸಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ವಿಧಾನ ಮಂಡಲ ಅಧಿವೇಶನದಲ್ಲಿ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದರು.

ಪರಿಷತ್‌ ಕಲಾಪದಲ್ಲಿ ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳು, ರೈತರು, ಕಾಲೇಜುಗಳ ಮೂಲಭೂತ ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ’ ಎಂದು ದೂರಿದರು.

‘ಕೋಲಾರದ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಕಾಲೇಜಿನಲ್ಲಿ ಮೂಲಸೌಕರ್ಯ ಸಮಸ್ಯೆಯಿದೆ. ಹೋಂಡಾ ಕಂಪನಿ ನಿರ್ಮಿಸಿರುವ ಸಭಾಂಗಣದಲ್ಲಿ ಮಕ್ಕಳಿಗೆ ಅಗತ್ಯ ಆಸನ ವ್ಯವಸ್ಥೆಗೆ ವೈಯಕ್ತಿಕವಾಗಿ ₹ 9 ಲಕ್ಷ ನೀಡಿದ್ದೇನೆ. 3,500 ಮಕ್ಕಳಿರುವ ಈ ಕಾಲೇಜಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕೋಲಾರ ಎಪಿಎಂಸಿಗೆ ಅರಣ್ಯ ಇಲಾಖೆಯ 35 ಎಕರೆ ಜಾಗ ನೀಡಿ ಅಲ್ಲಿ ಮಾರುಕಟ್ಟೆ ಆರಂಭಿಸಬೇಕು. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಅಕ್ಕಪಕ್ಕದ ರಾಜ್ಯಗಳ ಗಡಿ ಭಾಗದ ಲಕ್ಷಾಂತರ ರೈತರಿಗೆ ಸಹಾಯವಾಗುತ್ತದೆ. ಜಿಲ್ಲೆಯ ಪಶು ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಿಸಬೇಕು ಮತ್ತು ಅಗತ್ಯ ಪ್ರಮಾಣದಲ್ಲಿ ಔಷಧ ಮಾತ್ರೆಗಳನ್ನು ಒದಗಿಸಬೇಕು’ ಎಂದು ಕೋರಿದರು.

‘ತೋಟಗಾರಿಕೆ, ಹೈನುಗಾರಿಕೆ, ಕೃಷಿ, ರೇಷ್ಮೆ ಮತ್ತು ಕೋಳಿ ಸಾಕಾಣಿಕೆಗೆ ಉಪಯೋಗವಾಗುವಂತೆ ಕೆ.ಸಿ ವ್ಯಾಲಿ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಬೇಕು. ಕೆ.ಸಿ ವ್ಯಾಲಿ ಯೋಜನೆ 2ನೇ ಹಂತದ ಕಾಮಗಾರಿಗೆ ಬಜೆಟ್‌ನಲ್ಲಿ ₹ 455 ಕೋಟಿ ಘೋಷಿಸಲಾಗಿದೆ. ಆದರೆ, 2021ರ ಅಕ್ಟೋಬರ್‌ನಲ್ಲೇ ಈ ಬಗ್ಗೆ ಸರ್ಕಾರದಿಂದ ಆದೇಶವಾಗಿ ಎಲ್‌ ಅಂಡ್ ಟಿ ಕಂಪನಿಗೆ ಟೆಂಡರ್ ಸಹ ನೀಡಲಾಗಿದೆ. ಟೆಂಡರ್ ಆಗಿರುವ ಯೋಜನೆ ರದ್ದುಪಡಿಸಿ ಮತ್ತೆ ಈಗ ಅದೇ ಯೋಜನೆ ಘೋಷಿಸಿರುವುದು ಯಾವ ನ್ಯಾಯ?’ ಎಂದು ಪ್ರಶ್ನಿಸಿದರು.

