ಕೋಲಾರ: ತಾಲ್ಲೂಕಿನ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಹಾಗೂ ಇನ್ನಿತರ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 40 ಕ್ಕೂ ಅಧಿಕ ಮಂದಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಉಮೇದುವಾರಿಕೆ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. 17 ವಾರ್ಡ್‌ಗಳಿಗೆ ಆ.17ರಂದು ಮತದಾನ ನಡೆಯಲಿದ್ದು, ಚುನಾವಣಾ ಚಟುವಟಿಕೆಗಳು ಬಿರುಸುಗೊಂಡಿವೆ.
ಕಾಂಗ್ರೆಸ್ ಪಕ್ಷದ 12ಅಭ್ಯರ್ಥಿಗಳು ನಾಮಪತ್ರಗಳು ಸಲ್ಲಿಸಿದರೆ, ಮೈತ್ರಿಕೂಟದ 14 ಮಂದಿ ಹಾಗೂ 14 ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ತಮ್ಮ ಬೆಂಬಲಿಗರ ಜೊತೆ ಬಂದು ಚುನಾವಣಾಧಿಕಾರಿಗಳಿಗೆ ದಾಖಲೆ ಪತ್ರಗಳನ್ನು ನೀಡಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 17 ವಾರ್ಡ್‌ಗಳಿದ್ದು, ಇಬ್ಬರು ಚುನಾವಣಾಧಿಕಾರಿಗಳು ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 1ರಿಂದ 9ನೇ ವಾರ್ಡ್‌ಗೆ ಸಹಾಯಕ ಕೃಷಿ ನಿರ್ದೇಶಕ ಮುರಳಿ ಹಾಗೂ ಉಪ ತಹಶೀಲ್ದಾರ್ ಹೇಮಲತಾ, 10ರಿಂದ 17ನೇ ವಾರ್ಡ್‌ಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಾರೆಡ್ಡಿ ಹಾಗೂ ಉಪ ತಹಶೀಲ್ದಾರ್ ಶ್ರೀಕಾಂತ್ ಕಾರ್ಯನಿರ್ವಹಿಸುತ್ತಿದ್ದಾರೆ.
ಆ.6 (ಬುಧವಾರ) ನಾಮಪತ್ರ ಪರಿಶೀಲನೆ ನಡೆಯಲಿದೆ. ಆ.8 (ಶುಕ್ರವಾರ) ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಆ.17ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತ ಎಣಿಕೆಯು ಆ.20ರ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಕೋಲಾರದಲ್ಲಿ ನಡೆಯಲಿದೆ.
ಒಬ್ಬ ಅಭ್ಯರ್ಥಿಗೆ ಚುನಾವಣಾ ವೆಚ್ಚದ ಗರಿಷ್ಠ ಮಿತಿ ₹ 1 ಲಕ್ಷವಾಗಿದ್ದು, ವೆಚ್ಚ ವಿವರಗಳನ್ನು ಪರಿಶೀಲಿಸಲು ಲೆಕ್ಕಪತ್ರ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಪಟ್ಟಣ ಪಂಚಾಯತಿ ಕಚೇರಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.