ಸಾಂದರ್ಭಿಕ ಚಿತ್ರ
ಕೋಲಾರ: ಅವಧಿ ಪೂರ್ವವಾಗಿ ಜನಿಸಿದ 650 ಗ್ರಾಂ ತೂಕವಿದ್ದ ನವಜಾತ ಶಿಶುವಿಗೆ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಂಶೋದಯ ಅಡ್ವಾನ್ಸ್ಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಕ್ಕಳ ತಜ್ಞರ ತಂಡ ಸತತ 77 ದಿನ ನಿತ್ಯ 24 ಗಂಟೆ ಆರೈಕೆ ಮಾಡಿ ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದೆ. ಈ ವೇಳೆಗೆ ಮಗು 1.66 ಕೆ.ಜಿ. ತೂಕ ಹೊಂದಿದೆ ಎಂದು ನವಜಾತ ಶಿಶುಗಳ ತಜ್ಞ ವೈದ್ಯ ಡಾ.ಮನೋಜ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಗು ಜನಿಸಿದಾಗ ಕೇವಲ 650 ಗ್ರಾಂ ತೂಕ ಇತ್ತು. ಶಿಶುವನ್ನು ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಘಾ ಘಟಕದಲ್ಲಿ ಇರಿಸಿ ಆರೈಕೆ ಮಾಡಲಾಯಿತು. ಮೊದಲ 50 ದಿನ ಕೃತಕ ಉಸಿರಾಟದ ಯಂತ್ರದಲ್ಲಿ ಆರೈಕೆ ಮಾಡಲಾಯಿತು. ನಂತರ ಆಮ್ಲಜನಕದ ಸಹಾಯದೊಂದಿದೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಆಮ್ಲಜನಕ ತೆಗೆದು ಸಾಮಾನ್ಯ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಯಿತು. ವಿಶೇಷ ಆರೈಕೆಯ ಜೊತೆಗೆ ಉತ್ತಮ ಚಿಕಿತ್ಸೆ ನೀಡಿದ ಪರಿಣಾಮ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.
‘ಸಾಮಾನ್ಯವಾಗಿ ಈ ರೀತಿಯ ಶಿಶುಗಳು ಬದುಕುವುದೇ ಕಷ್ಟ. ವೈದ್ಯರು, ನರ್ಸಿಂಗ್ ಸಿಬ್ಬಂದಿ ಹಾಗೂ ಪೋಷಕರು ಆರೈಕೆ ಇದಕ್ಕೆ ಕಾರಣ. ಅವಧಿ ಪೂರ್ಣವಾಗುವ ಮುನ್ನವೇ ಜನಿಸಿದ ಶಿಶುಗಳಲ್ಲಿ ಕಡಿಮೆ ತೂಕ, ಉಸಿರಾಟದ ತೊಂದರೆ, ಹಾಲಿನ ಅಜೀರ್ಣತೆ, ನಂಜು, ಮೆದುಳಿನಲ್ಲಿ ರಕ್ತಸ್ರಾವ, ಹೃದಯ ತೊಂದರೆ ಇರುತ್ತವೆ. ಈ ಎಲ್ಲ ಸವಾಲುಗಳನ್ನು ಎದುರಿಸಿ ಮಗುವನ್ನು ಆರೈಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಮನೋಜ್, ಡಾ.ಚೇತನ್, ಡಾ.ಕುಮಾರಸ್ವಾಮಿ ಈ ತಂಡದಲ್ಲಿದ್ದರು. ಮಗುವಿನ ಪೋಷಕರು ವೈದ್ಯರು, ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.