ನೀರು ಬರಲಿಲ್ಲ: ‘ಭದ್ರಾ ಮೇಲ್ದಂಡ ಯೋಜನೆ ನೀರು ಕೋಲಾರಕ್ಕೆ ಬರುತ್ತೆ. ಇದಕ್ಕಾಗಿ ಕಚೇರಿ ಆರಂಭಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಆ ಯೋಜನೆ ಬಿಟ್ಟು ಎತ್ತಿನಹೊಳೆ ಯೋಜನೆಗೆ ಅನುಮೋದನೆ ನೀಡಲಾಗಿದೆ. ನಂತರ ಭದ್ರಾ ಮೇಲ್ದಂಡೆ ಯೋಜನೆ ಕಚೇರಿಯನ್ನು ಎತ್ತಿನಹೊಳೆ ಯೋಜನೆಯ ಕಚೇರಿಯಾಗಿ ಪರಿವರ್ತಿಸಲಾಯಿತು. ಆದರೆ, ನೀರು ಮಾತ್ರ ಬರಲಿಲ್ಲ’ ಎಂದು ಹೇಳಿದರು.

‘ಕೋಲಾರ, ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 10 ಟಿಎಂಸಿ ಕುಡಿಯುವ ನೀರು ನೀಡುವ ಯೋಜನೆ ಇತ್ತು. ಅದನ್ನು ಕೇವಲ 2.5 ಟಿಎಂಸಿಗೆ ಇಳಿಸಲಾಗಿದೆ. ಇದಕ್ಕೆ ಕಾರಣ ಕೇಳಿದರೆ ಭೂಸ್ವಾಧೀನಕ್ಕೆ ಸಾವಿರಾರು ಕೋಟಿ ರೂಪಾಯಿ ಬೇಕಾಗುತ್ತೆ. ಇದರ ಬದಲು ಬೇರೆ ಯೋಜನೆಯಲ್ಲಿ 10 ಟಿಎಂಸಿ ನೀರು ಕೊಡುತ್ತೇವೆ ಎಂದು ಸರ್ಕಾರ ಹೇಳಿದೆ. ಆದರೂ ಎತ್ತಿನಹೊಳೆ ಯೋಜನೆಗೆ ₹ 3 ಸಾವಿರ ಕೋಟಿ ನೀಡಿದ್ದು, ಇದನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ, ಎತ್ತಿನಹೊಳೆ ಕಾಮಗಾರಿ ಶೀಘ್ರ ಮುಗಿಸಿ’ ಎಂದರು.

‘ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳಿಲ್ಲ. ಆಸ್ಪತ್ರೆಯಲ್ಲಿ ನಿರ್ಮಿಸಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಗರ್ಭಿಣಿಯರು ಹೆರಿಗೆಗಾಗಿ ಬೆಳಿಗ್ಗೆ ಬಂದರೆ ಸಂಜೆ ಮತ್ತೊಬ್ಬ ರೋಗಿಗೆ ಸ್ಥಳಾವಕಾಶ ನೀಡಬೇಕಾದ ಸ್ಥಿತಿ ಇದೆ. 2 ತಿಂಗಳ ಹಿಂದೆ ಆರೋಗ್ಯ ಸಚಿವರು ಈ ಆಸ್ಪತ್ರೆಗೆ ₹ 7.50 ಕೋಟಿ ನೀಡಿದರೂ ಆಸ್ಪತ್ರೆ ಅಭಿವೃದ್ಧಿ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲಾ ಆಸ್ಪತ್ರೆಗೆ ಕೋಲಾರ ಹೊರವಲದಯ ಸ್ಯಾನಿಟೋರಿಯಂ ಬಳಿಯಿರುವ ಅರಣ್ಯ ಇಲಾಖೆಯ ಜಾಗ ನೀಡಿ ಅಭಿವೃದ್ಧಿಪಡಿಸಿ. ಒಟ್ಟಾರೆ ಜಿಲ್ಲೆಗೆ, ಕುಡಿಯುವ ನೀರು, ಉತ್ತಮ ಆರೋಗ್ಯ ವ್ಯವಸ್ಥೆ, ಶಿಕ್ಷಣ, ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.